ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಡಿಪಿಐ ಕಚೇರಿ ಎದುರು ಕ್ಯಾಮ್ಸ್‌ ಧರಣಿ

ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯೆ ಪರಿಹಾರಕ್ಕೆ ಒತ್ತಾಯ
Last Updated 22 ಜೂನ್ 2020, 13:45 IST
ಅಕ್ಷರ ಗಾತ್ರ

ಕೋಲಾರ: ಕೋವಿಡ್–19 ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಖಾಸಗಿ ಅನುದಾನ ರಹಿತ ಶಾಲೆಗಳ ರಾಜ್ಯ ಸಂಘಟನೆ (ಕ್ಯಾಮ್ಸ್‌) ಸದಸ್ಯರು ಇಲ್ಲಿ ಸೋಮವಾರ ಡಿಡಿಪಿಐ ಕಚೇರಿ ಎದುರು ಧರಣಿ ನಡೆಸಿದರು.

‘ಕೋವಿಡ್‌–19 ಭೀತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಲಾ ಕಾಲೇಜುಗಳು ಬಂದ್‌ ಆಗಿವೆ. ಇದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ ಶಿಕ್ಷಕರು ಹಾಗೂ ಸಿಬ್ಬಂದಿಯು ಕಳೆದ 4 ತಿಂಗಳಿಂದ ವೇತನವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಮತ್ತೊಂದೆಡೆ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಸಂಕಷ್ಟಕ್ಕೆ ಸಿಲುಕಿವೆ’ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ರಮೇಶ್‌ಬಾಬು ಹೇಳಿದರು.

‘ಸೇವಾ ಮನೋಭಾವದಿಂದ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ ಇರುವ ಶಿಕ್ಷಕರಿಗೆ ಸರ್ಕಾರ ಪರಿಹಾರ ನೀಡಿ ಆರ್ಥಿಕವಾಗಿ ಶಿಕ್ಷಕರ ಕೈ ಹಿಡಿಯಬೇಕಿದೆ. ಖಾಸಗಿ ಶಾಲೆ ಆಡಳಿತ ಮಂಡಳಿಗಳಿಗೆ ಬಡ್ಡಿ ರಹಿತ ಸಾಲ ಸೌಲಭ್ಯ ಕಲ್ಪಿಸಬೇಕು. ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ನೆರವಿಗೆ ಧಾವಿಸಬೇಕು’ ಎಂದು ಆಗ್ರಹಿಸಿದರು.

‘ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ ಸುಮಾರು 8.50 ಲಕ್ಷ ಶಿಕ್ಷಕರು ವೇತನವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಇವರ ಜೀವನ ನಿರ್ವಹಣೆಗೆ ಕಷ್ಟವಾಗಿದೆ. ಬಡ್ಡಿ ಸಾಲ ಮಾಡಿ ಬದುಕು ಸಾಗಿಸುತ್ತಿರುವ ಈ ಶಿಕ್ಷಕರು ಸಾಲದ ಸುಳಿಗೆ ಸಿಲುಕಿದ್ದಾರೆ. ಹೀಗಾಗಿ ಸರ್ಕಾರ ತಕ್ಷಣವೇ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸಾಲ ನೀಡಬೇಕು’ ಎಂದು ಮನವಿ ಮಾಡಿದರು.

ಪರಿಹಾರ ಪ್ಯಾಕೇಜ್: ‘ರಾಜ್ಯದ ಶೈಕ್ಷಣಿಕ ಪ್ರಗತಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಹಾಗೂ ಈ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ ಪಾತ್ರ ನಿರ್ಣಾಯಕ. ಸರ್ಕಾರ ಈ ಶಿಕ್ಷಕರನ್ನು ಸರ್ಕಾರಿ ಶಾಲಾ ಶಿಕ್ಷಕರಂತೆಯೇ ಗೌರವಿಸಿ ಪ್ರೋತ್ಸಾಹಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಬೇಡಿಕೆ ಈಡೇರಿಕೆಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕು’ ಎಂದು ಕ್ಯಾಮ್ಸ್ ಜಿಲ್ಲಾ ಸಮಿತಿ ಅಧ್ಯಕ್ಷ ಎ.ಸದಾನಂದ ಹೇಳಿದರು.

‘ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಖಾಸಗಿ ಶಾಲೆಗಳಿಗೆ ದಾಖಲಾದ ಮಕ್ಕಳ ಶೈಕ್ಷಣಿಕ ವೆಚ್ಚದ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡಬೇಕೆಂಬ ನಿಯಮವಿದೆ. ಆದರೆ, ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಬಡ್ಡಿ ಸಮೇತ ಈ ಹಣ ಬಿಡುಗಡೆ ಮಾಡಬೇಕು. ಖಾಸಗಿ ಶಾಲಾ ವಾಹನಗಳ ತೆರಿಗೆ ಮತ್ತು ವಿಮೆ ಮೊತ್ತವನ್ನು ಸರ್ಕಾರವೇ ಭರಿಸಬೇಕು’ ಎಂದು ಮನವಿ ಮಾಡಿದರು.

ಕ್ಯಾಮ್ಸ್‌ ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ಮುನಿಯಪ್ಪ, ಎಸ್.ಶೈಲೇಶ್, ನಗರಸಭೆ ಸದಸ್ಯ ಬಿ.ಎಂ.ಮುಬಾರಕ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT