ವಿಜ್ಞಾನ ಕೇಂದ್ರ ಸ್ಥಾಪನೆಗೆ ಜಮೀನು ಗುರುತಿಸಿ: ಜಿಲ್ಲಾಧಿಕಾರಿ ಸೂಚನೆ

7

ವಿಜ್ಞಾನ ಕೇಂದ್ರ ಸ್ಥಾಪನೆಗೆ ಜಮೀನು ಗುರುತಿಸಿ: ಜಿಲ್ಲಾಧಿಕಾರಿ ಸೂಚನೆ

Published:
Updated:
Deccan Herald

ಕೋಲಾರ: ‘ಜಿಲ್ಲೆಯಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆಗೆ ಜಮೀನು ಗುರುತಿಸಿದರೆ ಮಂಜೂರು ಮಾಡುತ್ತೇವೆ’ ಎಂದು ಜಿಲ್ಲಾಧಿಕಾರಿ ಜಿ.ಮಂಜುನಾಥ್ ಭರವಸೆ ನೀಡಿದರು.

ವಿಜ್ಞಾನ ಕೇಂದ್ರ ಸ್ಥಾಪನೆ ಸಂಬಂಧ ಇಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿ, ‘ಕೇಂದ್ರ ಸರ್ಕಾರವು ಪ್ರತಿ ಜಿಲ್ಲಾ ಕೇಂದ್ರದಲ್ಲಿ ವಿಜ್ಞಾನ ಕೇಂದ್ರ ಸ್ಥಾಪಿಸುವಂತೆ ಆದೇಶಿಸಿದೆ. ಇದಕ್ಕೆ 12ನೇ ಪಂಚವಾರ್ಷಿಕ ಯೋಜನೆಯಲ್ಲಿ ₹ 100 ಕೋಟಿ ಮೀಸಲಿಟ್ಟಿತ್ತು’ ಎಂದು ತಿಳಿಸಿದರು.

‘ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಾತ್ರ ವಿಜ್ಞಾನ ಕೇಂದ್ರ ಸ್ಥಾಪನೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಆದರೆ, ಕೋಲಾರದಲ್ಲಿ ಕೇಂದ್ರ ಸ್ಥಾಪನೆ ಪ್ರಯತ್ನ ನಡೆಯದಿರುವುದು ವಿಷಾದಕರ. ರಾಜ್ಯದ ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲೇ ಕೋಲಾರದಲ್ಲಿ ಇನ್ನೂ ವಿಜ್ಞಾನ ಕೇಂದ್ರ ಸ್ಥಾಪನೆಯಾಗದಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕೇಂದ್ರ ಸ್ಥಾಪನೆಗೆ ಕನಿಷ್ಠ 10 ಎಕರೆ ಜಮೀನು ಅಗತ್ಯವಿದೆ. ಈಗಾಗಲೇ ಮೂರ್ನಾಲ್ಕು ಕಡೆ ಜಮೀನು ಗುರುತಿಸಲಾಗಿದ್ದು, ಈ ಪೈಕಿ ಸೂಕ್ತ ಜಾಗ ಆಯ್ಕೆ ಮಾಡಿದರೆ ಮಂಜೂರು ಮಾಡಲಾಗುತ್ತದೆ. ಕೇಂದ್ರಕ್ಕೆ ಜಮೀನು ಗುರುತಿಸಿ, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದರೆ ಮಾತ್ರ ಅನುದಾನ ಬಿಡುಗಡೆಯಾಗುತ್ತದೆ’ ಎಂದು ವಿವರಿಸಿದರು.

ಸಮಿತಿ ರಚನೆ: ‘ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸಮಿತಿ ರಚಿಸಲಾಗಿದ್ದು, ಇದನ್ನು ಸಹಕಾರಿ ಸಂಘಗಳ ಉಪ ನಿಬಂಧಕರ ಕಚೇರಿಯಲ್ಲಿ ನೋಂದಾಯಿಸಲಾಗುವುದು. ಕೇಂದ್ರದಿಂದ ಬಿಡುಗಡೆಯಾಗಿರುವ ₹ 6 ಕೋಟಿ, ರಾಜ್ಯ ಸರ್ಕಾರದ ಅನುದಾನ, ನಿಗಮ ಮಂಡಳಿ, ಶೈಕ್ಷಣಿಕ ಸಂಸ್ಥೆಗಳು, ಸಂಘ ಸಂಸ್ಥೆ, ಖಾಸಗಿ ಸಂಸ್ಥೆ, ದಾನಿಗಳು, ಲೋಕಸಭೆ, ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರ ನಿಧಿಯಿಂದ ಹಣಕಾಸು ನೆರವು ಪಡೆದು ಸುಮಾರು ₹ 10 ಕೋಟಿ ವೆಚ್ಚದಲ್ಲಿ ಕೇಂದ್ರ ನಿರ್ಮಾಣ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ವಿದ್ಯಾರ್ಥಿಗಳು, ಜನಸಾಮಾನ್ಯರು ಹಾಗೂ ರೈತರನ್ನು ವೈಜ್ಞಾನಿಕವಾಗಿ ಸಶಕ್ತಿಗೊಳ್ಳಿಸುವುದು, ವಾಸ್ತವ ಜೀವನಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನದ ಅಗತ್ಯತೆ ಕುರಿತು ಅರಿವು ಮೂಡಿಸುವುದು ಕೇಂದ್ರದ ಉದ್ದೇಶವಾಗಿದೆ. ಜತೆಗೆ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಸಮಿತಿಯಲ್ಲಿರುವ ವಿವಿಧ ಇಲಾಖೆಗಳ ಮುಖ್ಯಸ್ಥರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ ಕೇಂದ್ರದ ಸ್ಥಾಪನೆಗೆ ಸಹಕರಿಸಬೇಕು’ ಎಂದು ಕೋರಿದರು.

ಸ್ಥಳಾವಕಾಶಕ್ಕೆ ಮನವಿ: ‘ವಿಜ್ಞಾನ ಕೇಂದ್ರ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವವರೆಗೆ ಕೇಂದ್ರದ ಕಾರ್ಯ ಚಟುವಟಿಕೆಗಳ ನಿರ್ವಹಣೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಸ್ಥಳಾವಕಾಶ ಕಲ್ಪಿಸಬೇಕು’ ಎಂದು ವಿಜ್ಞಾನ ಕೇಂದ್ರ ಸಮಿತಿ ಯೋಜನಾ ನಿರ್ದೇಶಕ ರವೀಂದ್ರನಾಥ್ ಮನವಿ ಮಾಡಿದರು.

‘ವಿಜ್ಞಾನ ಕೇಂದ್ರದ ಸ್ಥಳದಲ್ಲಿ ಉದ್ಯಾನ ಇರಬೇಕು. ಮಕ್ಕಳು, ಸಾರ್ವಜನಿಕರು ಅಲ್ಲಿ ದಿನವಿಡೀ ಕಾಲ ಕಳೆಯುವಂತಹ ವಾತಾವರಣ ನಿರ್ಮಿಸಬೇಕು. ಜಿಲ್ಲೆಯಲ್ಲಿ ಸ್ಥಾಪಿಸುವ ಕೇಂದ್ರವು ಮಾದರಿಯಾಗಬೇಕು. ಇದಕ್ಕೆ ಪೂರಕ ಯೋಜನೆ ಸಿದ್ಧಪಡಿಸಬೇಕು’ ಎಂದರು. ರವೀಂದ್ರನಾಥ್‌ರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಯು ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಕೇಂದ್ರಕ್ಕೆ ತಾತ್ಕಾಲಿಕವಾಗಿ ಸ್ಥಳಾವಕಾಶ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸಮಿತಿ ಸದಸ್ಯೆ ಆರ್.ಶಾರದಾ ಹಾಜರಿದ್ದರು.
**
ಅಂಕಿ ಅಂಶ.....
* ಕೇಂದ್ರಕ್ಕೆ ಕನಿಷ್ಠ 10 ಎಕರೆ ಜಮೀನು ಅಗತ್ಯ
* ₹ 10 ಕೋಟಿ ವೆಚ್ಚದಲ್ಲಿ ಕೇಂದ್ರ ನಿರ್ಮಾಣ
* ₹ 6 ಕೋಟಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !