ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಕನ್ನಡ ಅನ್ನದ ಭಾಷೆಯಾಗಿ ಉಳಿಯಲಿ -ವಿಜ್ಞಾನ ಲೇಖಕ ಪುರುಷೋತ್ತಮರಾವ್‌

Last Updated 5 ಮೇ 2022, 16:01 IST
ಅಕ್ಷರ ಗಾತ್ರ

ಕೋಲಾರ: ‘ಕೋಟ್ಯಂತರ ಮಂದಿಗೆ ಅನ್ನದ ಭಾಷೆಯಾಗಿರುವ ಕನ್ನಡವನ್ನು ಅನ್ನದ ಭಾಷೆಯಾಗಿಯೇ ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದು ವಿಜ್ಞಾನ ಲೇಖಕ ಎಚ್.ಎ.ಪುರುಷೋತ್ತಮರಾವ್‌ ಕಿವಿಮಾತು ಹೇಳಿದರು.

ಇಲ್ಲಿ ಗುರುವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿ, ‘ಕನ್ನಡಿಗರು ಅಭಿಮಾನ ಶೂನ್ಯರಾಗಿರುವುದರಿಂದ. ಕನ್ನಡಕ್ಕೆ ಕನ್ನಡಿಗರೇ ಶತ್ರುಗಳಾಗಿರುವುದರಿಂದ ಕನ್ನಡ ಅನ್ನದ ಭಾಷೆಯಾಗುತ್ತಿಲ್ಲ’ ಎಂದು ವಿಷಾದಿಸಿದರು.

‘ಗಡಿ ಭಾಗದಲ್ಲಿ ಕನ್ನಡ ಧ್ವಜ ಸ್ತಂಭಗಳನ್ನು ನೆಟ್ಟರೆ ಸಾಲದು. ಗಡಿ ಭಾಗದಲ್ಲಿ ಕನ್ನಡ ಭಾಷೆಯನ್ನು ಪ್ರತಿಯೊಬ್ಬರಿಗೂ ಕಲಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ನಡೆಸುವಂತೆ ಆಗಬೇಕು. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಹೋರಾಟಗಾರರು ಹಾಗೂ ಕನ್ನಡಪರ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಕನ್ನಡದ ಪರವಾಗಿ ದೊಡ್ಡ ಧ್ವನಿಯಾಗಬೇಕು’ ಎಂದು ಸಲಹೆ ನೀಡಿದರು.

‘ಕನ್ನಡ ಸಾಹಿತ್ಯ ಪರಿಷತ್ ಭಾಷೆ ನೆಲ ಜಲದ ವಿಚಾರದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಅನೇಕ ಕವಿಗಳು, ಲೇಖಕರು, ಸಾಹಿತಿಗಳನ್ನು ಪೋಷಿಸಿ ಪುರಸ್ಕರಿಸಿದೆ. ಕನ್ನಡ ಸದಾಕಾಲ ಮನೆ ಮನಗಳ ಮಾತಾಗಿ ಉಳಿಯಬೇಕು. ಮನೆಯೊಳಗೆ ಮಾತೃ ಭಾಷೆ ಇರಲಿ, ಮನೆ ಹೊರಗೆ ನೆರೆ ಭಾಷೆ ಇರಲಿ, ಕರುನಾಡಿನಲ್ಲಿ ಕನ್ನಡ ಮನೆ ಮನಗಳ ಮಾತಾಗಿರಲಿ’ ಎಂದು ನಿವೃತ್ತ ಮುಖ್ಯ ಶಿಕ್ಷಕ ನಾರಾಯಣಪ್ಪ ಆಶಿಸಿದರು.

ದೂರದೃಷ್ಟಿಯ ಕೂಸು: ‘107 ವರ್ಷಗಳ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನಗಿದ್ದ ಸರ್‌ ಎಂ.ವಿಶ್ವೇಶ್ವರಯ್ಯರ ದೂರದೃಷ್ಠಿಯ ಕೂಸಾಗಿ ಕನ್ನಡ ಸಾಹಿತ್ಯ ಪರಿಷತ್ತು ಜನ್ಮ ತಾಳಿ ಇದೀಗ ರಾಜ್ಯ, ಜಿಲ್ಲೆ, ತಾಲ್ಲೂಕು ಮಟ್ಟದಿಂದ ಹೋಬಳಿ ಮಟ್ಟದವರೆವಿಗೂ ವಿಸ್ತಾರಗೊಂಡಿದೆ. ಪರಿಷತ್ತಿನಲ್ಲಿ ಮಹನೀಯರ 2 ಸಾವಿರಕ್ಕೂ ಹೆಚ್ಚು ದತ್ತಿ ಕಾರ್ಯಕ್ರಮಗಳಿದ್ದು, ಜಿಲ್ಲೆಯಲ್ಲಿ 18 ದತ್ತಿಗಳಿವೆ, ದತ್ತಿ ಕಾರ್ಯಕ್ರಮಗಳನ್ನು ಮೇ ಅಂತ್ಯದೊಳಗೆ ಪೂರ್ಣಗೊಳಿಸುವ ಜವಾಬ್ದಾರಿ ಇದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಬಿ.ಗೋಪಾಲಗೌಡ ವಿವರಿಸಿದರು.

‘ಕನ್ನಡ ಸಾಹಿತ್ಯ ಪರಿಷತ್ 107 ವರ್ಷಗಳ ಇತಿಹಾಸ ಹೊಂದಿದ್ದು, ಅನೇಕ ಕಾಲಘಟ್ಟಗಳನ್ನು ದಾಟಿ ಬಂದಿದೆ. ಈಗ ಪರಿಷತ್ತನ್ನು ಕನ್ನಡದ ಸಂರಕ್ಷಣೆಯ ಹೊಣೆಗಾರಿಕೆಯೊಂದಿಗೆ ಹೇಗೆ ಮುಂದುವರೆಸಬೇಕೆಂಬ ಸವಾಲು ಇದೆ. ಸಂಸ್ಥೆಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳಾಗಿರುವುದು ಅದೃಷ್ಟ’ ಎಂದು ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಕೆ.ಎಸ್.ಗಣೇಶ್ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ನಿವೃತ್ತ ಹಿರಿಯ ಕನ್ನಡ ಉಪನ್ಯಾಸಕಿ ಕೆ.ಎನ್.ವಿಮಲಾ ಅವರನ್ನು ಸನ್ಮಾನಿಸಲಾಯಿತು. ಕಸಾಪ ಜಿಲ್ಲಾ ಕೋಶಾಧ್ಯಕ್ಷ ವಿನಯ್ ಗಂಗಾಪುರ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT