ನಾಳೆ ಕೋಚಿಮುಲ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ

7

ನಾಳೆ ಕೋಚಿಮುಲ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ

Published:
Updated:
ಕೋಚಿಮುಲ್ ಆಡಳಿತ ಮಂಡಳಿ ಕಚೇರಿ ಕಟ್ಟಡ.

ಕೋಲಾರ: ಕೋಲಾರ–ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ಅಧ್ಯಕ್ಷ ಸ್ಥಾನಕ್ಕೆ ಸೋಮವಾರ (ಜು.16) ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಲಾಭಿ ಚುರುಕುಗೊಂಡಿದೆ.

ಮೊದಲ ಅವದಿಗೆ ಒಕ್ಕೂಟದ ಅಧ್ಯಕ್ಷರಾಗಿ ಗೌರಿಬಿದನೂರಿನ ನಿರ್ದೇಶಕ ಕಾಂತರಾಜ್‌ ಹಾಗೂ ಹಿಂದಿನ ಕಾಂಗ್ರೆಸ್ ಸರ್ಕಾರದಿಂದ ಒಕ್ಕೂಟಕ್ಕೆ ನಾಮನಿರ್ದೇಶನಗೊಂಡಿದ್ದ ಎನ್‌.ಜಿ.ಬ್ಯಾಟಪ್ಪ 2ನೇ ಅವದಿಗೆ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು.

ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ, ನಿಗಮ, ಮಂಡಳಿ, ಸಂಸ್ಥೆಗಳಲ್ಲಿನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಅಧಿಕಾರೇತರ ನಿರ್ದೇಶಕರ ಅವದಿ ಕೊನೆಗೊಂಡಿತು. ಇದರಿಂದಾಗಿ ಕೋಚಿಮುಲ್ ಅಧ್ಯಕ್ಷರಾಗಿದ್ದ ಬ್ಯಾಟಪ್ಪ ರಾಜೀನಾಮೆ ನೀಡಬೇಕಾಯಿತು.

ನಾಮನಿರ್ದೇಶಿತರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವಂತೆ ಸಮ್ಮಿಶ್ರ ಸರ್ಕಾರ ಆದೇಶ ಹೊರಡಿಸಿದರೂ ಬ್ಯಾಟಪ್ಪ ಅಧಿಕಾರದಿಂದ ದೂರ ಸರಿಯಲು ಹಿಂದು ಮುಂದು ನೋಡುತ್ತಿದ್ದರು. ಇದಕ್ಕೆ ಸರ್ಕಾರದಿಂದ ನೋಟಿಸ್ ಸಹ ಬಂದಿತ್ತು. ಆನಂತರ ಕೊನೆಗೂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

ಒಟ್ಟು 17 ಮಂದಿ ನಿರ್ದೇಶಕರಿದ್ದು, ಆ ಪೈಕಿ ಚುನಾಯಿತರು 13, ನಾಮನಿರ್ದೇಶಿತ ಒಬ್ಬರು, ಅಧಿಕಾರಿಗಳು 3 ಮಂದಿ ಹಾಗೂ ಜೆಡಿಎಸ್‌ 4, ಕ್ರಾಂಗ್ರೆಸ್ 9 ಮಂದಿ ನಿರ್ದೇಶಕರಿದ್ದಾರೆ.

ಒಕ್ಕೂಟಕ್ಕೆ ನಾಮನಿರ್ದೇಶಿತ ಸ್ಥಾನಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಸುಬ್ಬಾರೆಡ್ಡಿ ನೇಮಕಗೊಂಡಿದ್ದು, ಅಧ್ಯಕ್ಷ ಸ್ಥಾನಕ್ಕೆ ನಿರ್ದೇಶಕರಾದ ಶಾಸಕ ಕೆ.ವೈ.ನಂಜೇಗೌಡ, ನಿರ್ದೇಶಕರಾದ ಕೆ.ವಿ.ನಾಗರಾಜ್, ರಾಮಕೃಷ್ಣೇಗೌಡ, ರಾಜೇಂದ್ರಗೌಡ ಆಕಾಂಕ್ಷಿಗಳಾಗಿದ್ದಾರೆ.

ಒಕ್ಕೂಟದ ಕೇಂದ್ರ ಕಚೇರಿಯ ಆಡಳಿತ ಮಂಡಳಿ ಸಭಾಂಗಣದಲ್ಲಿ ಸೋಮವಾರ ಬೆಳಿಗ್ಗೆ 9.30ರಿಂದ 11.30ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ 1.30ರಿಂದ 2ರವರೆಗೆ ನಾಮಪತ್ರ ಪರಿಶೀಲನೆ ನಡೆಯಲಿದೆ. 2ರಿಂದ 2.30ರವರೆಗೆ ಅರ್ಹ ಅಭ್ಯರ್ಥಿಗಳನ್ನು ಘೋಷಿಸಲಾಗುತ್ತದೆ.

ಮಧ್ಯಾಹ್ನ 2.30ರಿಂದ 3ರವರೆಗೆ ನಾಮಪತ್ರ ಹಿಂಪಡೆಯಬಹುದಾಗಿದೆ. 3.15ಕ್ಕೆ ನಾಮಪತ್ರ ಹಿಂಪಡೆಯುವ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗುವುದು. ಕಣದಲ್ಲಿರುವ ಅಭ್ಯರ್ಥಿಗಳನ್ನು 3.20ಕ್ಕೆ ಘೋಷಣೆ ಮಾಡಲಿದ್ದು, ಅಗತ್ಯವಿದ್ದರೆ 3.30ರಿಂದ 4.30ರವರೆ ಮತದಾನದ ಮೂಲಕ ಚುನಾವಣೆ ನಡೆಸಲಾಗುತ್ತದೆ. ಬಳಿಕ ಮತ ಎಣಿಕೆ ನಡೆಯುವುದಾಗಿ ಚುನಾವಣಾಧಿಕಾರಿ ವೇಳಾಪಟ್ಟಿ ಪ್ರಕಟಿಸಿದ್ದಾರೆ.

‘ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ವಿಚಾರವಾಗಿ ಸಂಸದ ಕೆ.ಎಚ್.ಮುನಿಯಪ್ಪ ನೇತೃತ್ವದಲ್ಲಿ ಭಾನುವಾರ ಸಭೆ ನಡೆದಿದ್ದು, ಅಭ್ಯರ್ಥಿ ಹೆಸರನ್ನು ಇನ್ನು ಘೋಷಣೆ ಮಾಡಿಲ್ಲ’ ಎಂದು ನಿರ್ದೇಶಕರೊಬ್ಬರು ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !