ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಹೊಂಡ: ಮೂರ್ತಿ ವಿಸರ್ಜನೆ ನಿಷೇಧಿಸಿ

Last Updated 20 ಆಗಸ್ಟ್ 2020, 15:51 IST
ಅಕ್ಷರ ಗಾತ್ರ

ಕೋಲಾರ: ಸುರಕ್ಷತೆ ದೃಷ್ಟಿಯಿಂದ ಕೃಷಿ ಹೊಂಡ ಹಾಗೂ ಚೆಕ್‌ಡ್ಯಾಂಗಳಲ್ಲಿ ಗೌರಿ–ಗಣೇಶ ಮೂರ್ತಿ ವಿಸರ್ಜನೆ ಮಾಡದಂತೆ ಆದೇಶ ಹೊರಡಿಸಬೇಕೆಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಗುರುವಾರ ಕೃಷಿ ಇಲಾಖೆ ಅಧಿಕಾರಿಗಳಿಗೆ ಪರಿಸರಸ್ನೇಹಿ ಗಣೇಶ ಮೂರ್ತಿಯೊಂದಿಗೆ ಮನವಿ ಸಲ್ಲಿಸಿದರು.

‘ಕೃಷಿ ಹೊಂಡಗಳ ಸುತ್ತ ಕಡ್ಡಾಯವಾಗಿ ತಂತಿ ಬೇಲಿ ಅಳವಡಿಸಬೇಕೆಂದು ಸರ್ಕಾರದ ಆದೇಶವಿದೆ. ಆದರೂ ಜಿಲ್ಲೆಯಲ್ಲಿ ಬಹುಪಾಲು ಕೃಷಿ ಹೊಂಡಗಳ ಸುತ್ತ ತಂತಿ ಬೇಲಿ ಹಾಕಿಲ್ಲ. ಕೃಷಿ ಹೊಂಡಗಳಲ್ಲಿ ಈಜಲು, ನೀರು ಕುಡಿಯಲು ಹೋಗಿ ಸಾಕಷ್ಟು ಮಂದಿ ಮೃತಪಟ್ಟಿದ್ದಾರೆ. ಜಾನುವಾರು ಸಹ ಮೃತಪಟ್ಟಿವೆ’ ಎಂದು ಸಂಘಟನೆ ಸದಸ್ಯರು ಹೇಳಿದರು.

‘ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವುದರಿಂದ ಕೃಷಿ ಹೊಂಡ ಹಾಗೂ ಚೆಕ್‌ಡ್ಯಾಂಗಳು ಭರ್ತಿಯಾಗಿವೆ. ಕೃಷಿ ಹೊಂಡಗಳ ಬಳಿ ಸುರಕ್ಷತಾ ಕ್ರಮ ಕೈಗೊಳ್ಳದ ಕಾರಣ ಮೂರ್ತಿ ವಿಸರ್ಜನೆ ವೇಳೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಹೆಚ್ಚು. ಆದ ಕಾರಣ ಕೃಷಿ ಹೊಂಡದಲ್ಲಿ ಮೂರ್ತಿ ವಿಸರ್ಜನೆಗೆ ಅವಕಾಶ ಕೊಡಬಾರದು’ ಎಂದು ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮನವಿ ಮಾಡಿದರು.

‘ಕೊರೊನಾ ಸೋಂಕಿನ ಕಾರಣಕ್ಕೆ ನಗರ ಪ್ರದೇಶದಿಂದ ಸಾಕಷ್ಟು ಮಂದಿ ಗ್ರಾಮೀಣ ಭಾಗಕ್ಕೆ ವಲಸೆ ಬಂದಿದ್ದು, ಈ ಬಾರಿ ಗೌರ–ಗಣೇಶ ಹಬ್ಬದ ಆಚರಣೆ ಜೋರಾಗಿರುತ್ತದೆ. ಇದರಿಂದ ಮೂರ್ತಿ ವಿಸರ್ಜನೆ ವೇಳೆ ಅಪಾಯದ ಸಾಧ್ಯತೆಯೂ ಹೆಚ್ಚು’ ಎಂದು ಹೇಳಿದರು.

ಕರಪತ್ರ ಹೊರಡಿಸಿ: ‘ಕೃಷಿ ಹೊಂಡ ಹಾಗೂ ಚೆಕ್‌ಡ್ಯಾಂಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡದಂತೆ ಇಲಾಖೆಯಿಂದ ಕರಪತ್ರ ಹೊರಡಿಸಿ ಜಾಗೃತಿ ಮೂಡಿಸಬೇಕು. ಮೂರ್ತಿ ವಿಸರ್ಜನೆ ವೇಳೆ ಯಾವುದೇ ಅನಾಹುತ ಸಂಭವಿಸಿದರೆ ಅದಕ್ಕೆ ಮಾಲೀಕರನ್ನೇ ಹೊಣೆಗಾರರನ್ನಾಗಿಸಿ ಶಿಸ್ತುಕ್ರಮ ಜರುಗಿಸಬೇಕು’ ಎಂದು ಸಂಘಟನೆ ಸದಸ್ಯರು ಕೋರಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಳಿನಿಗೌಡ, ಸದಸ್ಯರಾದ ಮಂಜುನಾಥ್, ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ, ಅನಿಲ್, ಸಾಗರ್, ರಾಮಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT