ಸೋಮವಾರ, ಸೆಪ್ಟೆಂಬರ್ 16, 2019
26 °C
ಇಲ್ಲ ಇಲ್ಲಗಳ ನಡುವೆ

ಮೂಲಸೌಕರ್ಯ ಮರೀಚಿಕೆ: ಶಹಿನ್‌ಷಾ ನಗರ ನಿವಾಸಿಗಳಿಗೆ ಬದುಕು ನಿತ್ಯನರಕ

Published:
Updated:
Prajavani

ಕೋಲಾರ: ಹನಿ ಹನಿ ನೀರಿಗೂ ತತ್ವಾರ... ಕಣ್ಣು ಹಾಯಿಸಿದಲ್ಲೆಲ್ಲಾ ಕಸದ ರಾಶಿ... ಚರಂಡಿ ತುಂಬಿ ರಸ್ತೆಗೆ ಹರಿದು ನಿಂತ ಕೊಳಚೆ ನೀರು... ಅಪಾಯಕ್ಕೆ ಬಾಯ್ತೆರೆದಿರುವ ಮ್ಯಾನ್‌ಹೋಲ್‌... ವಿಲೇವಾರಿಯಾಗದೆ ದುರ್ನಾತ ಬೀರುತ್ತಿರುವ ತ್ಯಾಜ್ಯ...

ಇದು ಯಾವುದೋ ಕುಗ್ರಾಮದ ಚಿತ್ರಣವಲ್ಲ. ಬದಲಿಗೆ ಜಿಲ್ಲಾ ಕೇಂದ್ರದ ಶಹಿನ್‌ಷಾ ನಗರದ ದುಸ್ಥಿತಿ. ಕುಡಿಯುವ ನೀರು, ರಸ್ತೆ, ಬೀದಿ ದೀಪ, ಚರಂಡಿ ಹೀಗೆ ಪಟ್ಟಿ ಮಾಡಿದರೆ ಸಮಸ್ಯೆಗಳ ಸರಮಾಲೆಯೇ ಇಲ್ಲಿದೆ. ಇಲ್ಲ ಇಲ್ಲಗಳ ನಡುವೆ ಬದುಕು ಸಾಗಿಸುತ್ತಿರುವ ಸ್ಥಳೀಯರ ಗೋಳು ಹೇಳತೀರದು.

ನಗರಸಭೆಯ 18ನೇ ವಾರ್ಡ್‌ ವ್ಯಾಪ್ತಿಯ ಈ ಬಡಾವಣೆಯ ವ್ಯಾಪ್ತಿ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿದೆ. ನಗರಸಭೆ ಆಡಳಿತ ಯಂತ್ರವು ಬಡಾವಣೆಯ ಅಭಿವೃದ್ಧಿ ನಿರ್ಲಕ್ಷಿಸಿದ್ದು, ಸ್ಥಳೀಯರ ಮೂಲಸೌಕರ್ಯದ ಕೂಗು ಅರಣ್ಯರೋದನವಾಗಿದೆ.

ನಗರದ ಇತರೆ ಬಡಾವಣೆಗಳಂತೆ ಶಹಿನ್‌ಷಾ ನಗರದಲ್ಲೂ ನೀರಿನ ಸಮಸ್ಯೆ ಗಂಭೀರವಾಗಿದೆ. ಬಡಾವಣೆಯ ಬಹುತೇಕ ಕೊಳವೆ ಬಾವಿಗಳಲ್ಲಿ ನೀರು ಬತ್ತಿದ್ದು, ಹೊಸದಾಗಿ ಕೊಳವೆ ಬಾವಿ ಕೊರೆಸಿಲ್ಲ. ಮನೆಗಳಿಗೆ ನಲ್ಲಿ ಸಂಪರ್ಕವಿದ್ದರೂ ನೀರು ಬಂದು ವರ್ಷವಾಗಿದೆ. ಮತ್ತೊಂದೆಡೆ ನಗರಸಭೆ ವತಿಯಿಂದ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿಲ್ಲ.

ಹೀಗಾಗಿ ಬಡಾವಣೆ ನಿವಾಸಿಗಳು ಬೇರೆ ದಾರಿ ಕಾಣದೆ ಖಾಸಗಿ ಟ್ಯಾಂಕರ್‌ ಮಾಲೀಕರಿಗೆ ಹಣ ಕೊಟ್ಟು ನೀರು ಖರೀದಿಸುತ್ತಿದ್ದಾರೆ. ಪ್ರತಿ ಟ್ಯಾಂಕರ್ ಲೋಡ್‌ ನೀರಿನ ಬೆಲೆ ₹ 500 ಇದ್ದು, ಸ್ಥಳೀಯರು ತಮ್ಮ ದುಡಿಮೆಯ ಬಹುಪಾಲು ಹಣವನ್ನು ನೀರಿಗೆ ಖರ್ಚು ಮಾಡುವಂತಾಗಿದೆ.

ಚರಂಡಿ ಅವಾಂತರ: ಬಡಾವಣೆಯ ಬಹುಪಾಲು ಚರಂಡಿಗಳನ್ನು ಏಳೆಂಟು ತಿಂಗಳಿಂದ ಸ್ವಚ್ಛಗೊಳಿಸಿಲ್ಲ. ಹೀಗಾಗಿ ಚರಂಡಿಗಳಲ್ಲಿ ಕಸ ತುಂಬಿಕೊಂಡಿದ್ದು, ಕೊಳಚೆ ನೀರಿನ ಹರಿವಿಗೆ ಅಡ್ಡಿಯಾಗಿದೆ. ಹಲವೆಡೆ ಚರಂಡಿ ನೀರು ರಸ್ತೆ ಮೇಲೆ ಹರಿದು ನಿಂತು ಅವಾಂತರ ಸೃಷ್ಟಿಸುತ್ತಿದೆ. ಮತ್ತೊಂದೆಡೆ ಮ್ಯಾನ್‌ಹೋಲ್‌ಗಳು ಕಟ್ಟಿಕೊಂಡು ಮಲಮೂತ್ರ ರಸ್ತೆಗೆ ಹರಿಯುತ್ತಿದೆ. ಮ್ಯಾನ್‌ಹೋಲ್‌ ಮುಚ್ಚಳಗಳು ಹಾಳಾಗಿ ವರ್ಷವೇ ಕಳೆದರೂ ಅವುಗಳನ್ನು ಬದಲಿಸಿಲ್ಲ. ಕೆಲವೆಡೆ ಮ್ಯಾನ್‌ಹೋಲ್‌ಗಳಿಗೆ ಮುಚ್ಚಳವೇ ಇಲ್ಲ.

ರಸ್ತೆಗಳು ಕಚ್ಚಾ ರಸ್ತೆಗಳಾಗಿರುವುದರಿಂದ ತುಂತುರು ಮಳೆ ಬಂದರೂ ರಾಡಿಯಾಗುತ್ತವೆ. ರಸ್ತೆಯ ಗುಂಡಿಗಳಲ್ಲಿ ಮಳೆ ನೀರು ನಿಂತು ಇಡೀ ರಸ್ತೆ ಕೆಸರು ಗದ್ದೆಯಂತಾಗುತ್ತದೆ. ಮಳೆಗಾಲದಲ್ಲಿ ರಸ್ತೆಯ ಅಕ್ಕಪಕ್ಕದ ಮನೆಗಳಿಗೆ ಯುಜಿಡಿ ಹಾಗೂ ಮಳೆ ನೀರು ನುಗ್ಗುವುದು ಸಾಮಾನ್ಯವಾಗಿದೆ.

ಕಸದ ದುರ್ನಾತ: ಬಡಾವಣೆಯಲ್ಲಿ ಕಸ ವಿಲೇವಾರಿ ಪ್ರಕ್ರಿಯೆ ಹಳ್ಳ ಹಿಡಿದಿದೆ. ನಗರಸಭೆ ಪೌರ ಕಾರ್ಮಿಕರು ಪ್ರತಿನಿತ್ಯ ಮನೆ ಬಳಿ ಬಂದು ಕಸ ಸಂಗ್ರಹಿಸುತ್ತಿಲ್ಲ. ಹೀಗಾಗಿ ಸ್ಥಳೀಯರು ರಸ್ತೆ, ಚರಂಡಿಗಳ ಅಕ್ಕಪಕ್ಕ ಹಾಗೂ ಖಾಲಿ ನಿವೇಶನದಲ್ಲಿ ಕಸ ಎಸೆಯುತ್ತಿದ್ದಾರೆ. ಕಸವು ಚರಂಡಿ ಹಾಗೂ ರಸ್ತೆಗಳಿಗೆ ಹರಡಿಕೊಂಡಿದ್ದು, ಇಡೀ ಪ್ರದೇಶ ಕೊಳೆಗೇರಿಯಂತಾಗಿದೆ.

ಖಾಲಿ ಜಾಗದಲ್ಲಿ ರಾಶಿಯಾಗಿ ಬಿದ್ದಿರುವ ಕಸದ ತೆರವಿಗೆ ಪೌರ ಕಾರ್ಮಿಕರು ಕ್ರಮ ಕೈಗೊಂಡಿಲ್ಲ. ಇದರಿಂದ ಕಸ ಸ್ಥಳದಲ್ಲೇ ಕೊಳೆತು ದುರ್ನಾತ ಬೀರುತ್ತಿದೆ. ಕಸದ ರಾಶಿಯಿಂದ ಸೊಳ್ಳೆ, ನೊಣ, ಹಂದಿ ಹಾಗೂ ಬೀದಿ ನಾಯಿಗಳ ಕಾಟ ಹೆಚ್ಚಿದ್ದು, ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗ ಭೀತಿ ಮನೆ ಮಾಡಿದೆ.

Post Comments (+)