ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕೆಗೆ ಒತ್ತು ನೀಡಿ ಸಾಧಕರಾಗಿ: ರತ್ನಯ್ಯ

ಮಕ್ಕಳ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಡಿಡಿಪಿಐ ಕಿವಿಮಾತು
Last Updated 31 ಆಗಸ್ಟ್ 2018, 15:28 IST
ಅಕ್ಷರ ಗಾತ್ರ

ಕೋಲಾರ: ‘ಮಕ್ಕಳು ಟಿ.ವಿಯ ದಾಸರಾಗಬಾರದು. ಧಾರಾವಾಹಿಗಳಿಂದ ದೂರವಿದ್ದು, ಕಲಿಕೆಗೆ ಹೆಚ್ಚು ಒತ್ತು ನೀಡಿ ದೇಶ ಮೆಚ್ಚುವ ಸಾಧಕರಾಗಿ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರತ್ನಯ್ಯ ಕಿವಿಮಾತು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಕ್ಕಳ ಚಲನಚಿತ್ರೋತ್ಸವ ಸಮಿತಿ ಸಹಯೋಗದಲ್ಲಿ ಇಲ್ಲಿ ಹಮ್ಮಿಕೊಂಡಿರುವ 2018–19ನೇ ಸಾಲಿನ ಮಕ್ಕಳ ಚಲನಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿ, ‘ದೇಶಕ್ಕಾಗಿ ಹೋರಾಡಿ ಪ್ರಾಣತೆತ್ತ ವೀರ ಯೋಧರು ಹಾಗೂ ರಾಷ್ಟ್ರ ನಾಯಕರ ಆದರ್ಶದ ಜತೆಗೆ ಆತ್ಮಸ್ಥೈರ್ಯ, ನೈತಿಕ ಮೌಲ್ಯ ತುಂಬುವ ಚಲನಚಿತ್ರಗಳನ್ನು ಮಕ್ಕಳಿಗೆ ತೋರಿಸಬೇಕು’ ಎಂದರು.

‘ಟಿ.ವಿ ಹಾಗೂ ಮೊಬೈಲ್‌ ದಾಸರಾಗಿ ಕಲಿಕೆಯಿಂದ ದೂರವಾಗುತ್ತಿರುವ ಮಕ್ಕಳ ಬಗ್ಗೆ ಪೋಷಕರು ಎಚ್ಚರ ವಹಿಸಬೇಕು. ಟಿ.ವಿಯಲ್ಲಿ ಮನಸ್ಸಿನ ಮೇಲೆ ಒಳ್ಳೆಯ ಪರಿಣಾಮ ಬೀರುವ ಮತ್ತು ರಾಷ್ಟ್ರಪ್ರೇಮ ತುಂಬುವ ಕಾರ್ಯಕ್ರಮ ನೋಡಿದರೆ ತಪ್ಪಲ್ಲ. ಆದರೆ, ಧಾರಾವಾಹಿಗಳಿಗೆ ಜೋತುಬಿದ್ದು ಓದಿನ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿ’ ಎಂದು ವಿಷಾದಿಸಿದರು.

ಕೊರತೆ ಕಾಡುತ್ತಿದೆ: ‘ಸುಶಿಕ್ಷಿತರೇ ಇಂದು ದೇಶದ್ರೋಹದ ಚಟುವಟಿಕೆಗಳಲ್ಲಿ ತೊಡಗುತ್ತಿರುವುದು ವಿಷಾದಕರ. ಇಂದಿನ ವಿಷಮ ಸ್ಥಿತಿಯಲ್ಲಿ ಸಂಸ್ಕಾರ, ದೇಶ ಪ್ರೇಮ ಬೆಳೆಸುವ ಶಿಕ್ಷಣಕ್ಕೆ ಒತ್ತು ನೀಡುವ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಕುಟುಂಬಸಮೇತ ನೋಡುವ ಚಿತ್ರಗಳ ಕೊರತೆ ಕಾಡುತ್ತಿದೆ. ಕೇವಲ ಮನರಂಜನೆ ಮತ್ತು ಹಣ ಗಳಿಕೆ ಉದ್ದೇಶದಿಂದ ಚಿತ್ರ ನಿರ್ಮಿಸುವ ಮನೋಭಾವ ಹೆಚ್ಚುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ದಾರಿ ತಪ್ಪಿಸುತ್ತಿದೆ: ‘ಟಿ.ವಿ ಹಾಗೂ ಮೊಬೈಲ್ ವ್ಯಾಮೋಹವು ಮಕ್ಕಳನ್ನು ದಾರಿ ತಪ್ಪಿಸುತ್ತಿದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆಯಲ್ಲಿ ಮಕ್ಕಳು ದೇಸಿತನ ಮರೆಯುತ್ತಿದ್ದಾರೆ. ಮೊಬೈಲ್ ಹಾಗೂ ಇಂಟರ್‌ನೆಟ್‌ ಸೌಲಭ್ಯ ಕೆಟ್ಟ ಉದ್ದೇಶಕ್ಕೆ ಬಳಕೆಯಾಗುತ್ತಿದ್ದು, ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ’ ಎಂದು ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಕಳವಳ ವ್ಯಕ್ತಪಡಿಸಿದರು.

‘ಧೈರ್ಯ, ಸಾಹಸಗಾಥೆ ಹಾಗೂ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಯೋಧರ ಚರಿತ್ರೆ ಒಳಗೊಂಡ ಚಿತ್ರಗಳನ್ನು ನೋಡುವಂತೆ ಮಕ್ಕಳನ್ನು ಪ್ರೇರೇಪಿಸಬೇಕು. ದೇಶಪ್ರೇಮ, ರಾಷ್ಟ್ರಧ್ವಜ, ಹಿರಿಯರನ್ನು ಗೌರವಿಸುವ ಪ್ರವೃತ್ತಿ ಬಲಗೊಳ್ಳಲು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುವ ಉತ್ತಮ ಚಲನಚಿತ್ರಗಳ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಚಿತ್ರಮಂದಿರ ಮಾಹಿತಿ: ‘ಇಲಾಖೆಯು ನಗರದ ಪ್ರಭಾತ್, ಶಾರದಾ, ನಾರಾಯಣಿ, ವೆಂಕಟೇಶ್ವರ ಚಿತ್ರಮಂದಿರದಲ್ಲಿ ಆ.31ರಿಂದ ಸೆ.7ರವರೆಗೆ ಚಲನಚಿತ್ರೋತ್ಸವ ಹಮ್ಮಿಕೊಂಡಿದೆ. ಸ್ಯಾಟಲೈಟ್ ಮೂಲಕ ಚಿತ್ರಗಳು ಪ್ರದರ್ಶನಗೊಳ್ಳಲಿವೆ’ ಎಂದು ಶಿಕ್ಷಣ ಸಂಯೋಜಕ ವೆಂಕಟಾಚಲಪತಿ ಮಾಹಿತಿ ನೀಡಿದರು.

ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಮಕ್ಕಳ ಚಿತ್ರ ಸಂಸ್ಥೆ ವ್ಯವಸ್ಥಾಪಕ ಎಸ್.ರಮೇಶ್‌, ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿ ಮಂಜುನಾಥ್, ಶಿಕ್ಷಕ ಆನಂದ್‌, ಪ್ರಭಾತ್ ಚಿತ್ರಮಂದಿರದ ಮಾಲೀಕ ಅಶ್ವತ್ಥ್‌, ವ್ಯವಸ್ಥಾಪಕ ರವಿಶಂಕರ್, ಹಾಜರಿದ್ದರು.

* 12 ಸಾವಿರ ವಿದ್ಯಾರ್ಥಿಗಳಿಗೆ ಚಲನಚಿತ್ರೋತ್ಸವ
* 13 ಚಿತ್ರಮಂದಿರಗಳಲ್ಲಿ ಪ್ರದರ್ಶನ
* ₹ 15 ಪ್ರತಿ ವಿದ್ಯಾರ್ಥಿಗೆ ಟಿಕೆಟ್‌ ದರ
* 8 ಚಿತ್ರಗಳು ಯುಎಫ್‌್ಒ ತಾಂತ್ರಿಕತೆಯಲ್ಲಿ ಪ್ರದರ್ಶನ 
* 6 ಚಿತ್ರಗಳು ಕ್ಯೂಬ್ ತಾಂತ್ರಿಕತೆಯಲ್ಲಿ ಪ್ರದರ್ಶನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT