ಫಲಪುಷ್ಪ ಪ್ರದರ್ಶನಕ್ಕೆ ಭರ್ಜರಿ ಸಿದ್ಧತೆ

7
ಪ್ರದರ್ಶನದ ಸೌಂದರ್ಯ ಕಣ್ತುಂಬಿಕೊಳ್ಳಲು ನಗರವಾಸಿಗಳು ಉತ್ಸುಕ

ಫಲಪುಷ್ಪ ಪ್ರದರ್ಶನಕ್ಕೆ ಭರ್ಜರಿ ಸಿದ್ಧತೆ

Published:
Updated:
Prajavani

ಕೋಲಾರ: ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ನಗರದಲ್ಲಿ ಫಲಪುಷ್ಪ ಪ್ರದರ್ಶನ ಹಾಗೂ ಸಿರಿ ಧಾನ್ಯ ಮೇಳ ಆಯೋಜನೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ತೋಟಗಾರಿಕಾ ಇಲಾಖೆ ನರ್ಸರಿಯಲ್ಲಿ ಬಗೆ ಬಗೆಯ ಹೂವಿನ ಗಿಡಗಳನ್ನು ಬೆಳೆಸಲಾಗಿದೆ.

ಜಿಲ್ಲಾ ಕೇಂದ್ರದಲ್ಲಿ 11 ವರ್ಷದಿಂದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಫಲಪುಷ್ಪ ಪ್ರದರ್ಶನ ನಡೆಸಲಾಗುತ್ತಿದೆ. ಆದರೆ, ಈ ಬಾರಿ ಬರ ಪರಿಸ್ಥಿತಿಯಿಂದ ನರ್ಸರಿಯಲ್ಲಿ ಸಕಾಲಕ್ಕೆ ಹೂವು ಬಾರದ ಕಾರಣ ಫೆಬ್ರುವರಿ ಮೊದಲ ವಾರದಲ್ಲಿ ಫಲಪುಷ್ಪ ಪ್ರದರ್ಶನ ನಡೆಸಲು ನಿರ್ಧರಿಸಲಾಗಿದೆ.

ತೋಟಗಾರಿಕೆ ಇಲಾಖೆ ನರ್ಸರಿಯು 4 ಎಕರೆ ವಿಸ್ತಾರವಾಗಿದ್ದು, ಸ್ಥಳೀಯರು ಸೇರಿದಂತೆ ಪ್ರತಿಯೊಬ್ಬರಿಗೂ ಇಷ್ಟವಾಗುವಂತೆ ಪ್ರದರ್ಶನ ನಡೆಸಲು ಸಿದ್ಧತೆ ನಡೆದಿದೆ. ನರ್ಸರಿ ಆವರಣದಲ್ಲಿ ಅಲಂಕಾರಿಕ ಗಿಡಗಳು, ಡೇಲಿಯಾ, ಸಾಲ್ವಿಯಾ, ಬೆರ್ಜೆನಿಯಾ, ಆಸ್ಟರ್, ಜರ್ಬರಸ್, ಸೆಲೋಸಿಯಾ ಸೇರಿದಂತೆ ವಿವಿಧ ಹೂವುಗಳನ್ನು 2,500 ಕುಂಡಗಳಲ್ಲಿ ಬೆಳೆಸಲಾಗಿದೆ.

ಹಿಂದಿನ ವರ್ಷ ಸ್ವಚ್ಛ ಭಾರತ ಪರಿಕಲ್ಪನೆಯೊಂದಿಗೆ ಪ್ರದರ್ಶನ ರೂಪಿಸಲಾಗಿತ್ತು. ಈ ಬಾರಿ ಇಸ್ರೇಲ್‌ ಮಾದರಿ ತೋಟಗಾರಿಕೆ ಪರಿಕಲ್ಪನೆಯೊಂದಿಗೆ ಪ್ರದರ್ಶನ ನಡೆಸಲಾಗುತ್ತಿದೆ. ಹಲವು ಬಗೆಯ ಆಹಾರ, ತಿಂಡಿ ತಿನಿಸು ಮಳಿಗೆಗಳು, ಕರಕುಶಲ ವಸ್ತುಗಳು, ಕೃಷಿ ಉತ್ಪನ್ನಗಳ ಮಾರಾಟ ಮಳಿಗೆಗಳಿಗೂ ಅವಕಾಶ ಕಲ್ಪಿಸಲಾಗುತ್ತಿದೆ.

ತೋಟಗಾರಿಕೆ, ಕೃಷಿ, ಮೀನುಗಾರಿಕೆ, ಅರಣ್ಯ, ರೇಷ್ಮೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಸೇರಿದಂತೆ ವಿವಿಧ ಇಲಾಖೆಗಳು ಮಳಿಗೆ ತೆರೆಯಲಿವೆ. ಪ್ರಗತಿಪರ ರೈತರು, ಕೃಷಿ ತಜ್ಞರು ಮತ್ತು ವಿಜ್ಞಾನಿಗಳೊಂದಿಗೆ ಸಂವಾದ ನಡೆಸಲು ಉದ್ದೇಶಿಸಲಾಗಿದೆ.

ಪ್ರಮುಖ ಆಕರ್ಷಣೆ: ಕಲ್ಲಂಗಡಿ, ಕುಂಬಳಕಾಯಿ, ಸೋರೆಕಾಯಿ, ಬಾಳೆದಿಂಡು, ಹಾಗಲಕಾಯಿ ಸೇರಿದಂತೆ ವಿವಿಧ ತರಕಾರಿ ಮತ್ತು ಹಣ್ಣುಗಳಿಂದ ಪ್ರಾಣಿ ಪಕ್ಷಿ ಆಕೃತಿಗಳನ್ನು ಕೆತ್ತನೆ ಮೂಲಕ ನಿರ್ಮಿಸಲಾಗುತ್ತದೆ. ತರಕಾರಿ ಕೆತ್ತನೆಗಳು, ರೈತರು ಬೆಳೆದ ಕೃಷಿ ಉತ್ಪನ್ನಗಳು, ಪಾಲಿಹೌಸ್, ಕೃಷಿ ಗೊಂಡ, ತಾರಸಿ ತೋಟ, ಕೈತೋಟ ಮಾದರಿಗಳು ಈ ಬಾರಿಯ ಪ್ರದರ್ಶನದ ಪ್ರಮುಖ ಆಕರ್ಷಣೆಗಳಾಗಿವೆ.

₹ 12.50 ಲಕ್ಷ ವೆಚ್ಚ: ಫಲಪುಷ್ಪ ಪ್ರದರ್ಶನಕ್ಕೆ ಸುಮಾರು ₹ 12.50 ಲಕ್ಷ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಪ್ರದರ್ಶನಕ್ಕೆ ಜಿಲ್ಲಾ ಪಂಚಾಯಿತಿ ₹ 6.50 ಲಕ್ಷ, ತೋಟಗಾರಿಕೆ ಇಲಾಖೆ ₹ 2 ಲಕ್ಷ ಮತ್ತು ಕೃಷಿ ಇಲಾಖೆ ₹ 4 ಲಕ್ಷ ಮೀಸಲಿಟ್ಟಿವೆ.

ಸಾಂಸ್ಕೃತಿಕ ಕಾರ್ಯಕ್ರಮ: ಫೆ.9ರಿಂದ 11ರವರೆಗೆ ಫಲಪುಷ್ಪ ಪ್ರದರ್ಶನ ನಡೆಸಲು ನಿರ್ಧರಿಸಲಾಗಿದ್ದು, ಮೂರೂ ದಿನ ಸಂಜೆ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ನೃತ್ಯ, ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ಪ್ರತಿನಿತ್ಯ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ಪ್ರದರ್ಶನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ. ಫಲಪುಷ್ಪ ಪ್ರದರ್ಶನದ ಸೌಂದರ್ಯ ಕಣ್ತುಂಬಿಕೊಳ್ಳಲು ನಗರವಾಸಿಗಳು ಉತ್ಸುಕರಾಗಿದ್ದಾರೆ. ವಾರಾಂತ್ಯದ ಶನಿವಾರ ಮತ್ತು ಭಾನುವಾರ ಹೆಚ್ಚಿನ ಮಂದಿ ಪ್ರದರ್ಶನ ವೀಕ್ಷಣೆಗೆ ಬರುವ ನಿರೀಕ್ಷೆಯಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !