ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರ ಕ್ಷೇತ್ರದಿಂದ ರೈತರ ಸಬಲೀಕರಣ

ಸಾಲ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಶ್ರೀನಿವಾಸಗೌಡ ಅಭಿಪ್ರಾಯ
Last Updated 27 ಸೆಪ್ಟೆಂಬರ್ 2019, 13:16 IST
ಅಕ್ಷರ ಗಾತ್ರ

ಕೋಲಾರ: ‘ಸಹಕಾರ ಕ್ಷೇತ್ರದಿಂದ ಮಾತ್ರ ರೈತರ ಹಾಗೂ ಮಹಿಳೆಯರ ಸಬಲೀಕರಣ ಸಾಧ್ಯ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು.

ಡಿಸಿಸಿ ಬ್ಯಾಂಕ್ ವತಿಯಿಂದ ತಾಲ್ಲೂಕಿನ ಮಂಗಸಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಸಹಕಾರಿ ಬ್ಯಾಂಕ್‌ಗಳು ಪ್ರತಿ ಹಂತದಲ್ಲೂ ರೈತರ ನೆರವಿಗೆ ಬರುತ್ತಿವೆ. ವಾಣಿಜ್ಯ ಬ್ಯಾಂಕ್‌ಗಳು ರೈತರಿಂದ ಠೇವಣಿ ಪಡೆದು ಶ್ರೀಮಂತರಿಗೆ ಸಾಲ ನೀಡುತ್ತವೆ. ಬಡವರು ಸಾಲಕ್ಕಾಗಿ ಬ್ಯಾಂಕ್ ಬಳಿ ಹೋದರೆ ಕತ್ತು ಹಿಡಿದು ಹೊರ ನೂಕುತ್ತಾರೆ’ ಎಂದು ಕಿಡಿಕಾರಿದರು.

‘ಸಹಕಾರಿ ಬ್ಯಾಂಕ್‌ಗಳು ಗ್ರಾಮೀಣ ಭಾಗದಿಂದ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದವರೆಗೂ ಕಾರ್ಯ ನಿರ್ವಹಿಸುತ್ತಿವೆ. ಸೊಸೈಟಿಗಳು ರೈತರ ಬೆಳೆಗಳಿಗೆ ಅಗತ್ಯವಿರುವ ರಸಗೊಬ್ಬರವನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತವೆ. ರೈತರು ಇದರ ಪ್ರಯೋಜನ ಪಡೆಯಬೇಕು’ ಎಂದು ಸಲಹೆ ನೀಡಿದರು.

‘ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಪ್ರಮುಖ. ಸಾಲವನ್ನು ಸದುದ್ದೇಶಕ್ಕೆ ಬಳಸಿ ಪ್ರಾಮಾಣಿಕವಾಗಿ ಮರುಪಾವತಿ ಮಾಡಬೇಕು. ಸಾಲ ಹಿಂದಿರುಗಿಸದಿದ್ದರೆ ಮೋಸ ಮಾಡಿದಂತೆ. ಯಾವುದೇ ಬ್ಯಾಂಕ್‌ಗಳು ಶೂನ್ಯ ಬಡ್ಡಿ ದರದಲ್ಲಿ ಸಾಲ ಕೊಡುವುದಿಲ್ಲ. ಮಹಿಳೆಯರು ಬ್ಯಾಂಕ್‌ಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಡಿಸಿಸಿ ಬ್ಯಾಂಕ್‌ನಲ್ಲೇ ಹಣಕಾಸು ವಾಹಿವಾಟು ನಡೆಸಬೇಕು’ ಎಂದರು.

ಕನಸು ನನಸಾಗಿಸಿ: ‘ಮಹಿಳೆಯರು ಇನ್ನಾದರೂ ಎಚ್ಚೆತ್ತು ಚುನಾವಣೆಗಳಲ್ಲಿ ಹೊರಗಿನ ವ್ಯಕ್ತಿಗಳನ್ನು ತಿರಸ್ಕರಿಸಬೇಕು. ಚುನಾವಣೆ ವೇಳೆ ಬೆಂಗಳೂರಿನಿಂದ ಜಿಲ್ಲೆಗೆ ಬಂದು ಸ್ಪರ್ಧೆ ಮಾಡುವ ಭೂಗಳ್ಳರು, ಭ್ರಷ್ಟರಿಂದ ಹಣ ಪಡೆದು ಗೆಲ್ಲಿಸಬಾರದು. ಜಿಲ್ಲೆಯಲ್ಲಿ ಸಿ.ಬೈರೇಗೌಡ, ವೆಂಕಟಗಿರಿಯಪ್ಪ, ಎಂ.ವಿ.ಕೃಷ್ಣಪ್ಪ ಅವರಂತಹ ರಾಜಕೀಯ ಮುತ್ಸದಿಗಳು ಜನಪರ ಆಡಳಿತ ನೀಡಿದ್ದಾರೆ. ಅವರ ಕನಸು ನನಸಾಗಿಸಬೇಕು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂಡಗೌಡ ಹೇಳಿದರು.

‘ಹೊರಗಿನ ವ್ಯಕ್ತಿಗಳು ಜಿಲ್ಲೆಗೆ ಬಂದು ಇಲ್ಲಿನ ವ್ಯವಸ್ಥೆ ನಾಶ ಮಾಡುತ್ತಿದ್ದಾರೆ. ಅವರಿಂದ ಕ್ಷೇತ್ರ ಅಭಿವೃದ್ಧಿ ಆಗಲ್ಲ. ಜನ ವಿವೇಕಯುತವಾಗಿ ಮತ ಚಲಾಯಿಸಿ ಚುನಾವಣಾ ವ್ಯವಸ್ಥೆ ಸರಿಪಡಿಸಬೇಕು. ಬ್ಯಾಂಕ್‌ನಿಂದ ನೀಡಿರುವ ಸಾಲಕ್ಕಿಂತ ಠೇವಣಿ ಹಣ ತುಂಬಾ ಕಡಿಮೆಯಿದೆ. ರೈತರು ಸಾಲಕ್ಕಾಗಿ ಡಿಸಿಸಿ ಬ್ಯಾಂಕ್‌ಗೆ ಬರುತ್ತಾರೆ, ಆದರೆ, ವಾಣಿಜ್ಯ ಬ್ಯಾಂಕ್‌ಗಳಲ್ಲಿ ಉಳಿತಾಯದ ಹಣ ಠೇವಣಿ ಇಡುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಹಕರಿಸಬೇಕು: ‘ಈಗಾಗಲೇ ಠೇವಣಿ ಸಭೆ ನಡೆಸಿದ್ದು, ಸಾಕಷ್ಟು ಮಂದಿ ಡಿಸಿಸಿ ಬ್ಯಾಂಕ್‌ನಲ್ಲಿ ಹಣ ಠೇವಣಿ ಇಡಲು ಮುಂದೆ ಬಂದಿದ್ದಾರೆ. ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಸ್ಥಿತಿವಂತ ರೈತರಿದ್ದಾರೆ. ಈ ರೈತರು ತಮ್ಮ ಉಳಿತಾಯದ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು ಬೇರೆಯವರಿಗೆ ಸಾಲ ಕಲ್ಪಿಸಲು ಸಹಕರಿಸಬೇಕು’ ಎಂದು ಬ್ಯಾಂಕ್‌ ನಿರ್ದೇಶಕ ಸೋಮಣ್ಣ ಮನವಿ ಮಾಡಿದರು.

55 ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ ₹ 1.50 ಕೋಟಿ ಸಾಲ ವಿತರಿಸಲಾಯಿತು. ಮಂಗಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಂ.ಎಲ್‌.ಅನಿಲ್‌ಕುಮಾರ್‌, ವ್ಯವಸ್ಥಾಪಕ ರಮೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT