ಶನಿವಾರ, ಜುಲೈ 24, 2021
28 °C
ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ ರೈತ ಸಂಘ ಸದಸ್ಯರು

ಇಂದಿರಾ ಕ್ಯಾಂಟೀನ್‌ನಲ್ಲಿ ಅಕ್ರಮ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲೆಯ, ಕೋಲಾರ, ಬಂಗಾರಪೇಟೆ ಹಾಗೂ ಶ್ರೀನಿವಾಸಪುರದಲ್ಲಿ ಇಂದಿರಾ ಕ್ಯಾಂಟೀನ್‌ ನಡೆಸುತ್ತಿರುವ ರಿವಾರ್ಡ್‌ ಸಂಸ್ಥೆ ಮಾಲೀಕರು ಸರ್ಕಾರಕ್ಕೆ ನಕಲಿ ಬಿಲ್‌ ನೀಡಿ ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಶನಿವಾರ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರಿಗೆ ದೂರು ಸಲ್ಲಿಸಿದರು.

‘ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರು ನೀಡುತ್ತಿರುವ ಆಹಾರದ ಗುಣಮಟ್ಟ ಕಳಪೆಯಾಗಿದೆ. ಜತೆಗೆ ಕಡಿಮೆ ಪ್ರಮಾಣದಲ್ಲಿ ಆಹಾರ ನೀಡಿ ಗ್ರಾಹಕರನ್ನು ವಂಚಿಸುತ್ತಿದ್ದಾರೆ. ಈ ಸಂಬಂಧ ಅಧಿಕಾರಿಗಳಿಗೆ ದೂರು ನೀಡಿದರೂ ಗುತ್ತಿಗೆದಾರರ ಅಕ್ರಮ ತಡೆಗೆ ಕ್ರಮ ಕೈಗೊಂಡಿಲ್ಲ’ ಎಂದು ಸಂಘಟನೆ ಸದಸ್ಯರು ದೂರಿದರು.

‘ರಿವಾರ್ಡ್‌ ಸಂಸ್ಥೆಯು ಕೋಲಾರ, ಬಂಗಾರಪೇಟೆ ಮತ್ತು ಶ್ರೀನಿವಾಸಪುರದ ಇಂದಿರಾ ಕ್ಯಾಂಟೀನ್‌ಗಳ ಟೆಂಡರ್‌ ಪಡೆದಿದೆ. ಪ್ರತಿನಿತ್ಯ ಕ್ಯಾಂಟೀನ್‌ನಲ್ಲಿ ಮಾರಾಟವಾಗುವ ತಿಂಡಿ ಮತ್ತು ಊಟದ ಸಂಖ್ಯೆಗೂ ಗುತ್ತಿಗೆದಾರರು ಸರ್ಕಾರಕ್ಕೆ ಸಲ್ಲಿಸುತ್ತಿರುವ ಬಿಲ್‌ನಲ್ಲಿ ನಮೂದಿಸಿರುವ ಪ್ರಮಾಣಕ್ಕೆ ವ್ಯತ್ಯಾಸವಿದೆ’ ಎಂದು ಸಂಘಟನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶಿವಪ್ಪ ಆರೋಪಿಸಿದರು.

‘ತಿಂಡಿ ಮತ್ತು ಊಟದ ಸಂಬಂಧ ಕ್ಯಾಂಟೀನ್‌ ಗುತ್ತಿಗೆದಾರರು ಸರ್ಕಾರಕ್ಕೆ ಸುಳ್ಳು ಲೆಕ್ಕ ಕೊಡುತ್ತಿದ್ದಾರೆ. ಕ್ಯಾಂಟೀನ್‌ಗಳ ಮೇಲ್ವಿಚಾರಣೆ ನಡೆಸಬೇಕಾದ ನಗರಸಭೆ ಹಾಗೂ ಪುರಸಭೆ ಅಧಿಕಾರಿಗಳು ಲಂಚದಾಸೆಗೆ ಗುತ್ತಿಗೆದಾರರ ಜತೆ ಶಾಮೀಲಾಗಿದ್ದಾರೆ. ಹೀಗಾಗಿ ಗುತ್ತಿಗೆದಾರರು ನಿರಾತಂಕವಾಗಿ ಅಕ್ರಮ ನಡೆಸುತ್ತಿದ್ದಾರೆ’ ಎಂದು ಕಿಡಿಕಾರಿದರು.

ಸಮಗ್ರ ತನಿಖೆ: ‘ಕ್ಯಾಂಟೀನ್‌ಗಳಲ್ಲಿ ನಡೆಯುತ್ತಿರುವ ಅಕ್ರಮವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕು. ಅಕ್ರಮಕ್ಕೆ ನೆರವು ನೀಡುತ್ತಿರುವ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಮತ್ತು ಸೇವೆಯಿಂದ ಅಮಾನತು ಮಾಡಬೇಕು. ಗುತ್ತಿಗೆದಾರರ ಟೆಂಡರ್‌ ರದ್ದುಪಡಿಸಿ ಅವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು’ ಎಂದು ಸಂಘಟನೆ ಸದಸ್ಯರು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್.ರಾಮೇಗೌಡ, ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ, ಉಪಾಧ್ಯಕ್ಷ ಚಂದ್ರಪ್ಪ, ಸದಸ್ಯರಾದ ಕೃಷ್ಣಪ್ಪ, ಮುನಿಕೃಷ್ಣಪ್ಪ, ಸೋಮಶೇಖರ್‌ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು