ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌: ನೆಲಗಡಲೆಗೆ ಹೆಚ್ಚಿದ ಬೇಡಿಕೆ

ಮುಂಗಾರು ಪೂರ್ವ ಹದ ಮಳೆ; ಬಿತ್ತನೆಗೆ ಭೂಮಿ ಸಿದ್ಧಪಡಿಸಿಕೊಳ್ಳುತ್ತಿರುವ ರೈತರು
Last Updated 10 ಜೂನ್ 2020, 9:21 IST
ಅಕ್ಷರ ಗಾತ್ರ

ಕೆಜಿಎಫ್: ತಾಲ್ಲೂಕಿನಲ್ಲಿ ಮುಂಗಾರು ಪೂರ್ವ ಮಳೆ ಹದವಾಗಿ ಬಿದ್ದಿದ್ದು, ರೈತರು ಜಮೀನುಗಳನ್ನು ಸಿದ್ಧಪಡಿಸಿ ಕೊಳ್ಳುತ್ತಿದ್ದಾರೆ. ಕೆಲ ರೈತರು ಬಿತ್ತನೆಗೆ ಇನ್ನೊಂದು ಮಳೆಗಾಗಿ ಕಾಯುತ್ತಿದ್ದಾರೆ. ಮತ್ತೆ ಕೆಲವರು ಬಿತ್ತನೆ ಆರಂಭಿಸಿದ್ದಾರೆ.

ತಾಲ್ಲೂಕಿನಲ್ಲಿ ಬಹುತೇಕ ರೈತರು ನೆಲಗಡಲೆ ಬಿತ್ತನೆಗೆ ಆಸಕ್ತಿ ತೋರಿದ್ದಾರೆ. ಬೇತಮಂಗಲ, ಕ್ಯಾಸಂಬಳ್ಳಿ ಮತ್ತು ರಾಬರ್ಟ್‌ಸನ್‌ಪೇಟ್ ರೈತ ಸಂಪರ್ಕ ಕೇಂದ್ರಗಳಲ್ಲಿ ನೆಲಗಡಲೆಗೆ ಬೇಡಿಕೆ ಹೆಚ್ಚಾಗಿತ್ತು.

‘ಇದುವರೆಗೂ 400 ಕ್ವಿಂಟಲ್ ನೆಲಗಡಲೆಯನ್ನು ರೈತರು ಖರೀದಿ ಮಾಡಿದ್ದಾರೆ. ಇನ್ನೂ ಬೇಡಿಕೆ ಇರುವುದರಿಂದ 235 ಕ್ವಿಂಟಲ್ ನೆಲಗಡಲೆಗೆ ಬೇಡಿಕೆ ಸಲ್ಲಿಸಲಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಆಸೀಫುಲ್ಲಾ ತಿಳಿಸಿದ್ದಾರೆ.

ಕ್ಯಾಸಂಬಳ್ಳಿ ಮತ್ತು ಬೇತಮಂಗಲ ಹೋಬಳಿಗಳಲ್ಲಿ ಮಾವು ಸೇರಿದಂತೆ ಇತರ ತೋಟಗಾರಿಕೆ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಮಾವು ತೋಟದ ಮಧ್ಯೆ ನೆಲಗಡಲೆ, ತೊಗರಿಯನ್ನು ಮಿಶ್ರ ಬೆಳೆಯನ್ನಾಗಿ ಬೆಳೆಯುತ್ತಾರೆ. ಆದ್ದರಿಂದ ಎರಡು ಹೋಬಳಿಗಳಲ್ಲಿ ನೆಲಗಡಲೆಗೆ ಬೇಡಿಕೆ ಹೆಚ್ಚು. ಉಳಿದಂತೆ ರಾಬರ್ಟ್‌ಸನ್‌ಪೇಟೆಯಲ್ಲಿ ರಾಗಿ ಮತ್ತು ಅಲಸಂದೆ ಅಗ್ರಸ್ಥಾನ ಗಳಿಸಿದೆ.

‘ತಾಲ್ಲೂಕಿನಲ್ಲಿ ಶೇ 70ರಿಂದ 75ರಷ್ಟು ಭೂಮಿಯನ್ನು ಹದ ಮಾಡಲಾಗಿದೆ. ಟ್ರಾಕ್ಟರ್‌ಗಳಿಗೆ ವಿಪರೀತ ಬೇಡಿಕೆ ಇರುವುದರಿಂದ ಹದ ಮಾಡುವುದು ಕೆಲವೆಡೆ ತಡವಾಗಿದೆ. ತಾಲ್ಲೂಕಿನಲ್ಲಿ ವಾರ್ಷಿಕ ವಾಡಿಕೆ ಮಳೆ 698 ಮಿ.ಮೀ ಆಗಿದ್ದು, ಕಳೆದ ವರ್ಷ 651 ಮಿ.ಮೀ ಬಿದ್ದಿತ್ತು. ಈ ಬಾರಿಯೂ ಉತ್ತಮ ಮಳೆಯ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಜೂನ್ ಮೊದಲ ವಾರದವರೆಗೆ 156.10 ಮಿ.ಮೀ ಮಳೆ ಆಗಿದೆ. ಇನ್ನೂ ಮುಂಗಾರು ಮಳೆ ಶುರುವಾಗಬೇಕಿದೆ’ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

‘ಕೋವಿಡ್– 19 ಪರಿಣಾಮ ನರೇಗಾ ಯೋಜನೆಯಲ್ಲಿ ಇದೇ ಮೊದಲ ಬಾರಿಗೆ ಕೃಷಿ ಜಮೀನಿಗೆ ಕಂದಕ, ಬದು ನಿರ್ಮಾಣಕ್ಕೆ ಕ್ರಿಯಾ ಯೋಜನೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಒಂದು ಎಕರೆ ಪ್ರದೇಶದಲ್ಲಿ ಕನಿಷ್ಠ 100 ಬದು ನಿರ್ಮಾಣ ಮಾಡಬಹುದು. ಇದರಿಂದಾಗಿ ಪ್ರತಿ ಹದ ಮಳೆಗೆ 2 ಲಕ್ಷ ಲೀಟರ್ ನೀರನ್ನು ಸಂಗ್ರಹ ಮಾಡಬಹುದು. ಇದು ಕೂಡ ರೈತರಿಗೆ ವರದಾನವಾಗಲಿದೆ. ಮಳೆಗೆ ಮುನ್ನ ರೈತರು ಈ ಯೋಜನೆಯನ್ನು ಪಡೆದುಕೊಳ್ಳಬೇಕು’ ಎಂದು ಕೃಷಿ ಅಧಿಕಾರಿಗಳು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT