ಶನಿವಾರ, ಡಿಸೆಂಬರ್ 7, 2019
16 °C
ಕಾರ್ಯಾಗಾರದಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಹೇಳಿಕೆ

ಜಿ.ಪಂ ಸಿಇಒ ಬಳಿಗೆ ರೈತರ ನಿಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೃಷಿ, ತೋಟಗಾರಿಕೆ ಬೆಳೆಗಳಿಗೆ ನೀಡುವ ಸಹಾಯಧನ, ಬೆಳೆ ನಷ್ಟ ಪರಿಹಾರ ಮತ್ತು ವೈಯಕ್ತಿಕ ಬೆಳೆ ವಿಮೆ ಸಮಸ್ಯೆ ಪರಿಹಾರದ ಸಂಬಂಧ ರೈತರ ನಿಯೋಗದೊಂದಿಗೆ ಡಿ.4ರಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡುತ್ತೇವೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ತಿಳಿಸಿದರು.

ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರಿ ಒಕ್ಕೂಟ, ಡಿಸಿಸಿ ಬ್ಯಾಂಕ್, ತೋಟಗಾರಿಕೆ ಮತ್ತು ಸಹಕಾರ ಇಲಾಖೆ ಸಹಯೋಗದಲ್ಲಿ ಇಲ್ಲಿ ಸೋಮವಾರ ರೈತರಿಗೆ ಹಮ್ಮಿಕೊಂಡಿದ್ದ ಆಲೂಗಡ್ಡೆಗೆ ಬರುವ ಕೀಟ ಬಾಧೆ, ರೋಗ ತಡೆ ಹಾಗೂ ಸರ್ಕಾರದ ಸೌಲಭ್ಯ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

‘ಆಲೂಗಡ್ಡೆ ಸೇರಿದಂತೆ ತೋಟಗಾರಿಕೆ ಬೆಳೆಗಳಲ್ಲಿ ವೈಯಕ್ತಿಕವಾಗಿ ರೈತರಿಗೆ ಆಗುವ ಬೆಳೆ ನಷ್ಟಕ್ಕೆ ವಿಮೆ ಸೌಲಭ್ಯ ಕಲ್ಪಿಸುವುದು, ಆಲೂಗಡ್ಡೆ ಬೆಳೆಯುವ ಎಲ್ಲಾ ಬೆಳೆಗಾರರಿಗೆ ಬಿತ್ತನೆ ಬೀಜ, ಔಷಧವನ್ನು ಸಬ್ಸಿಡಿ ದರದಲ್ಲಿ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ’ ಎಂದು ಹೇಳಿದರು.

‘ಬೆಳೆ ವಿಮೆ ಯೋಜನೆಯಲ್ಲಿ ಯಾವುದೋ ಒಂದು ಹೋಬಳಿ ಅಥವಾ ಗ್ರಾಮದಲ್ಲಿನ ಬೆಳೆ ನಷ್ಟವನ್ನು ಲೆಕ್ಕಕ್ಕೆ ತೆಗೆದುಕೊಂಡು ಸಾರ್ವತ್ರೀಕರಣಗೊಳಿಸುವುದರಿಂದ ಪರಿಹಾರ ಪಡೆಯುವಲ್ಲಿ ರೈತರು ವಂಚಿತರಾಗುತ್ತಿದ್ದಾರೆ. ವಾಹನ, ಜೀವ ವಿಮೆಯಂತೆ ಪ್ರತಿ ರೈತನ ಬೆಳೆ ಹಾನಿ ಆಧರಿಸಿ ಪರಿಹಾರ ನೀಡಿದರೆ ಮಾತ್ರ ಅನುಕೂಲ. ಈ ಬಗ್ಗೆ ಜಿ.ಪಂ ಸಿಇಒ ಬಳಿ ಪ್ರಸ್ತಾವ ಸಲ್ಲಿಸಬೇಕು’ ಎಂದರು.

‘ಬೆಳೆ ಪರಿಹಾರದ ಪ್ರಸ್ತಾವ ಸಂಬಂಧ ಸರ್ಕಾರದ ಮಟ್ಟದಲ್ಲಿ ಸಮಸ್ಯೆ ಬಗೆಹರಿಯಬೇಕಿರುವುದರಿಂದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ಶಾಸಕರನ್ನು ಒಳಗೊಂಡಂತೆ ಸರ್ಕಾರದ ಬಳಿ ನಿಯೋಗ ಹೋಗಬೇಕು. ಜಿಲ್ಲೆಯ ಪ್ರಮುಖ ಬೆಳೆಗಳಿಗೆ ವಿಮೆ ಸೌಲಭ್ಯ ನೀಡಿಕೆಯಲ್ಲಿ ಇರುವ ತಾಂತ್ರಿಕ ಸಮಸ್ಯೆ ನಿವಾರಣೆಯಾಗಬೇಕು’ ಎಂದು ಒತ್ತಾಯಿಸಿದರು.

ಅಂಗಮಾರಿ ರೋಗ: ‘ಮೋಡ ಅಥವಾ ಮಳೆಯ ವಾತಾವರಣದಲ್ಲಿ ಆಲೂಗಡ್ಡೆ ಬೆಳೆಗೆ ಅಂಗಮಾರಿ ರೋಗ ಬಹು ಬೇಗ ವ್ಯಾಪಿಸುತ್ತದೆ. ಇದರಿಂದ ಇಳುವರಿ ಬರುವುದಿಲ್ಲ’ ಎಂದು ತೋಟಗಾರಿಕೆ ವಿಜ್ಞಾನಿ ನಾಗರಾಜ್ ವಿವರಿಸಿದರು.

‘ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆಯು ನೀರಾವರಿಯ ಹಿಂಗಾರು ಬೆಳೆಯಾಗಿದೆ. ಹಾಸನ, ಚಿಕ್ಕಮಗಳೂರು, ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಬೆಳೆಯಾಗಿದೆ. ಐರ್ಲ್ಯಾಂಡ್‌ನಲ್ಲಿ ಮೊದಲ ಬಾರಿಗೆ ಆಲೂಗಡ್ಡೆಗೆ ಅಂಗಮಾರಿ ರೋಗ ಕಾಣಿಸಿಕೊಂಡಿತ್ತು. ಆಗ ಸಮರ್ಪಕ ಇಳುವರಿ ಬಾರದೆ. ಆಹಾರದ ಕೊರತೆಯಾಗಿ ಸಾವಿರಾರು ಮಂದಿ ಮೃತಪಟ್ಟಿದ್ದರು’ ಎಂದು ಮಾಹಿತಿ ನೀಡಿದರು.

‘ಭಾರತ ದೇಶದಲ್ಲೂ ಆಲೂಗಡ್ಡೆ ಬೆಳೆಯಲ್ಲಿ ಅಂಗಮಾರಿ ರೋಗ ಕಾಣಿಸಿಕೊಂಡಿದೆ. ಈ ರೋಗ ನಿಯಂತ್ರಿಸುವ ಕೀಟನಾಶಕಗಳ ಬಗ್ಗೆ ಸಂಶೋಧನೆ ನಡೆದಿದ್ದು, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಮೊದಲ ಅಂಗಮಾರಿ ಮತ್ತು ಕೊನೆಯ ಅಂಗಮಾರಿ ಎಂಬ 2 ವಿಧಗಳಿದ್ದು, ಇದರಲ್ಲಿ ಕೊನೆಯ ಅಂಗಮಾರಿ ರೋಗ ಸುಲಭವಾಗಿ ನಿಯಂತ್ರಣಕ್ಕೆ ಬರುವುದಿಲ್ಲ. ರೋಗ ಹತೋಟಿಗೆ ಹಲವು ರೀತಿಯ ಕೀಟನಾಶಕ ಸಿಂಪಡಿಸಬೇಕು. ‘ಸೂಪರ್ ಆಲ್‌ರೌಂಡರ್‌’ ಕೀಟನಾಶಕ ಸಿಂಪಡಣೆಯಿಂದ ಗಿಡದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚತ್ತದೆ ಮತ್ತು ಒಳ್ಳೆಯ ಪೋಷಾಕಾಂಶ ಸಿಗಲಿದೆ. ರಂಜಕ ಕರಗಿಸಿ ಗೊಬ್ಬರ ಒದಗಿಸುವ ಶಕ್ತಿ ಹೊಂದಿದೆ’ ಎಂದು ವಿವರಿಸಿದರು.

ಮಣ್ಣು ಪರೀಕ್ಷೆ: ‘ಬೆಳೆಗಳಲ್ಲಿ ಮಣ್ಣು ಮತ್ತು ನೀರನ್ನು ಪರೀಕ್ಷೆಗೆ ಒಳಪಡಿಸಿ ಅವುಗಳಿಗೆ ಪೂರಕವಾದ ಬೆಳೆ ಬೆಳೆಯುವುದು ಸೂಕ್ತ. ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಮಣ್ಣು ಫಲವತ್ತತೆ ಕಳೆದುಕೊಳ್ಳದಂತೆ ಎಚ್ಚರ ವಹಿಸಬೇಕು’ ಎಂದು ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ನವೀನ್ ಸಲಹೆ ನೀಡಿದರು.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ.ಎಲ್.ಅನಿಲ್‌ಕುಮಾರ್, ಸೊಣ್ಣೆಗೌಡ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಂ.ವೆಂಕಟಸ್ವಾಮಿ, ಸದಸ್ಯರಾದ ಎಸ್.ಆರ್.ರುದ್ರಸ್ವಾಮಿ, ಎ.ಸಿ.ಭಾಸ್ಕರ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಂ.ಭಾರತಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)