ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮೀನು– ಸಾಲ ಮಂಜೂರಿಗೆ ತಾರತಮ್ಯ

ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಉದ್ದಿಮೆದಾರರ ಆಕ್ರೋಶ
Last Updated 18 ಜನವರಿ 2019, 13:19 IST
ಅಕ್ಷರ ಗಾತ್ರ

ಕೋಲಾರ: ‘ಆಸಕ್ತ ಉದ್ದಿಮೆದಾರರಿಗೆ ಜಮೀನು ಮತ್ತು ಸಾಲ ಮಂಜೂರು ಮಾಡಲು ರಾಜ್ಯ ಹಣಕಾಸು ಸಂಸ್ಥೆ, ರಾಜ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಹಾಗೂ ಬ್ಯಾಂಕ್ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ’ ಎಂದು ಉದ್ದಿಮೆದಾರರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಹಣಕಾಸು ಸಂಸ್ಥೆಯು ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉದ್ದಿಮೆದಾರರ ಸಮಾವೇಶದಲ್ಲಿ ಮಾತನಾಡಿ, ‘ದೇವರು ವರ ಕೊಟ್ಟರೂ ಪೂಜಾರಿ ವರ ಕೊಡುವುದಿಲ್ಲ ಎನ್ನುವಂತಾಗಿದೆ. ಬ್ಯಾಂಕ್ ಅಧಿಕಾರಿಗಳು ಶ್ರೀಮಂತರಿಗೆ ಮಾತ್ರ ಸಾಲ ಮಂಜೂರು ಮಾಡುತ್ತಾರೆ. ದಲಿತರು ಹಾಗೂ ಬಡವರಿಗೆ ಸಾಲ ಕೊಡಲು ಹಿಂದೇಟು ಹಾಕುತ್ತಾರೆ’ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಹಣಕಾಸು ಸಂಸ್ಥೆ ಪ್ರಧಾನ ವ್ಯವಸ್ಥಾಪಕ ಚಂದ್ರಕುಮಾರ್, ‘ರಾಜ್ಯ ಸರ್ಕಾರವು 2018ರ ಅಕ್ಟೋಬರ್‌ನಿಂದ ಉದ್ದಿಮೆದಾರರ ಪರವಾಗಿ ಹೊಸ ಯೋಜನೆ ಅನುಷ್ಠಾನಗೊಳಿಸಿದ್ದು, ಈಗಾಗಲೇ ಸಾಕಷ್ಟು ಫಲಾನುಭವಿಗಳಿಗೆ ಸೌಕರ್ಯ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

‘ಜಮೀನು ಖರೀದಿ, ಕೈಗಾರಿಕೆ ಸ್ಥಾಪನೆ ಹಾಗೂ ಅಗತ್ಯ ಸಾಮಗ್ರಿಗಳ ಖರೀದಿಗೆ ನಿವ್ವಳ ಶೇ 4ರಷ್ಟು ಬಡ್ಡಿ ದರದಲ್ಲಿ ₹ 5 ಕೋಟಿ ಹಾಗೂ ಪರಿಶಿಷ್ಟ ಉದ್ದಿಮೆದಾರರಿಗೆ ₹ 10 ಕೋಟಿವರೆಗೆ ಸಾಲ ನೀಡಲಾಗುತ್ತಿದೆ. ಈ ಯೋಜನೆಯಡಿ ಯಾವುದೇ ವರ್ಗದ ಉದ್ದಿಮೆದಾರರು ಸಾಲ ಪಡೆದುಕೊಳ್ಳಲು ಅವಕಾಶವಿದೆ’ ಎಂದು ಮಾಹಿತಿ ನೀಡಿದರು.

‘ಜವಳಿ ಉದ್ಯಮಿಗಳಿಗೆ ₹ 15 ಕೋಟಿವರೆಗೆ ಸಾಲ ನೀಡಲಾಗುತ್ತದೆ. ಸಾಮಾನ್ಯ ವರ್ಗದವರಿಗೆ ಶೇ 50ರಷ್ಟು ಹಾಗೂ ಪರಿಶಿಷ್ಟರಿಗೆ ಶೇ 75ರಷ್ಟು ಸಹಾಯಧನವನ್ನು ಸರ್ಕಾರವೇ ನೀಡುತ್ತದೆ’ ಎಂದು ವಿವರಿಸಿದರು.

ಅವಕಾಶ ನೀಡಬೇಕು: ‘ಜಿಲ್ಲೆಯ ಮಾಲೂರು, ನರಸಾಪುರ ಮತ್ತು ವೇಮಗಲ್ ಬಳಿ ಅನೇಕ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಈ ಕೈಗಾರಿಕೆಗಳಿಗೆ ಬಿಡಿ ಭಾಗ ಉತ್ಪಾದಿಸಿ ಕೊಡಲು ಸ್ಥಳೀಯರಿಗೆ ಅವಕಾಶ ನೀಡಬೇಕು. ಆದರೆ, ಕೆಐಎಡಿಬಿ ಹಾಗೂ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಅಧಿಕಾರಿಗಳು ಮುಂಬೈ, ದೆಹಲಿ, ಕೋಲ್ಕತ್ತದ ಉದ್ಯಮಿಗಳಿಗೆ ಅವಕಾಶ ಕೊಡುತ್ತಾರೆ. ಆ ಉದ್ಯಮಿಗಳಂತೆ ಎಲ್ಲಾ ಸೌಕರ್ಯ ಕಲ್ಪಿಸಲು ಸ್ಥಳೀಯರಿಗೆ ಶಕ್ತಿಯಿಲ್ಲ’ ಎಂದು ಉದ್ಯಮಿ ರಾಜಪ್ಪ ಹೇಳಿದರು.

‘ದಲಿತರು ಕಾರ್ಖಾನೆ ಸ್ಥಾಪನೆಗೆ ಅಗತ್ಯವಿರುವ ಜಮೀನಿಗಾಗಿ ಅರ್ಜಿ ಸಲ್ಲಿಸಲು ಕೆಐಎಡಿಬಿ ಕಚೇರಿಗೆ ಹೋದರೆ ಅಧಿಕಾರಿಗಳು ಕ್ಯಾರೆ ಎನ್ನುವುದಿಲ್ಲ. ಎಫ್‌ಕೆಸಿಸಿಐ ಹಾಗೂ ಬ್ಯಾಂಕ್‌ಗಳಲ್ಲಿ ಸಾಲ ಕೊಡುವುದಿಲ್ಲ. ಇವರೆಲ್ಲಾ ರಾಜಕೀಯ ಮಾಡಿ ಬೇಕಾದವರಿಗೆ ಅನುಕೂಲ ಕಲ್ಪಿಸಿ ಕೊಡುತ್ತಾರೆ’ ಎಂದು ಆರೋಪಿಸಿದರು.

ಅರ್ಜಿ ಪರಿಗಣಿಸುವುದಿಲ್ಲ: ‘ಏಕಗವಾಕ್ಷಿ ಸಭೆಯಲ್ಲಿ ಫಲಾನುಭವಿಗಳ ಆಯ್ಕೆ ನಡೆಯುತ್ತದೆ. ಅಲ್ಲಿ ಆಯ್ಕೆಯಾದರೂ ಹಣಕಾಸು ಮತ್ತು ಕೆಐಎಡಿಬಿ ಅಧಿಕಾರಿಗಳು ದಲಿತ ಉದ್ದಿಮೆದಾರರ ಅರ್ಜಿ ಪರಿಗಣಿಸುವುದಿಲ್ಲ’ ಎಂದು ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉದ್ದಿಮೆದಾರರ ಸಂಘದ ಅಧ್ಯಕ್ಷ ಸಿ.ಜಿ.ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದರು.

‘ಹಣಕಾಸು ಸಂಸ್ಥೆ ಹಾಗೂ ಕೆಐಎಡಿಬಿ ಅಧಿಕಾರಿಗಳನ್ನು ಸಭೆಗೆ ಕರೆಸಬೇಕು. ಅಧಿಕಾರಿಗಳಿಲ್ಲದೆ ಚರ್ಚೆ ನಡೆಸಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಬೆಂಗಳೂರಿನಲ್ಲಿ ಉದ್ಯಮಿಯೊಬ್ಬ ಕೈಗಾರಿಕೆ ಆರಂಭಿಸಲು ರಾಜ್ಯ ಹಣಕಾಸು ಸಂಸ್ಥೆಯಿಂದ ₹ 15 ಕೋಟಿ ಸಾಲ ಪಡೆದು ವಿದೇಶಕ್ಕೆ ಓಡಿ ಹೋಗಿದ್ದಾನೆ. ಅಧಿಕಾರಿಗಳು ಆತನಿಂದ ಸಾಲ ವಸೂಲಿ ಮಾಡಲಾಗದೆ ಪರಿತಪಿಸುತ್ತಿದ್ದಾರೆ. ಅಧಿಕಾರಿಗಳಿಗೆ ಅಂತಹ ವಂಚಕರೇ ಸರಿ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT