ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ಲೋಕಸಭಾ ಚುನಾವಣೆ: ರಾಜೀನಾಮೆ ಪ್ರಹಸನ ಮಾಡಿದವರಿಗೆ ಮುಖಭಂಗ!

ಕಾಂಗ್ರೆಸ್‌ಗೆ ಸತತ ಎರಡನೇ ಸೋಲು: ನಡೆಯಲಿಲ್ಲ ಗ್ಯಾರಂಟಿ ಆಟ, ತಪ್ಪಲಿಲ್ಲ ಒಳೇಟು
Published 5 ಜೂನ್ 2024, 8:31 IST
Last Updated 5 ಜೂನ್ 2024, 8:31 IST
ಅಕ್ಷರ ಗಾತ್ರ

ಕೋಲಾರ: ‌ವಿಧಾನಸಭಾ ಚುನಾವಣೆ ವೇಳೆ ಕೋಲಾರ ಮೀಸಲು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಿನ ಸ್ಥಾನ ಗೆದ್ದು ಬೀಗಿದ್ದ ಕಾಂಗ್ರೆಸ್‌ ವರ್ಷ ಕಳೆಯುವಷ್ಟರಲ್ಲಿ ದೊಡ್ಡ ಆಘಾತ ಅನುಭವಿಸಿದೆ. ಒಂದು ಕಾಲದಲ್ಲಿ ಭದ್ರಕೋಟೆಯಾಗಿದ್ದ ಕ್ಷೇತ್ರದಲ್ಲಿ ಸತತ ಎರಡನೇ ಬಾರಿ ಎಡವಿದೆ.

ಕ್ಷೇತ್ರದಲ್ಲಿ ಐವರು ಕಾಂಗ್ರೆಸ್‌ ಶಾಸಕರು, ಇಬ್ಬರು ಮೇಲ್ಮನೆ ಸದಸ್ಯರು, ಅವರಲ್ಲಿ ಒಬ್ಬರು ಸಚಿವರು, ಮತ್ತೊಬ್ಬರು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹಾಗೂ ಜಿಲ್ಲೆಯವರೇ ಆದ ಸಚಿವ ಕೆ.ಎಚ್‌.ಮುನಿಯಪ್ಪ (ದೇವನಹಳ್ಳಿ ಶಾಸಕ) ಇದ್ದರೂ ಜೆಡಿಎಸ್‌ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್‌ ಬಾಬು ಅವರಿಗೆ ತಲೆ ಬಾಗಿದ್ದಾರೆ. ಕೊನೆ ಗಳಿಗೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಪಡೆದು ಬೆಂಗಳೂರಿನಿಂದ ಬಂದು ಸ್ಪರ್ಧಿಸಿದ್ದ ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ಕೆ.ವಿ.ಗೌತಮ್‌ ‘ಹರಕೆಯ ಕುರಿ’ಯಾಗಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕೋಲಾರ ಮೀಸಲು ಕ್ಷೇತ್ರದಲ್ಲಿ ಘಟಬಂಧನ್‌ (ರಮೇಶ್‌ ಕುಮಾರ್‌ ಬಣ) ಹಾಗೂ ಕೆ.ಎಚ್‌.ಮುನಿಯಪ್ಪ ಬಣಗಳ ನಡುವೆ ಉಂಟಾದ ರಾದ್ಧಾಂತ, ಪದೇಪದೇ ಕಿತ್ತಾಟ, ಎಡ–ಬಲ ಸಮುದಾಯದ ಗೊಂದಲ, ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ ಶಾಸಕರು ಹಾಗೂ ಸಚಿವರ ರಾಜೀನಾಮೆ ಪ್ರಹಸನ ಈಗ ಪಕ್ಷಕ್ಕೆ ಮುಳುವಾಗಿದೆ.

ಪಕ್ಷದ ವರಿಷ್ಠರು ಎರಡೂ ಬಣಗಳ ಸಹವಾಸವೇ ಬೇಡವೆಂದು ಮೂರನೇ ಅಭ್ಯರ್ಥಿಗೆ ಟಿಕೆಟ್‌ ನೀಡಿದರೂ ಅಸಮಾಧಾನಕ್ಕೆ ತೆರೆ ಬೀಳಲಿಲ್ಲ. ಕೆ.ಎಚ್‌.ಮುನಿಯಪ್ಪ ಅವರನ್ನು ಸ್ಥಳೀಯ ಶಾಸಕರು ಕಡೆಗಣಿಸಿದ ಆರೋಪವಿದೆ. ಅದೇ ಸಿಟ್ಟಿನಿಂದ ಮುನಿಯಪ್ಪ ಕೂಡ ಪ್ರಚಾರದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳದ್ದು ಕಾಂಗ್ರೆಸ್‌ ಸೋಲಿನಲ್ಲಿ ಅಂತ್ಯ ಕಂಡಿದೆ. ಇವರ ಪದೇಪದೇ ಕಿತ್ತಾಟಕ್ಕಿಂತ ಜೆಡಿಎಸ್‌–ಬಿಜೆಪಿ ಮೈತ್ರಿಯೇ ಉತ್ತಮವೆಂದು ಮತದಾರರು ಭಾವಿಸಿದಂತಿದೆ.

ತಾವು ಬಯಸಿದ ವ್ಯಕ್ತಿಗೆ ಟಿಕೆಟ್‌ ಸಿಗದಿದ್ದರೂ ಮುನಿಯಪ್ಪ ಕುಟುಂಬಕ್ಕೆ ಟಿಕೆಟ್‌ ತಪ್ಪಿಸಿದ ಖುಷಿಯಲ್ಲಿ ಘಟಬಂಧನ್‌ ನಾಯಕರು ಕೆ.ವಿ.ಗೌತಮ್‌ ಅವರನ್ನು ಮಡಿಲಿಗೆ ಕಟ್ಟಿಕೊಂಡು ಚುನಾವಣಾ ಪ್ರಚಾರಕ್ಕೆ ಇಳಿದಿದ್ದರು. ಇತ್ತ ಎಷ್ಟೇ ಹೋರಾಟ ನಡೆಸಿದರೂ ತಮ್ಮ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್‌ ಕೊಡಿಸಲಾಗದ ಮುನಿಯಪ್ಪ ಒಂದೆರಡು ಬಾರಿ ಕಾಣಿಸಿಕೊಂಡು ಕ್ಷೇತ್ರದಿಂದಲೇ ದೂರ ಉಳಿದರು.

ಸೋಲಿಗೆ ಈಗ ಬಹುತೇಕರು ಬೊಟ್ಟು ಮಾಡುತ್ತಿರುವುದು ಘಟಬಂಧನ್‌ ನಾಯಕರನ್ನೇ. ಇದೇ ಘಟಬಂಧನ್‌ 2019ರಲ್ಲಿ ಕಾಂಗ್ರೆಸ್‌ ಸೋಲಿಗೆ ಕಾರಣವಾಗಿತ್ತು ಎಂಬ ಆಪಾದನೆಯೂ ಇದೆ. ಆಗ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್‌ನ ಮುನಿಯಪ್ಪ ವಿರುದ್ಧ ಬಿಜೆಪಿಯ ಎಸ್‌.ಮುನಿಸ್ವಾಮಿ 2 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು.

ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದರೂ ಕಳೆದ ಒಂದು ವರ್ಷದಲ್ಲಿ ಕೋಲಾರಕ್ಕೆ ಯಾವುದೇ ಪ್ರಮುಖ ಯೋಜನೆ ಬಂದಿಲ್ಲ. ಬಜೆಟ್‌ನಲ್ಲೂ ಜಿಲ್ಲೆಯನ್ನು ಕಡೆಗಣಿಸಲಾಗಿದೆ. ಸಚಿವ ಸ್ಥಾನವೂ ಸಿಕ್ಕಿಲ್ಲ. ಈ ಅಂಶಗಳೂ ಕಾಂಗ್ರೆಸ್‌ ಸೋಲಿಗೆ ಕಾರಣ ಎನ್ನಲಾಗುತ್ತಿದೆ.

ಬಿಜೆಪಿಯಲ್ಲಿ ಹಾಲಿ ಸಂಸದರಿಗೆ ಟಿಕೆಟ್ ತಪ್ಪಿಸಿ, ಮೈತ್ರಿ ಒಪ್ಪಂದಂತೆ ಜೆಡಿಎಸ್‌ ಪಕ್ಷಕ್ಕೆ ಟಿಕೆಟ್‌ ನೀಡಲಾಗಿತ್ತು. ಅದೀಗ ಫಲ ಕೂಡ ನೀಡಿದೆ.

ಹೇಳಿಕೇಳಿ ಈ ಕ್ಷೇತ್ರದಲ್ಲಿ ದಲಿತರ ಬಳಿಕ ಒಕ್ಕಲಿಗ ಮತದಾರರದ್ದೇ ಪಾರಮ್ಯ. ಹೀಗಾಗಿ, ಈ ಸಂಗತಿ ಜೆಡಿಎಸ್‌ ಪಕ್ಷದ ಪಾಲಿಗೆ ವರದಾನವಾಗಿ ಪರಿಣಮಿಸಿದೆ. ಇತ್ತ ಸಿದ್ದರಾಮಯ್ಯ ಅವರು ಒಕ್ಕಲಿಗರ ವಿರೋಧಿ ಎಂದು ಕೆಲವರು ಪ್ರಚಾರ ನಡೆಸಿದ್ದು, ಕಾಂಗ್ರೆಸ್‌ ಪಾಲಿಗೆ ಮುಳುವಾಗಿದೆ. ಜೊತೆಗೆ ಶ್ರೀನಿವಾಸಪುರದಲ್ಲಿ ರಮೇಶ್‌ ಕುಮಾರ್ ಅವರು ಒಕ್ಕಲಿಗರನ್ನು ಟೀಕಿಸಿದ್ದಾರೆ ಎನ್ನಲಾದ ವಿಚಾರ ತಿರುಗೇಟು ನೀಡಿದೆ.

ಇದರ ಜೊತೆಗೆ ಮೋದಿ ನಾಮ ಜಪದ ಪ್ರಭಾವ ಬಲವಾಗಿದ್ದ ಕಾರಣ ಮಲ್ಲೇಶ್‌ ಬಾಬು ಅವರಿಗೆ ಗೆಲುವು ಒಲಿದಿದೆ. ಬಿಜೆಪಿ ಮುಖಂಡರಲ್ಲಿನ ಮನಸ್ತಾಪ ಸ್ವಲ್ಪಮಟ್ಟಿಗೆ ಒಳೇಟು ನೀಡಿದ್ದರಿಂದ ಗೆಲುವಿನ ಅಂತರ ತುಸು ಕಡಿಮೆಯಾಗಿದೆ.

ಈ ಹಿಂದೆ ಬಂಗಾರಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಸತತ ಎರಡು ಬಾರಿ ಸೋಲು ಕಂಡಿದ್ದ ಭೋವಿ ಸಮುದಾಯದ ಮಲ್ಲೇಶ್‌ ಬಾಬು ಅವರಿಗೆ ಈ ಗೆಲುವು ರಾಜಕೀಯ ಪುನರ್‌ ಜನ್ಮ ನೀಡಿದೆ ಎಂದೇ ಹೇಳಲಾಗುತ್ತಿದೆ.

ಮುನಿಯಪ್ಪರನ್ನು ಎದುರು ಹಾಕಿಕೊಂಡಿದ್ದು ಮುಳುವಾಯಿತೇ?‌

ಕೋಲಾರ ಮೀಸಲು ಲೋಕಸಭೆ ಕ್ಷೇತ್ರದಲ್ಲಿ ಸತತ ಏಳು ಬಾರಿ ಗೆದ್ದಿದ್ದ ಕೆ.ಎಚ್‌.ಮುನಿಯಪ್ಪ ಹಾಗೂ ಅವರ ಬೆಂಬಲಿಗರನ್ನು ಘಟಬಂಧನ್‌ ನಾಯಕರು ಎದುರು ಹಾಕಿಕೊಂಡಿದ್ದು ಟಿಕೆಟ್‌ ತಪ್ಪಿಸಿದ್ದು ಮತ್ತು ನಿರ್ಲಕ್ಷಿಸಿದ್ದು ಕಾಂಗ್ರೆಸ್‌ ಸೋಲಿಗೆ ಪ್ರಮುಖ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ.

ಈ ಬಣದಲ್ಲಿರುವ ಚಿಂತಾಮಣಿ ಶಾಸಕರೂ ಆಗಿರುವ ಸಚಿವ ಡಾ.ಎಂ.ಸಿ.ಸುಧಾಕರ್‌ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌ ಕೋಲಾರ ಶಾಸಕ ಕೊತ್ತೂರು ಮಂಜುನಾಥ್‌ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಹಾಗೂ ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಬಹಳ ವರ್ಷಗಳಿಂದ ಸಡ್ಡೊಡೆದು ನಿಂತಿದ್ದಾರೆ. ಇದಕ್ಕೆ ‘ಘಟಬಂಧನ್‌’ ಎಂಬ ಹೆಸರೂ ಇದೆ.

ಟಿಕೆಟ್‌ ವಿಚಾರದಲ್ಲಿ ಎರಡೂ ಬಣಗಳ ನಡುವೆ ವೈಮನಸ್ಯ ಸ್ಫೋಟಗೊಂಡಿತ್ತು. ಅದಕ್ಕೂ ಮೊದಲು ಮಾರಾಮಾರಿ ನಡೆದು ಮುನಿಯಪ್ಪ ಬೆಂಬಲಿಗ ಹಾಗೂ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಆಸ್ಪತ್ರೆ ಸೇರಿದ್ದರು. ಇಷ್ಟಾದರೂ ಬಣಗಳನ್ನು ಒಂದಾಗಿಸಲು ರಾಜ್ಯ ಕಾಂಗ್ರೆಸ್‌ನ ವರಿಷ್ಠರ ಮಟ್ಟದಲ್ಲಾಗಲಿ ಹೈಕಮಾಂಡ್‌ ಮಟ್ಟದಲ್ಲಾಗಲಿ ‌ಪ್ರಯತ್ನಗಳು ನಡೆಯಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಮುಂದಾಗಿದ್ದ ಸಿದ್ದರಾಮಯ್ಯ ಇಲ್ಲಿನ ಬಣ ರಾಜಕೀಯ ಕಂಡು ಜಾಗ ಖಾಲಿ ಮಾಡಿದ್ದರು. ಇತ್ತ ಮುನಿಯಪ್ಪ ಹಾಗೂ ಅವರ ಬೆಂಬಲಿಗರು ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಪರ ಕೆಲಸ ಮಾಡಿಲ್ಲ ಎಂಬ ದೂರುಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT