ಗುರುವಾರ , ಜುಲೈ 29, 2021
21 °C
ಸ್ವಂತ ನಿವೇಶನಕ್ಕೆ ಜಮೀನು ಗುರುತು: ಸಂಸದ ಮುನಿಸ್ವಾಮಿ ಹೇಳಿಕೆ

ಪತ್ರಕರ್ತರಿಗೆ ಆರೋಗ್ಯ ವಿಮೆ: ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೋವಿಡ್‌ನಿಂದ ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ ₹ 50 ಸಾವಿರ ನೆರವು ಹಾಗೂ ಜಿಲ್ಲೆಯ ಎಲ್ಲಾ ಪತ್ರಕರ್ತರಿಗೂ ₹ 5 ಲಕ್ಷ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸುತ್ತೇವೆ’ ಎಂದು ಸಂಸದ ಎಸ್.ಮುನಿಸ್ವಾಮಿ ಭರವಸೆ ನೀಡಿದರು.

ಇಲ್ಲಿ ಶುಕ್ರವಾರ ನಡೆದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನವೀಕೃತ ಸಭಾಂಗಣದ ಉದ್ಘಾಟನೆ, ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಕೋವಿಡ್ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಪತ್ರಕರ್ತರಿಗೆ ಸ್ವಂತ ನಿವೇಶನ ಒದಗಿಸುವ ನಿಟ್ಟಿನಲ್ಲಿ ಸರ್ಕಾರಿ ಜಮೀನು ಗುರುತಿಸಿ ಪ್ರಸ್ತಾವನೆ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಸರ್ಕಾರದ ಹಂತದಲ್ಲಿ ಪ್ರಯತ್ನ ನಡೆಸಿ ಜಮೀನು ಮಂಜೂರು ಮಾಡಿಸುತ್ತೇನೆ’ ಎಂದು ಹೇಳಿದರು.

‘ಈಗ ಪತ್ರಿಕಾರಂಗ ಬದಲಾವಣೆಯಾಗಿದೆ. ಹಿಂದಿನ ಪತ್ರಕರ್ತರಿಗೂ, ಈಗಿನ ಪತ್ರಕರ್ತರಿಗೂ ಸಾಕಷ್ಟು ವ್ಯತ್ಯಾಸವಿದೆ. ಮಾಧ್ಯಮದವರು ಸಮಾಜ ಮೆಚ್ಚುವ ಕೆಲಸ ಮಾಡಬೇಕು. ಪತ್ರಿಕೆಗಳು ಮೌಲ್ಯ ಉಳಿಸಿಕೊಳ್ಳಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಕಿವಿಮಾತು ಹೇಳಿದರು.

‘ಸಂಕಷ್ಟದಲ್ಲಿರುವ ಸಮಾಜದ ನೋವನ್ನು ಸರ್ಕಾರಕ್ಕೆ ತಲುಪಿಸಿ ನೆರವಾಗುವ ಪತ್ರಕರ್ತರ ಶ್ರೇಯೋಭಿವೃದ್ದಿಗೆ ಈಗಾಗಲೇ ₹ 10 ಲಕ್ಷ ನೀಡಿದ್ದೇನೆ. ಮುಂದೆಯೂ ಎಲ್ಲಾ ರೀತಿಯ ಸಹಕಾರ ಕೊಡುತ್ತೇನೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಆರ್‌.ಮನೋಹರ್ ತಿಳಿಸಿದರು.

ವೃತ್ತಿ ಮೌಲ್ಯ ಉಳಿಸಿ: ‘ಪತ್ರಿಕಾ ವೃತ್ತಿ ಮೌಲ್ಯಗಳನ್ನು ಉಳಿಸುವ ಕಾರ್ಯ ಅಗತ್ಯವಾಗಿದೆ. ಪತ್ರಿಕೆ ಸಮಾಜಕ್ಕಾಗಿಯೇ ಹೊರತು ಸ್ವಾರ್ಥಕ್ಕಾಗಿ ಅಲ್ಲ ಎಂಬುದನ್ನು ಮನಗಂಡು ಕೆಲಸ ಮಾಡಬೇಕು. ಪತ್ರಕರ್ತರು, ರಾಜಕಾರಣಿಗಳು, ಅಧಿಕಾರಿಗಳು ಸಮಾಜಮುಖಿಯಾಗಿ ಕೆಲಸ ಮಾಡಿದರೆ ಮಾತ್ರ ದೇಶದ ಉದ್ಧಾರ ಸಾಧ್ಯ’ ಎಂದು ಶಾಸಕ ಕೆ.ವೈ.ನಂಜೇಗೌಡ ಅಭಿಪ್ರಾಯಪಟ್ಟರು.

‘ಸಮಾಜವನ್ನು ಸರಿ ದಾರಿಯಲ್ಲಿ ಮುನ್ನಡೆಸುವ ಪತ್ರಿಕಾ ರಂಗದ ಜವಾಬ್ದಾರಿ ಹೆಚ್ಚಿನದು. ಬಂಗಾರಪೇಟೆ ಪತ್ರಕರ್ತರ ಸಂಘದ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಿ ಕೊಡುತ್ತೇವೆ ಮತ್ತು ಕಟ್ಟಡ ನಿರ್ಮಾಣಕ್ಕೆ ₹ 5 ಲಕ್ಷ ನೆರವು ನೀಡುತ್ತೇವೆ’ ಎಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.

ಸಾಧಕ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಹಾಗೂ ಪದವಿ ತರಗತಿಯಲ್ಲಿ ಉತ್ತಮ ಫಲಿತಾಂಶ ಸಾಧನೆ ಮಾಡಿದ ಪತ್ರಕರ್ತರ ಮಕ್ಕಳಿಗೆ ನಗದು ಪುರಸ್ಕಾರ ನೀಡಲಾಯಿತು.

ಶಾಸಕ ಹಾಗೂ ರಾಜ್ಯ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ನಾಗೇಶ್, ವಿಧಾನ ಪರಿಷತ್ ಸದಸ್ಯ ಗೋವಿಂದರಾಜು, ಜಿಲ್ಲಾಧಿಕಾರಿ ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್‌ಬಾಬು, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ಬಿ.ವಿ.ಗೋಪಿನಾಥ್‌ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು