ಗುರುವಾರ , ಮೇ 19, 2022
20 °C
ಸ್ಕೌಟ್ಸ್-ಗೈಡ್ಸ್ ಸಂಸ್ಥೆ ಜಿಲ್ಲಾ ಅಧ್ಯಕ್ಷ ಬಿಸಪ್ಪಗೌಡ ಅಭಿಪ್ರಾಯ

ಧನಾತ್ಮಕ ಶಿಕ್ಷಣದಿಂದ ಜೀವನ ಕೌಶಲ ವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸಂತಸದಿಂದ ಹಾಗೂ ಧನಾತ್ಮಕವಾಗಿ ಪಡೆದ ಶಿಕ್ಷಣದಿಂದ ಮಾತ್ರ ಜೀವನ ಕೌಶಲ ವೃದ್ಧಿಸಿಕೊಳ್ಳಬಹುದು’ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಅಧ್ಯಕ್ಷ ಬಿಸಪ್ಪಗೌಡ ಅಭಿಪ್ರಾಯಪಟ್ಟರು.

ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ, ಜನತಾ ಪ್ರೌಢ ಶಾಲೆ ಮತ್ತು ರೋಟರಿ ಕೋಲಾರ ನಂದಿನಿ ಸಂಸ್ಥೆ ಸಹಯೋಗದಲ್ಲಿ ತಾಲ್ಲೂಕಿನ ಕೆಂಬೋಡಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿ, ‘ಇಂಟರ್‌ನೆಟ್‌ ಮತ್ತು ಮೊಬೈಲ್‌ನ ದಾಸರಾಗಿರುವ ಯುವ ಪೀಳಿಗೆಯು ದೇಸಿ ಸಂಸ್ಕೃತಿ ಮರೆಯುತ್ತಿದೆ’ ಎಂದು ವಿಷಾದಿಸಿದರು.

‘ಯುವಕ, ಯುವತಿಯರು ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆಯಲ್ಲಿ ದಾರಿ ತಪ್ಪುತ್ತಿದ್ದಾರೆ. ಮೊಬೈಲ್‌ ಹಾಗೂ ಇಂಟರ್‌ನೆಟ್‌ ಅನ್ನು ಅವಶ್ಯಕತೆಗೆ ಅನುಗುಣವಾಗಿ ಸದುದ್ದೇಶಕ್ಕೆ ಬಳಸಬೇಕು. ದೇಶದ ಭವಿಷ್ಯ ಯುವ ಸಮುದಾಯದ ಮೇಲೆ ನಿಂತಿದೆ. ದೇಶದ ಅಮೂಲ್ಯ ಆಸ್ತಿಯಾದ ಯುವ ಸಮುದಾಯವು ಸರಿ ದಾರಿಯಲ್ಲಿ ಸಾಗಬೇಕು’ ಎಂದು ಕಿವಿಮಾತು ಹೇಳಿದರು.

‘ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಣವು ಬಾಳಿಗೆ ದಾರಿ ದೀಪ. ಸಂಸ್ಥೆಯು ಶಿಸ್ತು ಹಾಗೂ ಸಂಯಮಕ್ಕೆ ಹೆಸರಾಗಿದೆ. ವಿದ್ಯಾರ್ಥಿಗಳು ವಿರಾಮದ ಸಮಯವನ್ನು ವ್ಯರ್ಥ ಮಾಡದೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಗ್ರಾಮೀಣ ಪರಿಸರದ ಸೊಬಗು ಆನಂದಿಸುವ ಹಾಗೂ ರೈತರ ದಿನಚರಿ ಅರಿಯುವ ಕೆಲಸ ಮಾಡಬೇಕು, ಎಲ್ಲರೂ ಸಂತಸವಾಗಿರಬೇಕು ಹಾಗೂ ಸುತ್ತಲಿನ ಜನರು ಸಂತಸವಾಗಿರುವಂತೆ ವರ್ತಿಸಬೇಕು’ ಎಂದು ಸಲಹೆ ನೀಡಿದರು.

ಮೌಲ್ಯಯುತ ಶಿಕ್ಷಣ: ‘ಎಲ್ಲರೂ ಮೌಲ್ಯಯುತ ಹಾಗು ಜೀವನಾಧಾರಿತ ಶಿಕ್ಷಣ ಪಡೆಯಬೇಕು. ಉತ್ತಮ ಸಂಸ್ಕಾರ ಬೆಳಸಿಕೊಂಡು ಪೂರ್ವಜರ ಸಂಪ್ರದಾಯ ಮತ್ತು ಆಚಾರ ವಿಚಾರ ಮುಂದುವರಿಸಿಕೊಂಡು ಹೋಗಬೇಕು. ಮೂಢ ನಂಬಿಕೆಗಳನ್ನು ವಿಮರ್ಶಿಸುವ ಹಾಗೂ ಪ್ರಶ್ನಿಸುವ ಮನೋಭಾವ ರೂಢಿಸಿಕೊಳ್ಳಬೇಕು’ ಎಂದು ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತ ಕೆ.ವಿ.ಶಂಕರಪ್ಪ ಹೇಳಿದರು.

‘ಇಂದಿಗೂ ಕ್ರಿಯಾಶೀಲವಾಗಿರುವ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಯು ವಿದ್ಯಾರ್ಥಿ ಸಮುದಾಯದಲ್ಲಿ ದೇಶ ಪ್ರೇಮ ಮತ್ತು ಜೀವನ ಮೌಲ್ಯ ಬೆಳೆಸುತ್ತಿದೆ. ಬದಲಾಗುತ್ತಿರುವ ರಾಜಕೀಯ ವ್ಯವಸ್ಥೆಯಿಂದ ಅನೇಕ ಸಂಸ್ಥೆಗಳು ನೇಪಥ್ಯಕ್ಕೆ ಸರಿಯುತ್ತಿವೆ. ಆದರೆ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಬೇರುಗಳು ಇಂದಿಗೂ ಬಲಿಷ್ಠವಾಗಿವೆ’ ಎಂದರು.

ಸಂಪನ್ಮೂಲ ವ್ಯಕ್ತಿ ನಾರಾಯಣಸ್ವಾಮಿ, ಜನತಾ ಪ್ರೌಢ ಶಾಲೆ ಮುಖ್ಯ ಶಿಕ್ಷಕ ರವಿ, ಶಿಕ್ಷಕರಾದ ಅಶೋಕ್, ಮುನಿರಾಜು, ಕೃಷ್ಣಪ್ಪ, ಸ್ಕೌಟ್ಸ್ ಮತ್ತು ಗೈಡ್ಸ್‌ ಸಂಸ್ಥೆಯ ಜಿಲ್ಲಾ ಆಯುಕ್ತ ಕೆ.ಆರ್.ಸುರೇಶ್, ಜಂಟಿ ಕಾರ್ಯದರ್ಶಿ ಉಮಾದೇವಿ, ಸಂಘಟನಾ ಆಯುಕ್ತ ಬಾಬು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.