ಬುಧವಾರ, ಜೂನ್ 16, 2021
22 °C
ಶುಂಠಿ ಬೆಳೆ: ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಜ್ಯೋತಿ ಸಲಹೆ

ಕೋಲಾರ: ಸುಧಾರಿತ ಬೇಸಾಯ ಪದ್ಧತಿ ಅನುಸರಿಸಿ, ಕೃಷಿ ವಿಜ್ಞಾನಿ ಜ್ಯೋತಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಶುಂಠಿ ಕೃಷಿಯಲ್ಲಿ ಸುಧಾರಿತ ಬೇಸಾಯ ಪದ್ಧತಿ ಅಳವಡಿಕೆಯಿಂದ ರೋಗರಹಿತ ಸಸಿಗಳನ್ನು ಪಡೆಯಬಹುದು’ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಜ್ಯೋತಿ ತಿಳಿಸಿದರು.

ಶುಂಠಿ ಬೇಸಾಯದಲ್ಲಿ ವೈಜ್ಞಾನಿಕ ಕ್ರಮಗಳು ಕುರಿತು ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ನಡೆದ ಅಂತರ್ಜಾಲ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ಶುಂಠಿ ಕೃಷಿಯಲ್ಲಿ ಸುಧಾರಿತ ತಳಿಗಳ ಬಿತ್ತನೆ ಗಡ್ಡೆ ಆಯ್ಕೆ, ಸುಧಾರಿತ ನಾಟಿ ಪದ್ಧತಿ, ಹೊದಿಕೆ ಮತ್ತು ಮಣ್ಣು ಏರಿಸುವುದು ಮುಖ್ಯ’ ಎಂದು ಹೇಳಿದರು.

‘ಸುಧಾರಿತ ತಳಿಗಳ ಬಳಕೆಯಿಂದ ಹೆಚ್ಚು ಇಳುವರಿ ಪಡೆಯಲು ಮತ್ತು ಬಹಳ ದಿನಗಳವರೆಗೆ ಗಡ್ಡೆ ಶೇಖರಿಸಲು ಸಹಾಯವಾಗುತ್ತದೆ. ಸಾಂಪ್ರದಾಯಿಕವಾಗಿ ಗಡ್ಡೆ ಬಿತ್ತಿದಾಗ ಹೆಕ್ಟೇರ್‌ಗೆ ಸುಮಾರು 2 ಸಾವಿರ ಕೆ.ಜಿ ಗಡ್ಡೆ ಬೇಕಾಗುತ್ತವೆ. ಸುಧಾರಿತ ನಾಟಿ ಪದ್ಧತಿಯಲ್ಲಿ ಹೆಕ್ಟೇರ್‌ಗೆ 500 ಕೆ.ಜಿ ಬಿತ್ತನೆ ಗಡ್ಡೆ ಸಾಕು. ಹೊದಿಕೆಯನ್ನು ಸಾವಯವ ಹಸಿರು ಎಲೆಗಳಿಂದ ಮಾಡುವುದರಿಂದ ಬೆಳೆ ಅವಧಿಯಲ್ಲಿ ಮಣ್ಣಿನ ಉಷ್ಣಾಂಶ ಕಾಪಾಡಲು ಹಾಗೂ ಕಳೆ ತಡೆಯಲು ಸಹಾಯವಾಗುತ್ತದೆ’ ಎಂದು ವಿವರಿಸಿದರು.

‘ಕೊಟ್ಟಿಗೆ ಗೊಬ್ಬರ, ಯೂರಿಯಾ ಜತೆಗೆ ಹಸಿರೆಲೆ ಗೊಬ್ಬರ ಹಾಕಿದಾಗ ಶುಂಠಿ ಬೆಳೆಯಲ್ಲಿ ಪೋಷಕಾಂಶ ಕೊರತೆ ನೀಗಿಸಬಹುದು. ಲಘು ಪೋಷಕಾಂಶಗಳಾದ ಕಬ್ಬಿಣ, ತಾಮ್ರ ಮತ್ತು ಇತರೆ ಪೋಷಕಾಂಶಗಳನ್ನು ಜಿಂಜರ್ ರಿಜ್ ಮತ್ತು ಜಿಂಜರ್ ಸ್ಪೆಷಲ್‌ ಬಳಸಬೇಕು’ ಎಂದು ಮಣ್ಣು ವಿಜ್ಞಾನಿ ಅನಿಲ್‌ಕುಮಾರ್‌ ಮಾಹಿತಿ ನೀಡಿದರು.

ಬೇವಿನ ಹಿಂಡಿ: ‘ಶುಂಠಿ ಬೆಳೆಯಲ್ಲಿ ಮುಖ್ಯವಾಗಿ ಗಡ್ಡೆ ಕೊಳೆ ರೋಗ, ಎಲೆ ಚುಕ್ಕೆ ರೋಗ, ಸೊರಗು ರೋಗ, ಜಂತು ಹುಳುವಿನ ಹಾನಿ, ಕಾಂಡ ಕೊರೆಯುವ ಹುಳುವಿನ ಬಾಧೆ ಕಾಣಿಸಿಕೊಳ್ಳುತ್ತದೆ. ರಾಸಾಯನಿಕ ಗೊಬ್ಬರ ಬಳಕೆಗಷ್ಟೇ ಒತ್ತು ನೀಡದೆ ಸಮಗ್ರ ನಿರ್ವಹಣಾ ಕ್ರಮ ಅನುಸರಿಸುವುದರಿಂದ ರೋಗ ಮತ್ತು ಕೀಟ ಹತೋಟಿ ಮಾಡಬಹುದು’ ಎಂದು ಸಸ್ಯ ಸಂರಕ್ಷಣೆ ವಿಜ್ಞಾನಿ ಡಿ.ಎಸ್‌.ಅಂಬಿಕಾ ಹೇಳಿದರು.

‘ಬೇವಿನ ಹಿಂಡಿ ಮಣ್ಣಿಗೆ ಸೇರಿಸುವುದರಿಂದ ಜಂತು ಹುಳುಗಳ ಬಾಧೆಯನ್ನು ನಿಯಂತ್ರಿಸಬಹುದು. ಶುಂಠಿ ಗಡ್ಡೆ ಬಿತ್ತನೆ ಪೂರ್ವದಲ್ಲಿ ಏರು ಸಸಿ ಮಡಿ ತಯಾರಿಸಬೇಕು. ಬಿತ್ತನೆಗೂ 45 ದಿನ ಮುನ್ನ ಮಡಿಗಳಿಗೆ ಪ್ಲಾಸ್ಟಿಕ್ ಹೊದಿಕೆ ಹೊದಿಸಿ ಸೌರೀಕರಣ ಮಾಡಬೇಕು. ಇದರಿಂದ ಭೂಮಿಯಲ್ಲಿರುವ ರೋಗಾಣುಗಳನ್ನು ಹತೋಟಿ ಮಾಡಬಹುದು. ಆರೋಗ್ಯವಂತ ತೋಟದಿಂದ ಬಿತ್ತನೆ ಗಡ್ಡೆ ಆಯ್ಕೆ ಮಾಡಿಕೊಂಡು ಬೀಜೋಪಚಾರ ಮಾಡಿ ಬಿತ್ತುವುದರಿಂದ ಅನುಕೂಲ ಹೆಚ್ಚು’ ಎಂದು ಸಲಹೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.