ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯ ನೆಲೆಯ ಭಕ್ತಿಯೇ ಶ್ರೇಷ್ಠ

ಶರಣ ಸಂಗಮದಲ್ಲಿ ಶಿವಮೂರ್ತಿ ಮುರುಘಾ ಶರಣರು
Last Updated 7 ಮಾರ್ಚ್ 2018, 9:36 IST
ಅಕ್ಷರ ಗಾತ್ರ

ಚಿತ್ರದುರ್ಗ: ಯಾರಿಗೂ ತೊಂದರೆ ಕೊಡದಂತೆ ಮಾನವೀಯ ನೆಲೆಯ ಮೇಲೆ ಭಕ್ತಿ ಮೆರೆಯಬೇಕು. ಇದೇ ಅತ್ಯಂತ ಶ್ರೇಷ್ಠವಾದುದು ಎಂದು ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಇಲ್ಲಿ ಸೋಮವಾರ ಬಸವಕೇಂದ್ರ ಮುರುಘಾಮಠ, ಎಸ್‍ಜೆಎಂ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಿಂದ ಹಮ್ಮಿಕೊಂಡಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ ‘ಅಹಿಂಸೆ ಮತ್ತು ಅಭಿವೃದ್ಧಿ’ ವಿಷಯ ಕುರಿತು ಮಾತನಾಡಿದರು.

ಅಧ್ಯಾತ್ಮ, ಹಠಯೋಗದಿಂದ ಕೆಲವರು ತಮ್ಮ ದೇಹ ದಂಡಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ಉಪವಾಸದ ಮೂಲಕ ಭಕ್ತಿ ಸಮರ್ಪಿಸುತ್ತಾರೆ. ಕಾರುಣ್ಯ ಭರಿತ ಹೃದಯ ಮನುಷ್ಯನದಾಗಬೇಕು. ಅಕ್ಕಮಹಾದೇವಿ ಇದಕ್ಕೆ ಉತ್ತಮ ನಿದರ್ಶನ ಎಂದರು.

ಪ್ರಸ್ತುತ ದಿನಗಳಲ್ಲಿ ಅಭಿವೃದ್ಧಿ ಇಲ್ಲದಿರುವ ಅಧ್ಯಾತ್ಮದ ಕಡೆ ಅನೇಕರು ಜಾರುತ್ತಿದ್ದಾರೆ. ಈ ಮಾರ್ಗ ಎಂದೆಂದಿಗೂ ಉಪಯೋಗವಿಲ್ಲದ್ದು. ಕಾರುಣ್ಯಭರಿತವಾದ ಧರ್ಮ ದೊಡ್ಡ ಆದರ್ಶ. ಇದು 900 ವರ್ಷಗಳ ಹಿಂದೆ ನಡೆದಿದೆ. ಅಂದು ಬಸವಾದಿ ಶರಣರು ಬೆಳಿಗ್ಗೆಯಿಂದ ಸಂಜೆವರೆಗೂ ಕಾಯಕದಲ್ಲಿ ತೊಡಗಿ ಅಭಿವೃದ್ಧಿ ಮಾಡಿ ತೋರಿಸಿದರು. ಇದನ್ನು ಪ್ರತಿಯೊಬ್ಬರು ಅನುಸರಿಸಬೇಕು ಎಂದು ಸಲಹೆ ನೀಡಿದರು.

ಮೊಳಕಾಲ್ಮುರು ಶಾಸಕ ತಿಪ್ಪೇಸ್ವಾಮಿ ಮಾತನಾಡಿ, ‘ಅಭಿವೃದ್ಧಿ ಪರ ಆಲೋಚನೆಗಳು ಬಂದರೆ ಹಿಂಸೆ ತಾನಾಗಿಯೇ ಕಡಿಮೆಯಾಗುತ್ತದೆ. ಬಸವಾದಿ ಶರಣರು ಅಹಿಂಸಾ ಮಾರ್ಗದಿಂದ ದಾಸೋಹ, ಕಾಯಕದ ಮೂಲಕ ಅಭಿವೃದ್ಧಿಗೆ ನಾಂದಿ ಹಾಡಿದ್ದರು’ ಎಂದರು.

ಟಿ.ಎಂ.ಪಂಚಾಕ್ಷರಿ ಶಾಸ್ತ್ರಿ ಮಾತನಾಡಿ, ‘ದೈಹಿಕ, ಮಾನಸಿಕ ಹೀಗೆ ಹಿಂಸೆಯಲ್ಲಿ ಹಲವು ವಿಧಾನಗಳಿವೆ. ಇತರರಿಗೆ ನೋವನ್ನು ಕೊಟ್ಟು ತಾನು ಬದುಕಬೇಕೆಂಬುದು ಕೆಲವರ ಇಚ್ಛೆಯಾಗಿದೆ. ಸದಾಕಾಲ ಸಕಲ ಜೀವರಾಶಿಗೆ ಲೇಸನ್ನು ಬಯಸಿದವರು ಬಸವಾದಿ ಶರಣರು’ ಎಂದು ಹೇಳಿದರು.

ನಾಗಗೊಂಡನಹಳ್ಳಿಯ ಬಸವಕಿರಣ ಸ್ವಾಮೀಜಿ, ಬ್ಯಾಡಗಿಯ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಜನಪದಲೋಕ ರಾಜ್ಯಪ್ರಶಸ್ತಿ ಪುರಸ್ಕೃತ ಮೆ.ನಾ.ಬೊಮ್ಮಲಿಂಗಪ್ಪ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಎಸ್‍ಜೆಎಂ ವಿದ್ಯಾಪೀಠದ ಕಾರ್ಯನಿರ್ವಹಣಾ ನಿರ್ದೇಶಕ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಕಾಲೇಜಿನ ಪ್ರಾಚಾರ್ಯೆ ಗಂಗಾಂಬಿಕೆ ಇದ್ದರು. ಶ್ರೀಧರ್ ವಚನ ಪ್ರಾರ್ಥಿಸಿದರು. ಲತಾ ಸ್ವಾಗತಿಸಿದರು.
***
‘ವಿದ್ಯಾವಂತರಿಂದಲೇ ಹಿಂಸೆ’
‘ವಿದ್ಯಾವಂತರೇ ಇಂದು ಹೆಚ್ಚು ಹಿಂಸೆ ನೀಡುತ್ತಿದ್ದಾರೆ. ಆಸ್ತಿ, ಹಣ ಗಳಿಸಬೇಕೆಂದು ಇತರರನ್ನು ತುಳಿಯುವ ಪ್ರಯತ್ನದಲ್ಲಿದ್ದಾರೆ. ಜನ ಮೂಕ ಪ್ರಾಣಿಗಳನ್ನು ಬಲಿ ಕೊಡುತ್ತಿದ್ದಾರೆ. ಅವರಿಂದ ಬಲಿಷ್ಠವಾದ ಸಿಂಹ, ಹುಲಿ, ಚಿರತೆಯನ್ನು ಬಲಿಕೊಡಲು ಸಾಧ್ಯವೇ? ಜೀವವನ್ನು ವಾಪಾಸ್‌ ತರಲು ಸಾಧ್ಯವಿಲ್ಲ ಎಂದಾದರೆ, ಅದನ್ನು ತೆಗೆಯುವ ಅಧಿಕಾರ ನಮಗೆ ಇದೆಯೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಟಿ.ಎಂ.ಪಂಚಾಕ್ಷರಿ ಶಾಸ್ತ್ರಿ ಕಿವಿಮಾತು ಹೇಳಿದರು.
***
ಹಿಂಸೆಯ ಮೂಲಕ ಭಕ್ತಿ ತೋರಿಸುವವರು ಬಹಳಷ್ಟು ಮಂದಿ ಇದ್ದಾರೆ. ಎಂದಿಗೂ ಹಿಂಸೆಯ ರೂಪ ಉತ್ತಮವಲ್ಲ.
– ಶಿವಮೂರ್ತಿ ಮುರುಘಾ ಶರಣರು
ನಮ್ಮಲ್ಲಿ ಶಿಕ್ಷಣ, ಸಂಸ್ಕೃತಿ ಕಡಿಮೆ ಇದೆ. ಅಭಿವೃದ್ಧಿಗೆ ಮೂಲವೇ ಶಿಕ್ಷಣವಾಗಿದೆ. ಈ ಕುರಿತು ಜಾಗೃತಿ ಮೂಡಿಸಿದರೆ ದೇಶ ಪ್ರಗತಿಯತ್ತ ಸಾಗುತ್ತದೆ.
- ಟಿ.ಎಂ.ಪಂಚಾಕ್ಷರಿ ಶಾಸ್ತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT