ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರು ಪೌರ್ಣಿಮೆ: ಭಕ್ತರಿಗೆ ಊಟದ ವ್ಯವಸ್ಥೆ

ಸಾಯಿ ಬಾಬಾ ಮಂದಿರದಲ್ಲಿ ವಿಶೇಷ ಪೂಜೆ: ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ
Last Updated 14 ಜುಲೈ 2019, 13:48 IST
ಅಕ್ಷರ ಗಾತ್ರ

ಕೋಲಾರ: ‘ಗುರು ಪೌರ್ಣಿಮೆ ಅಂಗವಾಗಿ ನಗರದ ಸಾಯಿ ಬಾಬಾ ಮಂದಿರದಲ್ಲಿ ಜುಲೈ 16ರಂದು ವಿಶೇಷ ಪೂಜೆ ಹಮ್ಮಿಕೊಂಡಿದ್ದು, ಭಕ್ತರಿಗೆ ಸಿಹಿ ಊಟದ ವ್ಯವಸ್ಥೆ ಮಾಡಲಾಗಿದೆ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ತಿಳಿಸಿದರು.

ಗುರು ಪೌರ್ಣಿಮೆ ಹಿನ್ನೆಲೆಯಲ್ಲಿ ನಗರ ರೈಲು ನಿಲ್ದಾಣ ಮುಂಭಾಗದ ಆವರಣದಲ್ಲಿ ಅನ್ನ ದಾಸೋಹಕ್ಕೆ ಕೈಗೊಂಡಿರುವ ಸಿದ್ಧತೆಯನ್ನು ಭಾನುವಾರ ಪರಿಶೀಲಿಸಿ ಮಾತನಾಡಿ, ‘ಪ್ರತಿ ವರ್ಷದಂತೆ ಈ ಬಾರಿಯೂ 25 ಸಾವಿರಕ್ಕೂ ಹೆಚ್ಚು ಮಂದಿ ಸಾಯಿ ಬಾಬಾ ದರ್ಶನಕ್ಕೆ ಆಗಮಿಸುವ ನಿರೀಕ್ಷೆಯಿದೆ’ ಎಂದರು.

‘ಒಮ್ಮೆಯೇ 1,500 ಮಂದಿ ಊಟಕ್ಕೆ ಕೂರಲು ಅವಕಾಶವಾಗುವಂತೆ ಬೃಹತ್ ಪೆಂಡಾಲ್ ನಿರ್ಮಾಣ ಮಾಡಲಾಗುತ್ತದೆ. ಈ ಬಾರಿ ಗುರು ಪೌರ್ಣಿಮೆ ಜತೆಯಲ್ಲೇ ಚಂದ್ರ ಗ್ರಹಣ ಇರುವುದರಿಂದ ದೇವಾಲಯದಲ್ಲಿ ಬೆಳಿಗ್ಗೆ 11 ಗಂಟೆಗೆ ಮಹಾ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯುತ್ತದೆ’ ಎಂದು ವಿವರಿಸಿದರು.

‘ಬೆಳಿಗ್ಗೆಯಿಂದ ಸಂಜೆವರೆಗೂ ದೇವಾಲಯಕ್ಕೆ ಬರುವ ಭಕ್ತರಿಗೆ ರೈಲು ನಿಲ್ದಾಣದ ಮೈದಾನದಲ್ಲಿ ಮಲ್ಲಿಗೆ ಇಡ್ಲಿ, ಸಿಹಿ ಕಡುಬು, ರಾಗಿ ದೋಸೆ, ತರಕಾರಿ ಬಾತ್, ಬೋಂಡಾ, ಪಾಯಸ, ಬೂಂದಿ, ಅನ್ನ ಸಾಂಬರು, ಮಜ್ಜಿಗೆ ವಿತರಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಸಾಯಿ ಬಾಬಾ ದರ್ಶನ ಹಾಗೂ ಪೂಜೆಗೆ ಅಡಚಣೆಯಾಗದಂತೆ ಸಕಲ ಸಿದ್ಧತೆ ಮಾಡಲಾಗಿದೆ. ಊಟಕ್ಕೆ 600 ಟೇಬಲ್ ಹಾಗೂ 1,500 ಆಸನಗಳನ್ನು ಹಾಕಲಾಗುತ್ತದೆ. ಭಕ್ತರಿಗೆ ಶುದ್ದ ಕುಡಿಯುವ ನೀರು, ನೆರಳಿನ ಸೌಕರ್ಯ ಕಲ್ಪಿಸಲಾಗಿದೆ’ ಎಂದು ಹೇಳಿದರು.

‘ದೇವಾಲಯದಿಂದ ಊಟದ ಸ್ಥಳಕ್ಕೆ ವಯೋವೃದ್ಧರನ್ನು ಕರೆತರಲು ಬಾಬಾ ಭಕ್ತ ಮಂಡಳಿಯ ಮಹಿಳಾ ಸೇವಾ ದಳದ ಸದಸ್ಯರನ್ನು ನಿಯೋಜಿಸಲಾಗಿದೆ. ಅಡುಗೆ ಸಿದ್ಧತೆ ಹಾಗೂ ಊಟ ಬಡಿಸಲು 300 ಮಂದಿಯನ್ನು ನಿಯೋಜಿಸಲಾಗಿದೆ’ ಎಂದು ತಿಳಿಸಿದರು.

ಹೂವಿನ ಅಲಂಕಾರ: ‘ಸಾಯಿ ಬಾಬಾ ಮೂರ್ತಿಗೆ ಹಾಗೂ ಇಡೀ ದೇವಾಲಯಕ್ಕೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ವಿಶೇಷ ಹೂವಿನ ಅಲಂಕಾರ ಮಾಡಲಾಗುತ್ತದೆ. ಭಕ್ತರಿಗೆ ಮುಂಜಾನೆಯಿಂದಲೇ ದೇವಾಲಯ ತೆರೆದಿರುತ್ತದೆ. ದೇವಾಲಯದ ಮುಂಭಾಗದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಭಕ್ತರನ್ನು ಸಾಲಿನಲ್ಲಿ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದರು.

‘ಪೂಜೆ, ದರ್ಶನ, ಪ್ರಸಾದ ವಿನಿಯೋಗ ಪ್ರಕ್ರಿಯೆಯಲ್ಲಿ ಯಾವುದೇ ಗೊಂದಲ ಎದುರಾಗದಂತೆ ಕ್ರಮ ವಹಿಸಲು ಸಮಿತಿಗಳನ್ನು ರಚಿಸಲಾಗಿದೆ. ಭಕ್ತರ ಸುಗಮ ದರ್ಶನಕ್ಕೆ ಪೊಲೀಸ್ ಇಲಾಖೆ ಸಹಕಾರ ಕೋರಲಾಗಿದೆ’ ಎಂದು ಸಾಯಿ ಬಾಬಾ ದೇವಾಲಯ ಸಮಿತಿ ಸದಸ್ಯ ಜಿ.ಪಿ.ಮುನಿಸ್ವಾಮಿ ತಿಳಿಸಿದರು.

ದೇವಾಲಯ ಸಮಿತಿ ಸದಸ್ಯರಾದ ರವಿಶಂಕರ್ ಗುಪ್ತಾ, ನಟರಾಜ್, ನಾಗರಾಜ್, ಸರ್ವೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT