ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸಪುರ | ಕುಡಿಯುವ ನೀರು ಪೂರೈಕೆ ಮೊದಲ ಆದ್ಯತೆ: ಶಾಸಕ ವೆಂಕಟಶಿವಾರೆಡ್ಡಿ

ಬರ: ಟಾಸ್ಕ್ ಫೋರ್ಸ್ ಸಭೆಯಲ್ಲಿ ಶಾಸಕ ಅಧಿಕಾರಿಗಳಿಗೆ ಸೂಚನೆ
Published 16 ಡಿಸೆಂಬರ್ 2023, 13:58 IST
Last Updated 16 ಡಿಸೆಂಬರ್ 2023, 13:58 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ತಾಲ್ಲೂಕು ಮಟ್ಟದ ಬರ ಕುರಿತ ಟಾಸ್ಕ್ ಫೋರ್ಸ್ ಸಭೆಯಲ್ಲಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಬೇಕು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಯಾವುದೇ ಕಾರಣಕ್ಕೂ ಕುಡಿಯುವ ನೀರು ಸಮಸ್ಯೆ ತಲೆದೋರಂತೆ ಎಚ್ಚರ ವಹಿಸಬೇಕು ಎಂದರು.

ಮಳೆ ಕೊರೆಯಿಂದಾಗಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಬರಗಾಲದಲ್ಲಿ ಜನ, ಜಾನುವಾರು ರಕ್ಷಣೆ ಸರ್ಕಾರದ ಆದ್ಯ ಕರ್ತವ್ಯ. ಆದ್ದರಿಂದ ದುಡಿಯುವ ಕೈಗಳಿಗೆ ಕೆಲಸ ನೀಡಬೇಕು. ಜಾನುವಾರು ಮೇವಿನ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಪೊಲೀಸ್ ಇಲಾಖೆ ತಾಲ್ಲೂಕಿನಿಂದ ಆಂಧ್ರಪ್ರದೇಶಕ್ಕೆ ಜಾನುವಾರು ಮೇವು ಸರಬರಾಜು ಮಾಡುವುದಕ್ಕೆ ಕಡಿವಾಣ ಹಾಕಬೇಕು ಎಂದು ಸೂಚಿಸಿದರು.

ಬೇಸಿಗೆಯಲ್ಲಿ ಜಾನುವಾರು ಮೇವಿನ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಪಶುಪಾಲನಾ ಇಲಾಖೆ ವತಿಯಿಂದ ಈಗಾಗಲೇ ನೀರಿನ ಆಸರೆ ಇರುವ ರೈತರಿಗೆ ಮೇವಿನ ಬೀಜದ ಕಿಟ್ ವಿತರಿಸಲಾಗಿದೆ. ರೈತರು ಪಡೆದುಕೊಂಡಿರುವ ಮೇವಿನ ಬೀಜ ಬಿತ್ತನೆ ಮಾಡಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಕೊಳವೆ ಬಾವಿಗಳ ಆಶ್ರಯದಲ್ಲಿ ಹಸಿರು ಮೇವು ಬೆಳೆದು, ತಮಗೆ ಬೇಕಾದಷ್ಟನ್ನು ಉಳಿಸಿಕೊಂಡು ಹೆಚ್ಚುವರಿ ಮೇವನ್ನು ಅಗತ್ಯವಿರುವ ರೈತರಿಗೆ ಮಾರಾಟ ಮಾಡಬಹುದು  ಎಂದು ಹೇಳಿದರು.

ಬರ ಪರಿಸ್ಥಿತಿ ಎದುರಿಸಲು ಕೃಷಿ, ತೋಟಗಾರಿಕೆ, ರೇಷ್ಮೆ, ಕೃಷಿ ಹಾಗೂ ಪಶುಪಾಲನಾ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಸಾಂಘಿಕ ಪ್ರಯತ್ನ ನಡೆಸಬೇಕು. ಯಾವುದೇ ವಿಷಯದಲ್ಲಿ ಸಮಸ್ಯೆ ಜಟಿಲ ಎನಿಸಿದಲ್ಲಿ ಶಾಸಕರು ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

ಪಟ್ಟಣದ ಪಶುಪಾಲನಾ ಇಲಾಖೆ ಕಚೇರಿ ಹಾಗೂ ಪಶು ಆಸ್ಪತ್ರೆಗೆ ಎಂ.ಜಿ.ರಸ್ತೆಯಿಂದ ನೇರವಾಗಿ ರಸ್ತೆ ನಿರ್ಮಿಸಲಾಗುವುದು. ಶೀಘ್ರವಾಗಿ ಕಾಮಗಾರಿ ಪ್ರಾರಂಭಿಸುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ಶೌಚಾಲಯ ಕಟ್ಟಡ ನೆಲಸಮಗೊಳಿಸಿ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬೇರೆ ಕಡೆ ನಿರ್ಮಿಸಲಾಗುವುದು ಎಂದು ತಿಳಿಸಿದರು.

ತಹಶೀಲ್ದಾರ್ ಜಿ.ಎನ್.ಸುಧೀಂದ್ರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಶಿವಕುಮಾರಿ, ಉಪ ತಹಶೀಲ್ದಾರ್ ಕೆ.ಎಲ್.ಜಯರಾಂ, ಶಿರಸ್ತೇದಾರ್ ಬಲರಾಮಚಂದ್ರೇಗೌಡ, ಬಿ.ವಿ.ಮುನಿರೆಡ್ಡಿ, ಕೆ.ಸಿ.ಮಂಜುನಾಥ್, ಕೃಷ್ಣಪ್ಪ, ಎ.ಬೈರಾರೆಡ್ಡಿ, ನಾರಾಯಣಸ್ವಾಮಿ, ಡಾ.ವಿಶ್ವನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT