ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕಿ ವೇತನ ಪಾವತಿಗೆ ಒತ್ತಾಯ

Last Updated 17 ಆಗಸ್ಟ್ 2019, 14:26 IST
ಅಕ್ಷರ ಗಾತ್ರ

ಕೋಲಾರ: ಪ್ರೌಢ ಶಾಲಾ ಶಿಕ್ಷಕರ ನಾಲ್ಕು ತಿಂಗಳ ಬಾಕಿ ವೇತನ ಪಾವತಿ ಮಾಡುವಂತೆ ಒತ್ತಾಯಿಸಿ, ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ ಎದುರು ಶನಿವಾರ ಶಿಕ್ಷಕರು ಧರಣಿ ನಡೆಸಿದರು.

ನೌಕರರ ಸಂಘದ ಜಿಲ್ಲಾ ಘಟಲದ ಪ್ರಧಾನ ಕಾರ್ಯದರ್ಶಿ ವಿ.ಮುರಳಿಮೋಹನ್ ಮಾತನಾಡಿ, ‘ವೇತನವನ್ನೇ ನಂಬಿರುವ ಶಿಕ್ಷಕರ ಬದುಕು ಸಂಕಷ್ಟದಲ್ಲಿದೆ. ಈ ಸಂಬಂಧ ಇಲಾಖೆಯ ಉಪ ನಿರ್ದೇಶಕರು, ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ದೂರಿದರು.

‘ಕೋಲಾರ, ಶ್ರೀನಿವಾಸಪುರ ಸೇರಿದಂತೆ ಕೆಲ ತಾಲ್ಲೂಕುಗಳಲ್ಲಿ ಶಿಕ್ಷಕರಿಗೆ ವೇತನವಾಗಿಲ್ಲ. ರಾಷ್ಟ್ರೀಯ ಮಾಧ್ಯಮ ಶಿಕ್ಷಣ ಅಭಿಯಾನದಡಿ ನೇಮಕಗೊಂಡ ಶಿಕ್ಷಕರಿಗೂ ವೇತನ ನೀಡದೇ ಇಲಾಖೆ ಅನ್ಯಾಯ ಎಸಗಿದೆ’ ಎಂದು ಆರೋಪಿಸಿದರು.

‘ಮೇ ತಿಂಗಳಿಂದ ಸಂಬಳ ಬಟವಾಡೆಯಾಗದ ಕಾರಣ ಶಿಕ್ಷಕರು ಜೀವನ ಮುನ್ನಡೆಸಲು ಸಂಕಷ್ಟ ಅನುಭವಿಸುವಂತಾಗಿದೆ. ಅಧಿಕಾರಿಗಳ ಶಿಕ್ಷಕರ ಸಮಸ್ಯೆ ಅರ್ಥ ಮಾಡಿಕೊಂಡು ವೇತನ ಬಿಡುಗಡೆಗೆ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಎಲ್.ಶಂಕರಪ್ಪ ಮಾನತಾಡಿ, ‘ಸರ್ಕಾರದ ಆದೇಶದಂತೆ ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಶಿಕ್ಷಕರಿಗೆ ವೇತನ ಬಟವಾಡೆ ಮಾಡಬೇಕು, ಸರ್ಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರಿಗೂ ಬಾಕಿ ಇರುವ 4 ತಿಂಗಳ ವೇತನ ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ಅನುದಾನ ಕೊರತೆಯಾಗುತ್ತಿದಂತೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿಕೊಟ್ಟು ಹಣ ಬಿಡುಗಡೆ ಮಾಡಿಸಿಕೊಳ್ಳಬೇಕು. ತಾಲ್ಲೂಕಿನ ಶಿಕ್ಷಕರು ಮತ್ತು ಜಿಲ್ಲೆಯ ಆರ್‍ಎಂಎಸ್‍ಎ ಅಡಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರು ಏನು ತಪ್ಪು ಮಾಡಿದ್ದಾರೆ’ ಎಂದು ಪ್ರಶ್ನಿಸಿದರು.

‘ವೈದ್ಯಕೀಯ ವೆಚ್ಚಕ್ಕೆ ಸಂಬಂಧಿಸಿದಂತೆ ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿಯಲ್ಲಿ ಬಾಕಿ ಇರುವ ಬಿಲ್ಲುಗಳನ್ನು ಕೂಡಲೇ ವಿಲೇವಾರಿ ಮಾಡಬೇಕು, ವರ್ಗಾವಣೆಯಲ್ಲಾಗಿರುವ ಗೊಂದಲಗಳನ್ನು ನಿವಾರಣೆ ಮಾಡಬೇಕು’ ಎಂದರು.

ಮುಖ್ಯ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ಸಹ ಶಿಕ್ಷಕರ ಸಂಘದ ರಾಜ್ಯ ಸಹ ಕಾರ್ಯದರ್ಶಿ ದಾಸಪ್ಪ, ಪದಾಧಿಕಾರಿಗಳಾದ ಮೋಹಾನಾಚಾರಿ, ಶರಣಪ್ಪ, ರಾಧಾಮಣಿ, ಗಂಗಾಧರಮೂರ್ತಿ, ಪಿ.ಲೀಲಾ, ಪ್ರೌಢಶಾಲಾ ವೃತ್ತಿ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT