ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲೂರು ಕೆರೆಗೆ ಕೆ.ಸಿ ವ್ಯಾಲಿ ನೀರು

ರೈತರ ಬದುಕು ಹಸನುಗೊಳಿಸಲು ಒತ್ತು: ಕೆ.ಆರ್‌. ರಮೇಶ್‌ಕುಮಾರ್‌ ಭರವಸೆ
Last Updated 8 ಜುಲೈ 2021, 3:24 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಅಂತರ್ಜಲ ವೃದ್ಧಿಸಿ ರೈತರ ಬದುಕನ್ನು ಹಸನು ಮಾಡುವ ಉದ್ದೇಶದಿಂದ ಕೆ.ಸಿ ವ್ಯಾಲಿ ನೀರನ್ನು ಕೆರೆಗಳಿಗೆ ಹರಿಸಲಾಗುತ್ತಿದೆ. ಕೃಷಿಕ ಸಮುದಾಯ ಅದರ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶಾಸಕ ಕೆ.ಆರ್. ರಮೇಶ್ ಕುಮಾರ್ ಹೇಳಿದರು.

ತಾಲ್ಲೂಕಿನ ಕಲ್ಲೂರು ಗ್ರಾಮದ ಕೆರೆಗೆ ಕೆ.ಸಿ ವ್ಯಾಲಿ ನೀರು ಹರಿಸುವ ಕಾಮಗಾರಿಗೆ ಬುಧವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಈ ಕೆರೆ 272 ಎಕರೆ ವಿಸ್ತೀರ್ಣ ಹೊಂದಿದೆ. ಆಲವಟ್ಟ ಕೆರೆಯಿಂದ ನೀರು ಹರಿಸಲಾಗುವುದು. ಕೆರೆ ತುಂಬಿದಾಗ ಸುತ್ತಮುತ್ತಲಿನ ಗ್ರಾಮಗಳ ಚಿತ್ರಣ ಬದಲಾಗಲಿದೆ. ಅಂತರ್ಜಲ ವೃದ್ಧಿಗೊಳ್ಳುವುದರಿಂದ ಕೃಷಿ ಚಟುವಟಿಕೆ ಮರುಜೀವ ಪಡೆದುಕೊಳ್ಳುತ್ತದೆ ಎಂದು ಹೇಳಿದರು.

‘ರಾಜಕೀಯ ಉದ್ದೇಶದಿಂದ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸುತ್ತಿಲ್ಲ. ನೀರಿನಲ್ಲಿ ರಾಜಕೀಯ ಮಾಡಬೇಕಾದ ಅಗತ್ಯವೂ ಇಲ್ಲ. ನಾನೂ ಸಹ ಕೃಷಿಕನಾಗಿದ್ದು, ಕೃಷಿ ಉದ್ದೇಶಕ್ಕೆ 18 ಕೊಳವೆಬಾವಿ ಕೊರೆಸಿ ನೀರಿನಿಂದ ವಂಚಿತನಾಗಿದ್ದೇನೆ. ಇಲ್ಲಿನ ರೈತರದು ಇದೇ ಪರಿಸ್ಥಿತಿಯಾಗಿದೆ’ ಎಂದರು.

ಅಂತರ್ಜಲ, ಮಳೆ ಕೊರತೆಯಿಂದ ರೈತ ಸಮುದಾಯ ಜರ್ಜರಿತವಾಗಿದೆ. ಜಮೀನಲ್ಲಿ ದುಡಿಯ ಬೇಕಿದ್ದ ರೈತರ ಮಕ್ಕಳು ನಗರದತ್ತ ಮುಖ ಮಾಡಿ, ಅಲ್ಪ ಸಂಪಾದನೆಗೆ ಹಗಲಿರುಳು ದುಡಿಯುತ್ತಿದ್ದಾರೆ ಎಂದರು.

ರೈತರು ಕೃಷಿಯನ್ನು ವೈಜ್ಞಾನಿಕವಾಗಿ ಕೈಗೊಳ್ಳಬೇಕು. ಕೇವಲ ಟೊಮೆಟೊ ಬೆಳೆಯಲು ಸೀಮಿತವಾಗಬಾರದು. ದೇಶ, ವಿದೇಶಗಳಲ್ಲಿ ಹೆಚ್ಚು ಬೇಡಿಕೆ ಇರುವ ಬೆಳೆಗಳ ಬಗ್ಗೆ ತಿಳಿದುಕೊಂಡು ಬೆಳೆಯಬೇಕು. ಸ್ಥಳೀಯ ಮಾರುಕಟ್ಟೆಗಳಿಗೆ ಮಾತ್ರವಲ್ಲದೆ, ವಿದೇಶಿ ಮಾರುಕಟ್ಟೆಗಳಿಗೆ ಉತ್ಪನ್ನ ಕಳಿಸಬೇಕು. ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದ ಹೆಚ್ಚು ಲಾಭವಾಗುವುದಿಲ್ಲ ಎಂದರು.

ತಹಶೀಲ್ದಾರ್ ಎಸ್.ಎಂ. ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಸ್. ಆನಂದ್, ಹಿರಿಯ ಸಹಾಯಕ ಕೃಷಿ ನಿರ್ದೇಶಕ ಎಂ. ಶ್ರೀನಿವಾಸ್, ಪೊಲೀಸ್ ಇನ್‌ಸ್ಪೆಕ್ಟರ್ ಸಿ. ರವಿಕುಮಾರ್, ಮುಖಂಡರಾದ ಕೆ. ಮಂಜುನಾಥರೆಡ್ಡಿ, ಮುನಿವೆಂಕಟಪ್ಪ, ರಾಮಕೃಷ್ಣಾರೆಡ್ಡಿ, ವೆಂಕಟರೆಡ್ಡಿ, ವೇಣುಗೊಪಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT