ಗ್ರಾಮ ಸ್ವರಾಜ್ಯ ಅಭಿಯಾನ ಗುರಿ ಸಾಧನೆ ಕಳಪೆ: ಜಿಲ್ಲಾಧಿಕಾರಿ ಮಂಜುನಾಥ್ ಅಸಮಾಧಾನ

ಕೋಲಾರ: ‘ಆಶಾ ಕಾರ್ಯಕರ್ತೆಯರು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿದರೆ ಮಿಷನ್ ಇಂದ್ರಧನುಷ್ ರೀತಿಯ ಕಾರ್ಯಕ್ರಮಗಳು ಅಗತ್ಯ ಇರುವುದಿಲ್ಲ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಭಿಪ್ರಾಯಪಟ್ಟರು.
ಇಲ್ಲಿ ಮಂಗಳವಾರ ನಡೆದ ಗ್ರಾಮ ಸ್ವರಾಜ್ಯ ಅಭಿಯಾನ ಜಿಲ್ಲಾ ಮಟ್ಟದ ಚಾಲನಾ ಸಮಿತಿ ಸಭೆಯಲ್ಲಿ ಮಾತನಾಡಿ, ‘ಆಶಾ ಕಾರ್ಯಕರ್ತೆಯರ ಕಾರ್ಯ ನಿರ್ವಹಣೆ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ನಿಗಾ ವಹಿಸಬೇಕು’ ಎಂದು ಸೂಚಿಸಿದರು.
‘ಜಿಲ್ಲೆಯಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ (ಎಎನ್ಎಂ) ಕೊರತೆಯಿದೆ. ಆದರೆ, ಆಶಾ ಕಾರ್ಯಕರ್ತೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸರ್ಕಾರದಿಂದ ಸಂಬಳ ಹಾಗೂ ಎಲ್ಲಾ ಸೌಲಭ್ಯ ಪಡೆದರೂ ಸಮರ್ಪಕವಾಗಿ ಕಾರ್ಯ ನಿರ್ವಹಿಸದಿರುವುದರಿಂದ ಯೋಜನೆ ಗುರಿ ತಲುಪಿಲ್ಲ. ಆಶಾ ಕಾರ್ಯಕರ್ತೆಯರು ಏನು ಮಾಡುತ್ತಿದ್ದಾರೆ ಎಂದು ನೀವು ಕೇಳುವುದಿಲ್ಲವೇ?’ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.
ಎಚ್ಚರ ವಹಿಸಿ
‘ಆಶಾ ಕಾರ್ಯಕರ್ತೆಯರು ಸರಿಯಾಗಿ ಕೆಲಸ ಮಾಡದಿದ್ದರೆ ಮಿಷನ್ ಮತ್ತಿತರ ಕಾರ್ಯಕ್ರಮಗಳು ಹುಟ್ಟಿ ಕೊಳ್ಳುತ್ತವೆ. ನಾನು ಜಿಲ್ಲೆಯಲ್ಲಿ ಇರುವವರೆಗೂ ಮಿಷನ್- 3 ಬರುವುದಕ್ಕೆ ಅವಕಾಶ ನೀಡದಂತೆ ಎಚ್ಚರ ವಹಿಸಿ’ ಎಂದು ಎಚ್ಚರಿಕೆ ನೀಡಿದರು.
ಪ್ರಸಕ್ತ ವರ್ಷದ ಆಗಸ್ಟ್ ತಿಂಗಳ ಜಿಲ್ಲಾವಾರು ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ದಿನಾಚರಣೆ ಮಾಹಿತಿ ಗಮನಿಸಿದ ಜಿಲ್ಲಾಧಿಕಾರಿ ತಿಂಗಳ ಗುರಿ ಮತ್ತು ಸಾಧನೆ ನಡುವೆ ಸಾಕಷ್ಟು ವ್ಯತ್ಯಾಸವಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಸಾಧನೆ ಕಳಪೆ
‘ಬಂಗಾರಪೇಟೆ ತಾಲ್ಲೂಕಿನಲ್ಲಿ ಶೇ 61.73, ಕೋಲಾರ ಶೇ 75, ಮಾಲೂರು ಶೇ 85.94, ಮುಳಬಾಗಿಲು ಶೇ 67.07 ಮತ್ತು ಶ್ರೀನಿವಾಪುರ ತಾಲ್ಲೂಕಿನಲ್ಲಿ ಶೇ 73.31ರಷ್ಟು ಗುರಿ ಸಾಧನೆಯಾಗಿದೆ. ಅಭಿಯಾನದ ಗುರಿಗೆ ಹೋಲಿಸಿದರೆ ಸಾಧನೆ ಕಳಪೆಯಾಗಿದೆ’ ಎಂದು ವೈದ್ಯಾಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು.
‘ಆಶಾ ಕಾರ್ಯಕರ್ತೆಯರು, ಎಎನ್ಎಂಗಳು ಇದ್ದರೂ ಯಾಕೆ ಕೆಲಸ ಮಾಡಿಸಿಲ್ಲ. ಕೆಲಸ ಮಾಡದಿರುವುದಕ್ಕೆ ಅವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ?. ನೀವೆಲ್ಲಾ ನನ್ನ ಖುಷಿಗೆ ಕೆಲಸ ಮಾಡುವುದಲ್ಲ ಅಥವಾ ಸರ್ಕಾರದ ಕೆಲಸ ಆಗಿದೆ ಎಂದು ಕಾಗದದಲ್ಲಿ ತೋರಿಸುವುದಲ್ಲ. ಕಾರ್ಯವೈಖರಿ ಬದಲಿಸಿಕೊಂಡು ಶೇ 100ರಷ್ಟು ಗುರಿ ಸಾಧಿಸಬೇಕು. ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಖಡಕ್ ಎಚ್ಚರಿಕೆ ನೀಡಿದರು.
‘ಆಶಾ ಕಾರ್ಯಕರ್ತೆಯರನ್ನು ಕಚೇರಿಗೆ ಕರೆಸಿ ಎಲ್ಲಾ ಕೆಲಸಗಳನ್ನು ಜವಾಬ್ದಾರಿಯುತವಾಗಿ ಮತ್ತು ನಿರಂತರವಾಗಿ ಮಾಡುವಂತೆ ಸೂಚಿಸಬೇಕು’ ಎಂದು ಹೇಳಿದರು.
ಆರೋಗ್ಯಾಧಿಕಾರಿಗೆ ತರಾಟೆ
‘ಮುಳಬಾಗಿಲು ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ ರೋಗಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ದೂರು ಬಂದಿವೆ. ಹೀಗಾದರೆ ರೋಗಿಗಳ ಗತಿ ಏನಾಗಬೇಕು?’ ಎಂದು ತಾಲ್ಲೂಕು ಆರೋಗ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಆರೋಧಿಕಾರಿ, ‘ಡಯಾಲಿಸಿಸ್ ಕೇಂದ್ರದಲ್ಲಿ ಜನರೇಟರ್ ಇಲ್ಲ. ವಿದ್ಯುತ್ ಇರುವ ಸಮಯದಲ್ಲಿ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ವಿದ್ಯುತ್ ಕಡಿತಗೊಂಡಾಗ ಸಮಸ್ಯೆಯಾಗುತ್ತಿದೆ. ಬೆಳಗಿನ ವೇಳೆ ವಿದ್ಯುತ್ ಕಡಿತಗೊಳಿಸದಂತೆ ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಶಾಸಕರು ಕೇಂದ್ರಕ್ಕೆ ಸದ್ಯದಲ್ಲೇ ಜನರೇಟರ್ ಕೊಡಿಸುವ ಭರವಸೆ ನೀಡಿದ್ದಾರೆ’ ಎಂದು ವಿವರಿಸಿದರು.
‘ತಾಲ್ಲೂಕಿನ 2 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನರೇಟರ್ಗಳು ಉತ್ತಮ ಸ್ಥಿತಿಯಲ್ಲಿದ್ದು, ಅನುಮತಿ ನೀಡಿದರೆ ಅವುಗಳನ್ನು ಕೇಂದ್ರಕ್ಕೆ ಸ್ಥಳಾಂತರಿಸುತ್ತೇವೆ’ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎನ್.ವಿಜಯ್ಕುಮಾರ್, ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್ಸಿಎಚ್) ಡಾ.ಚಂದನ್ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳು ಹಾಜರಿದ್ದರು.
ಅಂಕಿ ಅಂಶ
* 1,315 ಗ್ರಾಮಗಳಲ್ಲಿ ಗ್ರಾಮ ಸ್ವರಾಜ್ಯ ಅಭಿಯಾನ ಗುರಿ
* 294 ಉಪ ಕೇಂದ್ರಗಳಲ್ಲಿ ಅಭಿಯಾನಕ್ಕೆ ಸಿದ್ಧತೆ
* 964 ಗ್ರಾಮಗಳಲ್ಲಿ ಅಭಿಯಾನ ನಡೆದಿದೆ
* ಶೇ 73.31ರಷ್ಟು ಅಭಿಯಾನ ಗುರಿ ಸಾಧನೆ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.