ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಟೊಮೆಟೊ ಎಲೆ ಮುಟುರು ರೋಗ ಸಮೀಕ್ಷೆ

ವಿಜ್ಞಾನಿಗಳ ತಂಡ ರಚನೆ–ಟೊಮೆಟೊ ತಾಕಿಗೆ ಭೇಟಿ
Published 17 ಜುಲೈ 2023, 5:40 IST
Last Updated 17 ಜುಲೈ 2023, 5:40 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಟೊಮೆಟೊ ಬೆಳೆಗಾರರಿಗೆ ಪ್ರಮುಖ ಸಮಸ್ಯೆಯಾಗಿರುವ ‘ಎಲೆ ಮುಟುರು ರೋಗ’ ಕುರಿತು ಪರಿಶೀಲನೆ ನಡೆಸಲು ರಚಿಸಿರುವ ವಿಜ್ಞಾನಿಗಳ ತಂಡ ಮುಳಬಾಗಿಲು ತಾಲ್ಲೂಕಿನ ಖದ್ರಿಪುರ ಗ್ರಾಮದ ಟೊಮೆಟೊ ತಾಕಿಗೆ ಭೇಟಿ ನೀಡಿ ರೋಗದ ತೀವ್ರತೆ ಪರೀಕ್ಷಿಸಿದೆ.

ತೋಟಗಾರಿಕಾ ಮಹಾವಿದ್ಯಾಲಯ ಬೆಂಗಳೂರು, ತೋಟಗಾರಿಕಾ ಮಹಾವಿದ್ಯಾಲಯ ಕೋಲಾರ, ತೋಟಗಾರಿಕಾ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರ ಹೊಗಳಗೆರೆ ಮತ್ತು ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಕೋಲಾರದ ವಿಜ್ಞಾನಿಗಳ ತಂಡ ರಚಿಸಿದ್ದು, ತೋಟಗಾರಿಕಾ ಇಲಾಖೆ ಸಹಯೋಗದೊಂದಿಗೆ ಈ ಕಾರ್ಯ ನಡೆಯುತ್ತಿದೆ.

ಎಲೆ ಮುಟುರು ರೋಗ ಸಂಬಂಧ ಸಮೀಕ್ಷೆ ನಡೆಸಲು ಬೆಳೆ ಕುರಿತು ರೈತರು ಅಳವಡಿಸಿಕೊಂಡಿರುವ ಕೃಷಿ ಪದ್ಧತಿ, ತಳಿ/ಹೈಬ್ರಿಡ್‍ನ ವಿವರ, ನಾಟಿ ಮಾಡಿದ ಸಮಯ, ಸಸಿ ತಂದ ಮೂಲ, ಪ್ರಸ್ತುತ ಬೆಳೆಯ ಹಂತ, ಇಲ್ಲಿಯವರೆಗೆ ಬೆಳೆಗೆ ನೀಡಿರುವ ರಾಸಾಯನಿಕ ಗೊಬ್ಬರ ವಿವರ, ರೋಗ ಮತ್ತು ಕೀಟಗಳ ಹತೋಟಿಗೆ ಈ ಹಿಂದಿನಿಂದ ಇಲ್ಲಿಯವರೆಗೆ ಸಿಂಪರಣೆ ಮಾಡಿರುವ ರಾಸಾಯನಿಕ ಕೀಟ ಹಾಗೂ ರೋಗನಾಶಕಗಳ ವಿವರ, ಹಿಂದಿನ ಋತುವಿನಲ್ಲಿ ಬೆಳೆದಿರುವ ಬೆಳೆಯ ವಿವರ, ಸದರಿ ತಾಕಿನ ಸುತ್ತಮುತ್ತ ಪ್ರದೇಶಗಳಲ್ಲಿ ಬೆಳೆದಿರುವ ಬೆಳೆಗಳ ವಿವರ, ತಾಕಿನಲ್ಲಿ ಕಂಡ ಕಳೆಗಳು ಹೀಗೆ ಹಲವು ವಿವರಗಳನ್ನು ಕಲೆ ಹಾಕಿದೆ.

ಹವಾಮಾನ ಕುರಿತ ವಿವರ, ಎಲೆ ಮುಟುರು ನಂಜು ರೋಗ ಹರಡಲು ಕಾರಣವಾಗಿರುವ ಬಿಳಿನೊಣಗಳ ಸಂಖ್ಯೆಯ ವಿವರವನ್ನೂ ಸಂಗ್ರಹಿಸಲಾಗಿದೆ. ನಂತರ ವಿಜ್ಞಾನಿಗಳ ತಂಡವು ಕಲೆ ಹಾಕಿದ ಎಲ್ಲಾ ಮಾಹಿತಿಗಳನ್ನಾಧರಿಸಿ ಸುದೀರ್ಘ ಚರ್ಚೆಯನ್ನು ನಡೆಸಿ, ಎಲೆ ಮುಟುರು ರೋಗವು ತೀವ್ರವಾಗಿ ಹರಡಲು ಖಚಿತ ಕಾರಣಗಳನ್ನು ತಿಳಿಯಲು ಕೋಲಾರ ಜಿಲ್ಲೆಯ ಇತರ ತಾಕುಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಎಲೆ ಮುಟುರು ರೋಗ ಹರಡಲು ಕಾರಣವಾಗಿರುವ ಬಿಳಿ ನೊಣಗಳನ್ನು ಹಾಗೂ ರೋಗದ ಮಾದರಿಯನ್ನು ಸಂಗ್ರಹಿಸಿ ಸಂಶೋಧನೆಯನ್ನು ನಡೆಸಲು ತೀರ್ಮಾನಿಸಲಾಯಿತು.

ತೋಟಗಾರಿಕೆ ಮಹಾವಿದ್ಯಾಲಯ, ಬೆಂಗಳೂರಿನ ಡಾ.ಸಿ.ಎನ್.ಹಂಚಿನಮನಿ (ಪ್ರಾಧ್ಯಾಪಕ– ತರಕಾರಿ ವಿಜ್ಞಾನ), ಡಾ.ಹರೀಶಚಂದ್ರ ನಾಯಕ (ಸಹ ಪ್ರಾಧ್ಯಾಪಕ–ಕೀಟ ವಿಜ್ಞಾನ), ಡಾ.ಶಂಕ್ರಪ್ಪ ಕೆ.ಎಸ್. (ಸಹಾಯಕ ಪ್ರಾಧ್ಯಾಪಕ–ಸಸ್ಯ ರೋಗ ವಿಜ್ಞಾನ), ಕೃಷಿ ವಿಜ್ಞಾನ ಕೇಂದ್ರ ಕೋಲಾರದ ಡಾ. ಶಿವಾನಂದ ಹೊಂಗಲ (ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ), ಡಾ.ಅನಿಲಕುಮಾರ್ ಎಸ್, (ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ), ಡಾ.ಸದಾನಂದ ಕೆ ಮುಶ್ರೀಫ್ (ಸಹಾಯಕ ಪ್ರಾಧ್ಯಾಪಕ–ಸಸ್ಯ ಸಂರಕ್ಷಣೆ), ತೋಟಗಾರಿಕೆ ಮಹಾವಿದ್ಯಾಲಯ ಕೋಲಾರದ ಡಾ.ಆಂಜನಪ್ಪ ಎಂ (ಪ್ರಾಧ್ಯಾಪಕ–ತರಕಾರಿ ವಿಜ್ಞಾನ), ಡಾ. ಕೆ. ತುಳಸಿರಾಮ (ಸಹ ಪ್ರಾಧ್ಯಾಪಕ –ಕೀಟ ವಿಜ್ಞಾನ), ಡಾ.ಮಂಜುನಾಥ ರೆಡ್ಡಿ (ಸಹಾಯಕ ಪ್ರಾಧ್ಯಾಪಕ–ಸಸ್ಯ ರೋಗ ವಿಜ್ಞಾನ), ಡಾ.ಧನಂಜಯ್ಯ ಬಿ.ಎನ್ (ಸಹಾಯಕ ಪ್ರಾಧ್ಯಾಪಕ– ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನ ವಿಜ್ಞಾನ), ತೋ.ಸಂ.ವಿ.ಕೇಂದ್ರ, ಹೋಗಳಗೆರೆ ಡಾ. ಅಶ್ವತ್ಥನಾರಾಯಣ ರೆಡ್ಡಿ (ಸಹಾಯಕ ಪ್ರಾಧ್ಯಾಪಕ–ಕೀಟ ವಿಜ್ಞಾನ), ಮುಳಬಾಗಲಿನ ಕೆ.ಎಸ್.ಡಿ.ಎಚ್‌ನ ಅಧಿಕಾರಿಗಳು ಎಲೆ ಮುಟುರು ರೋಗ ಪೀಡಿತ ಟೊಮೆಟೊ ತಾಕಿನ ಭೇಟಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT