ಶನಿವಾರ, ನವೆಂಬರ್ 28, 2020
25 °C
ಕೋವಿಡ್‌ ಮಾರ್ಗಸೂಚಿ ಪಾಲನೆ: ನಿತ್ಯ ಬೆಂಗಳೂರಿಗೆ 80 ಟ್ರಿಪ್‌

ಲಾಭದಲ್ಲಿ ಕೆಜಿಎಫ್ ಡಿಪೊ

ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್: ಕೋವಿಡ್–19 ಸಂಕಷ್ಟದ ಸಮಯದಲ್ಲಿ ಕೆಎಸ್ಆರ್‌ಟಿಸಿ ಡಿಪೊಗಳು ನಷ್ಟದ ಹಾದಿ ಹಿಡಿದಿದ್ದರೆ ಕೆಜಿಎಫ್ ಡಿಪೊ ಲಾಭದಲ್ಲಿ ಮುನ್ನುಗುತ್ತಿದೆ.

ಕೊರೊನಾ ಭಯದ ನಡುವೆಯೂ ಜನರು ಅನಿವಾರ್ಯವಾಗಿ ಬಸ್‌ಗಳಲ್ಲಿ ಪ್ರಯಾಣಿಸಬೇಕಾಗಿರುವುದು ಲಾಭ ಹೆಚ್ಚಳಕ್ಕೆ ಕಾರಣವಾಗಿದೆ. ಪ್ರತಿನಿತ್ಯ ಕೆಜಿಎಫ್ ನಗರದ ಐದು ರೈಲ್ವೆ ಸ್ಟೇಷನ್‌ಗಳಿಂದ 15 ಸಾವಿರಕ್ಕೂ ಹೆಚ್ಚು ಜನರು ಪ್ರಯಾಣ ಮಾಡುತ್ತಿದ್ದರು. ಲಾಕ್‌ಡೌನ್‌ನಿಂದಾಗಿ ರೈಲು ಸಂಚಾರ ಸ್ಥಗಿತಗೊಂಡಿತು. ಹಾಗಾಗಿ, ಪ್ರಯಾಣಿಕರು ಬಸ್‌ಗಳನ್ನೇ ಅವಲಂಬಿಸಿರುವುದರಿಂದ ಕೆಎಸ್ಆ ರ್‌ಟಿಸಿಯ ಲಾಭ ಹೆಚ್ಚಿದೆ.

ಮತ್ತೊಂಡೆದೆ ಕೆಎಸ್ಆರ್‌ಟಿಸಿ ಬಸ್‌ಗಳಿಗೆ ತೀವ್ರ ಸ್ಪರ್ಧೆ ಒಡ್ಡುತ್ತಿದ್ದ ಖಾಸಗಿ ಬಸ್‌ಗಳ ಸಂಖ್ಯೆಯೂ ಕಡಿಮೆಯಾಗಿರುವುದು ಸಂಸ್ಥೆಯ ಲಾಭ ಹೆಚ್ಚಳಕ್ಕೆ ಕಾರಣವಾಗಿದೆ.

ಕೋವಿಡ್‌ಗೂ ಮುನ್ನ ಕೆಜಿಎಫ್ ಡಿಪೊದಿಂದ ಬೆಂಗಳೂರು ಮಾರ್ಗವಾಗಿ ಹಾದುಹೋಗುವ ಬಸ್‌ಗಳನ್ನು ಬಿಟ್ಟರೆ ನೇರವಾಗಿ ಬೆಂಗಳೂರಿಗೆ ಹೋಗುವ ಬಸ್‌ಗಳ ಸಂಖ್ಯೆ ಕಡಿಮೆ ಇತ್ತು. ಆದರೆ, ರೈಲಿನ ಲಭ್ಯತೆ ಇಲ್ಲದೆ ಇರುವುದರಿಂದ ಪ್ರತಿನಿತ್ಯ 70ರಿಂದ 80 ಟ್ರಿಪ್ ಬಸ್ ಸಂಚಾರ ಬೆಂಗಳೂರಿಗೆ ಲಭ್ಯವಾಗಿದೆ. ಸಾವಿರಾರು ಮಂದಿ ‌ಪಾಸ್ ಪಡೆದು ಬಸ್‌ನಲ್ಲಿ ಸಂಚಾರ ಮಾಡುತ್ತಿದ್ದಾರೆ. ಜನದಟ್ಟಣೆ ಗಮನಿಸಿದ ಸಂಸ್ಥೆ ಈಗ ಕಂಡಕ್ಟರ್‌ರಹಿತ ಬಸ್‌ಗಳ ಸೇವೆಯನ್ನೂ ಆರಂಭಿಸಿದೆ.

‘ಬೆಳಿಗ್ಗೆ 4.30ಕ್ಕೆ ಬಸ್ ಸಂಚಾರ ಶುರುವಾಗುತ್ತದೆ. ಸಂಜೆ 7 ಗಂಟೆವರೆವಿಗೂ ನಿರಂತರವಾಗಿ ಬಸ್ ವ್ಯವಸ್ಥೆ ಮಾಡಲಾಗಿದೆ. ಎಚ್ಎಎಲ್ ಉದ್ಯೋಗಿಗಳಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಲಾಗಿದೆ. ಎಂಟು ಬಸ್‌ಗಳು ಅವರ ಸೇವೆಗೆ ಲಭ್ಯವಿವೆ’ ಎಂದು ಡಿಪೊ ಮಾನೇಜರ್ ಭಾಸ್ಕರ್ ಹೇಳುತ್ತಾರೆ.

‘ಪ್ರತಿನಿತ್ಯ 3,500 ಮಂದಿ ಬೆಂಗಳೂರಿಗೆ ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಾರೆ. ಸೋಮವಾರದಂದು ಪ್ರಯಾಣಿಕರ ಸಂಖ್ಯೆ 5,000 ದಾಟುತ್ತದೆ’ ಎಂದು ಸಿಬ್ಬಂದಿ ಪ್ರಸನ್ನ ಕುಮಾರ್ ಮಾಹಿತಿ ನೀಡಿದರು.

ಗ್ರಾಮೀಣ ಭಾಗಕ್ಕೆ ಕೋವಿಡ್ ಮುನ್ನ ಇದ್ದಷ್ಟು ಬಸ್ ಸಂಚಾರ ಇಲ್ಲ. ಬೆಂಗಳೂರು ಮಾರ್ಗಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ.

‘ಕೋಲಾರ ಜಿಲ್ಲೆಯಲ್ಲಿಯೇ ಲಾಭದಲ್ಲಿ ಕೆಜಿಎಫ್ ಡಿಪೊ ಮೊದಲ ಸ್ಥಾನದಲ್ಲಿದೆ. ಪ್ರತಿ ಕಿ.ಮೀ. ಆದಾಯ ಮೊದಲಿಗಿಂತಲೂ ಹೆಚ್ಚಾಗಿದೆ. ಸಂಸ್ಥೆ ಪ್ರಯಾಣಿಕರ ವಿಶ್ವಾಸಗಳಿಸಿದೆ. ಬಸ್ ಡಿಪೊ ಬಿಡುವ ಮುನ್ನ ಮತ್ತು ಪ್ರಯಾಣ ಮುಗಿಸಿದ ನಂತರ ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಲಾಗುತ್ತಿದೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ತಿಳಿಸಿದರು. 

‘ಸಿಬ್ಬಂದಿಗೆ ಕೋವಿಡ್ ಅರಿವು ಇದೆ. ಇದರಿಂದ ಪ್ರಯಾಣಿಕರು ಧೈರ್ಯವಾಗಿ ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಜೊತೆಗೆ ರಿಯಾಯಿತಿ ಪಾಸ್ ದೊರೆತಿರುವುದರಿಂದ ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಗಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು