ಭಾನುವಾರ, ಸೆಪ್ಟೆಂಬರ್ 26, 2021
21 °C
ಹರಟಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ಅಶೋಕ್ ಹೇಳಿಕೆ

ಕೋಲಾರ: 44 ಶಾಲೆಯಲ್ಲಿ ಆಂಗ್ಲ ಮಾಧ್ಯಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲ ಭಾಷೆಯ ಅನಿವಾರ್ಯತೆ ಇದ್ದು, ಬಡ ಕುಟುಂಬದ ಪ್ರತಿ ಮಗುವಿಗೂ ಗುಣಾತ್ಮಕ ಶಿಕ್ಷಣ ಒದಗಿಸುವ ಉದ್ದೇಶದಿಂದ ಜಿಲ್ಲೆಯ 44 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ತಿಳಿಸಿದರು.

ತಾಲ್ಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಒಂದನೇ ತರಗತಿಗೆ ಆಂಗ್ಲ ಮಾಧ್ಯಮ ಆರಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಸರ್ಕಾರಿ ಶಾಲೆಗಳಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ ಆಂಗ್ಲ ಮಾಧ್ಯಮ ಆರಂಭ ಆಗುತ್ತಿರುವುದರಿಂದ ಪಾಲಕರಲ್ಲಿ ಜಾಗೃತಿ ಮೂಡಿಸಬೇಕಿದೆ. ಆಗ ಮಾತ್ರ ನಿರೀಕ್ಷೆಗೂ ಮೀರಿ ದಾಖಲಾತಿ ಆಗುತ್ತದೆ. ಶಾಲೆಗಳಲ್ಲಿ ದೊರೆಯುವ ಸೌಲಭ್ಯ, ಶಿಕ್ಷಣದ ಗುಣಮಟ್ಟ ಸೇರಿ ವಿಶೇಷತೆಗಳ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿಕೊಡಬೇಕು. ಮನೆ ಮನೆ ಭೇಟಿ, ಜಾಥಾದ ಮೂಲಕ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

‘ಸರ್ಕಾರಿ ಶಾಲೆಗಳಲ್ಲಿ ರೇಡಿಯೊ ತರಗತಿ, ಅನುಭವಿ ಶಿಕ್ಷಕರಿಂದ ಬೋಧನೆ, ಆಕರ್ಷಕ ಶಾಲಾ ವಾತಾವರಣ, ಉಚಿತ ಪಠ್ಯಪುಸ್ತಕ, ಕ್ಷೀರ ಭಾಗ್ಯ, ಮಧ್ಯಾಹ್ನ ಬಿಸಿಯೂಟ, ಸಮವಸ್ತ್ರ, ಶೂ, ಸಾಕ್ಸ್, ವಿದ್ಯಾರ್ಥಿವೇತನ ಸೌಲಭ್ಯ ಕಲ್ಪಿಸಲಾಗಿದೆ. ಜತೆಗೆ ಆಂಗ್ಲ ಮಾಧ್ಯಮ ಆರಂಭಿಸುತ್ತಿರುವುದು ಸಂತಸದ ವಿಷಯವಾಗಿದ್ದು, ಪೋಷಕರು ಈ ಬಗ್ಗೆ ಚಿಂತನ ಮಂಥನ ನಡೆಸಿ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು’ ಎಂದರು.

ಸ್ವಾಗತಾರ್ಹ: ‘ಆಂಗ್ಲ ಮಾಧ್ಯಮದ ಆರಂಭ ಸ್ವಾಗತಾರ್ಹ. ಪೋಷಕರು ಖಾಸಗಿ ಶಾಲಾ ವ್ಯಾಮೋಹ ಬಿಟ್ಟು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲು ಮಾಡಬೇಕು. ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ’ ಎಂದು ಹರಟಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರೇಂದ್ರಬಾಬು ಮೆಚ್ಚುಗೆ ವ್ಯಕ್ತಪಡಿಸಿದರು.

‘ಗ್ರಾ.ಪಂ ಕೇಂದ್ರದ ಸರ್ಕಾರಿ ಹಿರಿಯ ಮತ್ತು ಪ್ರೌಢ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರದ ಸೂಚನೆಯಂತೆ ಶಾಲಾ ಮುಖ್ಯೋಪಾಧ್ಯಾಯರು ಕ್ರಿಯಾಯೋಜನೆ ರೂಪಿಸಿ ಕೊಡಬೇಕು. ಶಾಲೆಗಳು ಚಟುವಟಿಕೆ ಆಧಾರಿತ ಆಕರ್ಷಕ ಕೇಂದ್ರಗಳಾಗಬೇಕು’ ಎಂದು ಪಿಡಿಒ ಡಿ.ನಾಗರಾಜ್ ಆಶಿಸಿದರು.

ಶಿಕ್ಷಕರು ಉತ್ಸುಕ: ‘ಶಾಲೆಯಲ್ಲಿ ಒಂದನೇ ತರಗತಿಗೆ ಇಷ್ಟೂ ದಿನಗಳ ಕಾಲ ಕನ್ನಡ ಮಾಧ್ಯಮ ಮಾತ್ರ ಬೋಧನೆ ಮಾಡಲಾಗುತ್ತಿತ್ತು. ಈಗ ಆಂಗ್ಲ ಮಾಧ್ಯಮವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಪ್ರಾಮಾಣಿಕ ಪ್ರಯತ್ನದಲ್ಲಿ ಶಿಕ್ಷಕರು ಉತ್ಸುಕರಾಗಿದ್ದಾರೆ. ಪೋಷಕರು ಸರ್ಕಾರಿ ಸೌಲಭ್ಯಗಳ ಸದುಪಯೋಗ ಪಡೆಯಬೇಕು’ ಎಂದು ಶಾಲೆಯ ಮುಖ್ಯೋಪಾಧ್ಯಾಯ ಜಿ.ಶ್ರೀನಿವಾಸ್ ಮನವಿ ಮಾಡಿದರು.

ಗ್ರಾ.ಪಂ ಸದಸ್ಯ ನಾರಾಯಣಸ್ವಾಮಿ, ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಡಿ.ಮಂಜುನಾಥ್, ಸಮೂಹ ಸಂಪನ್ಮೂಲ ವ್ಯಕ್ತಿ ಜಿ.ವಿ.ಗಂಗಾಧರ್, ಶಾಲೆಯ ಶಿಕ್ಷಕರಾದ ಪಿ.ಎಂ.ಗೋವಿಂದಪ್ಪ, ಎಂ.ಆರ್.ಮೀನಾ, ಕೆ.ಸೊಣ್ಣೇಗೌಡ, ಎಂ.ಮುನಿಯಪ್ಪ, ಕೆ.ಮಮತಾ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು