14ರಿಂದ ಅನಿರ್ದಿಷ್ಟಾವಧಿ ಧರಣಿ

7
ಬುಡ್ಗ ಜಂಗಮ ಸಮುದಾಯಕ್ಕೆ ಜಾತಿ ಪ್ರಮಾಣಪತ್ರ ನೀಡಲು ಮೀನಾಮೇಷ

14ರಿಂದ ಅನಿರ್ದಿಷ್ಟಾವಧಿ ಧರಣಿ

Published:
Updated:

ಕೋಲಾರ: ‘ಬುಡ್ಗ ಜಂಗಮ ಸಮುದಾಯದವರಿಗೆ ಜಾತಿ ಪ್ರಮಾಣಪತ್ರ ನೀಡಲು ಮೀನಾಮೇಷ ಎಣಿಸುತ್ತಿರುವ ಜಿಲ್ಲಾಡಳಿತದ ಕ್ರಮ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಆ.14ರಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತೇವೆ’ ಎಂದು ದಲಿತ ಸಿಂಹ ಸೇನೆ ರಾಜ್ಯ ಘಟಕದ ಅಧ್ಯಕ್ಷ ಪ್ರಕಾಶ್ ತಿಳಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬುಡ್ಗ ಜಂಗಮ ಜಾತಿಯವರಿಗೆ ಜಾತಿ ಪ್ರಮಾಣಪತ್ರ ನೀಡುವಂತೆ ಸರ್ಕಾರದ ಆದೇಶವಿದೆ. ಆದರೆ, ಅಧಿಕಾರಿಗಳು ಜಾತಿ ಪ್ರಮಾಣಪತ್ರ ನೀಡದೆ ಸಮುದಾಯಕ್ಕೆ ತೊಂದರೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಬೈರಾಗಿಗಳು ಸಾಮಾನ್ಯ ವರ್ಗದವರು. ಅಲೆಮಾರಿ ಹಂದಿ ಜೋಗಿಗಳು ಪರಿಶಿಷ್ಟ ಜಾತಿಗೆ ಸೇರಿದವರು ಎಂದು ಗೆಜೆಟ್‌ ಪತ್ರದಲ್ಲಿದೆ. ಇಷ್ಟಾದರೂ ಜಿಲ್ಲಾಡಳಿತವು ಜಾತಿ ಪ್ರಮಾಣಪತ್ರ ಕೊಡುತ್ತಿಲ್ಲ. ಬೈರಾಗಿಗಳು ಯಾರು, ಬುಡ್ಗ ಜಂಗಮರು ಯಾರು ಎಂಬುದನ್ನು ಜಿಲ್ಲಾಡಳಿತ ಮೊದಲು ಸ್ಪಷ್ಟಪಡಿಸಬೇಕು’ ಎಂದು ಒತ್ತಾಯಿಸಿದರು.

‘ಬುಡ್ಗ ಜಂಗಮ ಸಮುದಾಯದವರಿಗೆ ಈ ಹಿಂದೆ ಜಾತಿ ಪ್ರಮಾಣಪತ್ರ ನೀಡಲಾಗಿತ್ತು. ಆದರೆ, ಜನಪ್ರತಿನಿಧಿಯೊಬ್ಬರು ಬುಡ್ಗ ಜಂಗಮ ಜಾತಿಯವರೆಂದು ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಮೀಸಲಾತಿ ದುರ್ಬಳಕೆ ಮಾಡಿಕೊಂಡಿದ್ದರು. ಈ ಕಾರಣಕ್ಕೆ ಅಧಿಕಾರಿಗಳು ಇಡೀ ಸಮುದಾಯಕ್ಕೆ ಜಾತಿ ಪ್ರಮಾಣಪತ್ರ ನಿರಾಕರಿಸುತ್ತಿದ್ದಾರೆ’ ಎಂದು ದೂರಿದರು.

ಹೊಣೆಗೇಡಿತನ: ’ಜಾತಿ ಪ್ರಮಾಣಪತ್ರ ಸಿಗದ ಕಾರಣ ಸಮುದಾಯದ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ. ಮತ್ತೊಂದೆಡೆ ಉದ್ಯೋಗ ಮೀಸಲಾತಿಯಿಂದ ವಂಚಿತರಾಗುತ್ತಿದ್ದಾರೆ. ಇದಕ್ಕೆಲ್ಲಾ ಜಿಲ್ಲಾಡಳಿತದ ಹೊಣೆಗೇಡಿತನವೇ ಕಾರಣ’ ಎಂದು ಅಂಬೇಡ್ಕರ್ ಅಲೆಮಾರಿ ಬುಡ್ಗ ಜಂಗಮರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮುರುಗೇಶ್ ಆಕ್ರೋಶ ವ್ಯಕ್ತಪಡಿಸಿದರು.

‘ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯಗಳಲ್ಲಿ ಮೂಲಸೌಕರ್ಯಗಳಿಲ್ಲ. ಹಲವೆಡೆ ವಾರ್ಡನ್‌ಗಳೇ ಇಲ್ಲ. ಕನಿಷ್ಠ ವಿದ್ಯಾರ್ಹತೆ ಇಲ್ಲದ ಅಡುಗೆ ಸಿಬ್ಬಂದಿಗೆ ವಾರ್ಡನ್ ಹುದ್ದೆಯ ಜವಾಬ್ದಾರಿ ನೀಡಲಾಗಿದೆ. ಹಾಸ್ಟೆಲ್‌ಗಳ ವ್ಯವಸ್ಥೆ ಶೋಚನೀಯವಾಗಿದ್ದು, ಮೂಲಸೌಕರ್ಯ ಸಮಸ್ಯೆ ಪರಿಹರಿಸುವಂತೆ ಧರಣಿಯಲ್ಲಿ ಒತ್ತಾಯಿಸುತ್ತೇವೆ. ಸಮುದಾಯದ ಜನ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದರು.

ದಲಿತ ಸಿಂಹ ಸೇನೆ ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಂಜುನಾಥ್, ಅಂಬೇಡ್ಕರ್ ಅಲೆಮಾರಿ ಬುಡ್ಗ ಜಂಗಮರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯ ಬಿ.ಮುರಳಿ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !