ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಚಿಮುಲ್‌ಗೆ ಏ.28ರಂದು ಚುನಾವಣೆ: ಟೆಂಡರ್‌, ಸಭೆ, ಕಾರ್ಯಕ್ರಮಕ್ಕೆ ಆಕ್ಷೇಪ

ಕೋಚಿಮುಲ್‌ ಆಡಳಿತ ಮಂಡಳಿಗೆ ಏ.28ರಂದು ಚುನಾವಣೆ –ನೀತಿ ಸಂಹಿತೆ ಉಲ್ಲಂಘನೆ ಆರೋಪ
Published 12 ಮಾರ್ಚ್ 2024, 6:07 IST
Last Updated 12 ಮಾರ್ಚ್ 2024, 6:07 IST
ಅಕ್ಷರ ಗಾತ್ರ

ಕೋಲಾರ: ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲೆಯ ಸಹಕಾರ ಹಾಲು ಒಕ್ಕೂಟದ ಆಡಳಿತ ಮಂಡಳಿಗೆ (ನಿರ್ದೇಶಕರ ಸ್ಥಾನ) ಏ.28ರಂದು ನಡೆಯಲಿರುವ ಚುನಾವಣೆಗೆ ಅಧಿಸೂಚನೆ ಜಾರಿ ಆಗಿದ್ದರೂ ಸಭೆ, ಸಮಾರಂಭ ಹಮ್ಮಿಕೊಳ್ಳುತ್ತಿರುವುದಕ್ಕೆ ಹಾಗೂ ಆರ್ಥಿಕ ಚಟುವಟಿಕೆ ನಡೆಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಜ.1 ರಂದೇ ಅಧಿಸೂಚನೆ ಹೊರಡಿಸಲಾಗಿದ್ದು, ಮತದಾರರ ಪ್ರಭಾವ ಬೀರುವ ಕಾರ್ಯಕ್ರಮಗಳ ಮೂಲಕ ನೀತಿ ಸಂಹಿತೆ ಉಲ್ಲಂಘಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ರಾಜ್ಯ ಸಹಕಾರ ಚುನಾವಣಾ ಪ್ರಾಧಿಕಾರವು ಸಹಕಾರ ಸಂಸ್ಥೆಗಳ ಆಡಳಿತ ಮಂಡಳಿ ಚುನಾವಣೆ ಸಂಬಂಧ ಮಾದರಿ ನೀತಿ ಸಂಹಿತೆ ಜಾರಿಗೊಳಿಸಲು ನಿರ್ದೇಶನ ನೀಡಿದೆ. ಈ ಪ್ರಕಾರ ಮಾದರಿ ನೀತಿ ಸಂಹಿತೆ ಜಾರಿ ಮಾಡಲಾಗಿದೆ. ಕೋಲಾರ ಜಿಲ್ಲಾಧಿಕಾರಿಯೂ ಆಗಿರುವ ಅಕ್ರಂ ಪಾಷಾ ಚುನಾವಣಾ ಅಧಿಕಾರಿ ಆಗಿದ್ದಾರೆ.

ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಮತ್ತು ಮುಖ್ಯ ಕಾರ್ಯನಿರ್ವಾಹಕರು ಅಧ್ಯಯನ ಪ್ರವಾಸ ಕೈಗೊಳ್ಳದಂತೆ, ಸಭೆ ಸಮಾರಂಭ ನಡೆಸದಂತೆ ನಿರ್ಬಂಧಿಸಲಾಗಿದೆ. ಈ ವಿಚಾರವನ್ನು ಖುದ್ದಾಗಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರೇ ಪತ್ರದ ಮೂಲಕ ಎಲ್ಲಾ ತಾಲ್ಲೂಕು ಶಿಬಿರ ಕಚೇರಿಗಳ ಉಪವ್ಯವಸ್ಥಾಪಕರ ಗಮನಕ್ಕೆ ತಂದಿದ್ದಾರೆ.

ಈ ನಡುವೆ, ಮಾರ್ಚ್‌ 13ರಂದು ಕೋಚಿಮುಲ್‌ನ ಮೆಗಾಡೇರಿ ಆವರಣದಲ್ಲಿ ನೂತನ ಆಡಳಿತ ಮಂಡಳಿ ಕಟ್ಟಡ ಉದ್ಘಾಟನೆಗೆ ಸಿದ್ಧತೆ ನಡೆದಿದೆ. ಅಲ್ಲದೇ, ಕೋಚಿಮುಲ್‌ನಿಂದ ಚಿಂತಾಮಣಿಯ ಶಿಥಿಲ ಕೇಂದ್ರದ ಆವರಣದಲ್ಲಿ ₹ 50 ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಐಸ್‌ಕ್ರೀಮ್‌ ತಯಾರಿಕಾ ಘಟಕದ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ. ಕೋಲಾರ ತಾಲ್ಲೂಕಿನ ಹೊಳಲಿ ಗ್ರಾಮದ ಬಳಿ 50 ಎಕರೆ ಪ್ರದೇಶದಲ್ಲಿ ₹ 70 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಿರುವ ಸೋಲಾರ್ ಘಟಕಕ್ಕೂ ಶಂಕುಸ್ಥಾಪನೆ ಮಾಡಲಾಗುತ್ತಿದೆ. ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ಕಾರ್ಯಕ್ಕೆ ಭಾರಿ ಆಕ್ಷೇಪ ವ್ಯಕ್ತವಾಗುತ್ತಿದೆ.

ಮಾರ್ಚ್‌ 5ರಂದು ನಡೆದ ಒಕ್ಕೂಟದ 10ನೇ ಆಡಳಿತ ಮಂಡಳಿ ಸಭೆಯಲ್ಲೂ ಕಾಮಗಾರಿ, ಖರೀದಿ, ಟೆಂಡರ್‌ ಮಾಡುವುದು ಸೇರಿದಂತೆ ವಿವಿಧ ವಿಚಾರ ಪ್ರಸ್ತಾಪವಾಗಿರುವುದು ಗೊತ್ತಾಗಿದೆ.

‘ಈ ಸಭೆಯಲ್ಲಿ ಕಾಮಗಾರಿ, ಟೆಂಡರ್‌ ಸಂಬಂಧ ಹಣಕಾಸು ನಿರ್ಧಾರ ಕೈಗೊಂಡಿದ್ದು, ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಲಾಗಿದೆ. ಈ ಸಂಬಂಧ ಕ್ರಮ ಕೈಗೊಳ್ಳಬೇಕು, ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು’ ಎಂದು ಆಗ್ರಹಿಸಿ ಮಾಹಿತಿ ಹಕ್ಕು ಕಾರ್ಯಕರ್ತ ಕೆ.ಸಿ.ರಾಜಣ್ಣ, ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರಿಗೆ ಪತ್ರ ಬರೆದಿದ್ದಾರೆ.

ಈ ಸಂಬಂಧ ಒಕ್ಕೂಟದ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್‌ ಕೂಡ ವ್ಯವಸ್ಥಾ‌ಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಚುನಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿರುವುದರಿಂದ ಟೆಂಡರ್‌ ಸ್ಥಗಿತಗೊಳಿಸುವಂತೆ ಅವರು ಜ.18ರಂದು ಕೂಡ ಪತ್ರ ಬರೆದಿದ್ದರು.

‘ಒಕ್ಕೂಟದ ಚುನಾವಣೆ ಘೋಷಣೆಗೆ ಮುನ್ನವೇ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು, ಟೆಂಡರ್‌ ನಿರ್ಧರಿಸಲಾಗಿತ್ತು. ಈಗ ಮುಂದುವರಿದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕಾರ್ಯಕ್ರಮ ನಡೆಯುತ್ತಿದೆ. ಹೊಸದಾಗಿ ನಿರ್ಧರಿಸಿದ್ದಲ್ಲ. ನಿಯಮಗಳ ಪ್ರಕಾರವೇ ಕಾರ್ಯಕ್ರಮ ನಡೆಸಲಾಗುತ್ತಿದೆ’ ಎಂದು ಕೋಚಿಮುಲ್‌ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್‌.ಗೋಪಾಲಮೂರ್ತಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಹೊಸದಾಗಿ ಟೆಂಡರ್‌ ಕರೆಯುವಂತಿಲ್ಲ’

ಹೊಸದಾಗಿ ಟೆಂಡರ್ ಕರೆಯಬಾರದೆಂದು ಕೋಚಿಮುಲ್‌ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದು ನಿಜ. ಈಗಾಗಲೇ ಟೆಂಡರ್‌ ಕರೆದಿರುವ ಕಾಮಗಾರಿ ಮುಂದುವರಿಸಬಹುದು. ತುರ್ತು ಸಭೆ ನಡೆಸಬಹುದು. ಅಗತ್ಯ ವಸ್ತುಗಳನ್ನು ಖರೀದಿಸಬಹುದು ಅಷ್ಟೆ. ಕೋಚಿಮುಲ್‌ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡರು ಕಷ್ಟಪಟ್ಟು ಕೆಲ ಯೋಜನೆ ಜಾರಿ ಮಾಡಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಕೆಲ ಅಡಚಣೆ ಉಂಟಾಗಿತ್ತು. ಕಾಂಗ್ರೆಸ್‌ ಸರ್ಕಾರ ಇರುವುದರಿಂದ ಅವರು ಯೋಜನೆಗೆ ಅನುಮತಿ ಕೊಡಿಸಿದ್ದಾರೆ. ನಮ್ಮ ಅಧಿಕಾರಾವಧಿ ಮೇ 12ರವರೆಗೆ ಇದೆ ಕಾಡೇನಹಳ್ಳಿ ನಾಗರಾಜ್‌ ಕೋಚಿಮುಲ್‌ ನಿರ್ದೇಶಕ

ಕೋಚಿಮುಲ್‌ ಚುನಾವಣೆ ಸಂಬಂಧ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಒಕ್ಕೂಟಕ್ಕೆ ಸಂಬಂಧಿಸಿದ ಉದ್ಘಾಟನೆ ಇತರೆ ಕಾರ್ಯಕ್ರಮ ನಡೆಸುವಂತಿಲ್ಲ.
-ಅಕ್ರಂ ಪಾಷಾ, ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ
ಒಕ್ಕೂಟದ ಚುನಾವಣೆ ಘೋಷಣೆಗೆ ಮುನ್ನವೇ ಟೆಂಡರ್‌ ಕರೆದು ಕೈಗೆತ್ತಿಕೊಂಡಿರುವ ಯೋಜನೆ ಶಂಕುಸ್ಥಾಪನೆ ಉದ್ಘಾಟನೆ ನಡೆಯಲಿದೆ. ಮತದಾರರ ಮೇಲೆ ಪರಿಣಾಮ ಬೀರುವಂತಿಲ್ಲ ಅಷ್ಟೆ.
-ಕೆ.ಎನ್‌.ಗೋಪಾಲಮೂರ್ತಿ,ಕೋಚಿಮುಲ್‌ ವ್ಯವಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT