ಅಚಲ ಮಾರ್ಗದಲ್ಲಿ ಸತ್ಯ ಅರಿಯಿರಿ

7
ಸಂವಾದದಲ್ಲಿ ಆಂಧ್ರಪ್ರದೇಶದ ಅಚಲ ಸಾಧಕ ವೆಂಕಟರಮಣಸ್ವಾಮಿ ಹೇಳಿಕೆ

ಅಚಲ ಮಾರ್ಗದಲ್ಲಿ ಸತ್ಯ ಅರಿಯಿರಿ

Published:
Updated:
Prajavani

ಕೋಲಾರ: ‘ಅಚಲ ಮಾರ್ಗದಲ್ಲಿ ಪರಿಪೂರ್ಣವಾಗಿ ಸತ್ಯ ಅರಿತಾಗ ಅಸತ್ಯದಿಂದ ದೂರ ಉಳಿಯಲು ಸಾಧ್ಯ’ ಎಂದು ಆಂಧ್ರಪ್ರದೇಶದ ಅಚಲ ಸಾಧಕ ವೆಂಕಟರಮಣಸ್ವಾಮಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ತೇರಹಳ್ಳಿ ಬೆಟ್ಟದ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಸೋಮವಾರ ನಡೆದ ಅಚಲ ಸಾಧಕರೊಂದಿಗಿನ ಸಂವಾದದಲ್ಲಿ ಮಾತನಾಡಿ, ‘ಅಸತ್ಯ ಹೆಚ್ಚಾಗುತ್ತಿರುವ ಈ ಕಾಲಘಟ್ಟದಲ್ಲಿ ಸತ್ಯಕ್ಕೆ ಒತ್ತು ನೀಡಬೇಕು. ಇದು ಅಚಲ ಮಾರ್ಗದಲ್ಲಿ ಸಾಧ್ಯವಾಗುತ್ತದೆ. ಇದಕ್ಕಾಗಿ ಆತ್ಮ ಪರಿಪೂರ್ಣವಾಗಿಸಿಕೊಳ್ಳುವುದರ ಜತೆಗೆ ಅಚಲ ಮಾರ್ಗವನ್ನೇ ಅನುಸರಿಸಬೇಕು’ ಎಂದರು.

‘ಅಚಲ ಮಾರ್ಗ ಅನುಸರಿಸಿದರೆ ಮಾತ್ರ ಸಮಾಜವನ್ನು ಬದಲಿಸಿ ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯಲು ಸಾಧ್ಯ’ ಎಂದು ಅಚಲ ಸಾಧಕ ನಿರ್ಭಯಾನಂದ ಶ್ರೀರಾಮಯ್ಯ ಹೇಳಿದರು.

‘ಮೊದಲು ದೈವ, ಮಾನವ ಮತ್ತು ರಾಕ್ಷಸ ಎಂಬ ಮೂರು ಮತಗಳಿದ್ದವು. ಆದರೆ, ದ್ವಾಪರ ಯುಗಕ್ಕೆ ರಾಕ್ಷಸ ಮತ ಅಂತ್ಯವಾಗಿದ್ದು, ಮಾನವ ಮತವೇ ಅಂದಿನಿಂದ ಶ್ರೇಷ್ಠವಾಗಿ ಉಳಿದುಕೊಂಡು ಬಂದಿದೆ. ಇಂತಹ ಸರ್ವ ಶ್ರೇಷ್ಠರಾದ ಮನುಷ್ಯರೇ ವಂಚನೆಯಂತಹ ಕೆಟ್ಟ ಕೆಲಸಗಳಿಗೆ ಮುಂದಾಗಿರುವುದು ನೋವಿನ ಸಂಗತಿ. ಇದಕ್ಕೆಲ್ಲಾ ಅಚಲ ಮಾರ್ಗದಲ್ಲಿ ಪರಿಹಾರವಿದೆ’ ಎಂದು ಸಲಹೆ ನೀಡಿದರು.

‘ಅಚಲ ಎನ್ನುವುದು ಹೊಸತೇನಲ್ಲ. ಭದ್ರಾಚಲ, ಹಿಮಾಚಲ, ಅರುಣಾಚಲ ಹೀಗೆ ಹೆಸರುಗಳಲ್ಲೇ ಅಚಲ ಎನ್ನುವುದು ಸೇರಿಕೊಂಡಿದ್ದು, ಹಿಂದಿನಿಂದಲೂ ಅಚಲ ಸಂಸ್ಕೃತಿ ಮುಂದುವರಿಯುತ್ತಾ ಬಂದಿದೆ. ಅಚಲ ಮಾರ್ಗಕ್ಕೆ ಸಂಬಂಧಿಸಿದಂತೆ ತತ್ವಗಳಿದ್ದರೂ ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ. ಲೋಕ ಕಲ್ಯಾಣಕ್ಕೆ ಅಚಲ ಮಾರ್ಗ ಅನುಸರಿಸುವುದು ಸೂಕ್ತ’ ಎಂದು ಕಿವಿಮಾತು ಹೇಳಿದರು.

ತರಗತಿ ನಡೆಸುತ್ತೇವೆ: ‘ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಅವಕಾಶ ನೀಡಿದರೆ ಪ್ರತಿ ತಿಂಗಳು ಅಚಲಕ್ಕೆ ಸಂಬಂಧಿಸಿದಂತೆ ತರಗತಿ ನಡೆಸುತ್ತೇವೆ’ ಎಂದು ಚಿಂತಾಮಣಿಯ ಅಚಲ ಸಾಧಕ ಗೋಪಿನಾಥ ಭರವಸೆ ನೀಡಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು ವಿದ್ಯಾವಂತರಾಗಿದ್ದರೂ ಕಾರ್ಪೊರೇಟ್ ಕಂಪನಿಗಳು ಹಾಗೂ ಮತಗಳು ಜನರನ್ನು ಬುದ್ಧಿಹೀನರಾಗಿಸಿರುವುದು ಬೇಸರದ ಸಂಗತಿ. ಮಾನವರೆಲ್ಲಾ ಒಂದೇ ಎನ್ನುವುದು ಅಚಲ ಸಂಪ್ರದಾಯದಲ್ಲಿದ್ದು, ಇದನ್ನು ಅನುಸರಿಸಬೇಕಿದೆ’ ಎಂದು ಚಿಂತಕ ಪದ್ಮಾಲಯ ನಾಗರಾಜ್ ಹೇಳಿದರು.

‘ಅಚಲ ಮಾರ್ಗ ಸಂಬಂಧ ಹೆಚ್ಚಿನ ಪ್ರಚಾರ ನೀಡಿದರೆ ಪ್ರತಿಯೊಬ್ಬರೂ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ. ಯಾವುದೇ ಅಹಂಕಾರ ಇಲ್ಲವಾಗಿಸುವ ಅಚಲ ಮಾರ್ಗವನ್ನು ಪ್ರತಿಯೊಬ್ಬರೂ ಅನುಸರಿಸಬೇಕು. ಇದಕ್ಕಾಗಿ ಪ್ರತಿ ತಿಂಗಳು ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ’ ಎಂದು ವಿವರಿಸಿದರು.

ಆದಿಮ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಎನ್.ಮುನಿಸ್ವಾಮಿ, ಸದಸ್ಯರಾದ ಹ.ಮಾ.ರಾಮಚಂದ್ರ, ನೀಲಕಂಠೇಗೌಡ, ಅಮರೇಶ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !