ಮುಳಬಾಗಿಲು (ಕೋಲಾರ): ತಾಲ್ಲೂಕಿನ ಗ್ರಾಮವೊಂದರಲ್ಲಿ ಶನಿವಾರ ರಾತ್ರಿ ಯುವಕನೊಬ್ಬ ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದು, ಪ್ರಕರಣ ದಾಖಲಾಗಿದೆ .
21 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿ ಗ್ರಾಮದ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿದ್ದಾಳೆ.
ಆರೋಪಿ ಹಾಗೂ ಸಂತ್ರಸ್ತ ಬಾಲಕಿ ಒಂದೇ ಗ್ರಾಮದವರು. ಎಲ್ಲಾದರೂ ಗಾರೆ ಕೆಲಸ ಇದೆಯೇ ಎಂದು ಕೇಳಲು ಯುವಕನು ಬಾಲಕಿಯ ಮನೆಗೆ ಹೋಗಿದ್ದಾನೆ. ನಂತರ ಕೆಲಸದ ವಿಚಾರವಾಗಿ ಆಕೆಯ ತಂದೆ ಜೊತೆ ಹೊರ ಹೋಗಿದ್ದಾನೆ.
ಹೊರ ಹೋದ ಯುವಕ ಪುನಃ ಬಂದು ಮಗಳಿಗೆ ಮೊಬೈಲ್ ತೋರಿಸುತ್ತಾ ಮನೆಯ ಮೇಲೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿ ಓಡಿ ಹೋಗಿದ್ದಾನೆ ಎಂದು ಬಾಲಕಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
ಬಾಲಕಿಗೆ ರಕ್ತಸ್ರಾವವಾಗಿದ್ದು, ಚಿಕಿತ್ಸೆಗಾಗಿ ಮುಳಬಾಗಿಲು ನಗರದ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
ಪೊಲೀಸರು ಯುವಕನನ್ನು ಬಂಧಿಸಿ ಪೋಕ್ಸೊ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮುಳಬಾಗಿಲು ತಾಲ್ಲೂಕಿನ ಪೊಲೀಸ್ ಠಾಣೆಯೊಂದರಲ್ಲಿ ಪ್ರಕರಣ ದಾಖಲಾಗಿದೆ.