ಶನಿವಾರ, ಜನವರಿ 18, 2020
20 °C

30ಕ್ಕೆ ಕುವೆಂಪು ಜಯಂತಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕವಿ ಕುವೆಂಪು ಅವರ ವಿಶ್ವಮಾನವ ಸಂದೇಶ ಹಾಗೂ ವಿಚಾರಧಾರೆ ಎಲ್ಲರಿಗೂ ತಲುಪಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಪುಷ್ಪಲತಾ ಹೇಳಿದರು.

ಕುವೆಂಪು ಜಯಂತಿ ಆಚರಣೆ ಸಂಬಂಧ ಇಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ಕುವೆಂಪು ಅವರು ಯಾವುದೇ ಒಂದು ಜಾತಿ ಅಥವಾ ವರ್ಗಕ್ಕೆ ಮಾತ್ರ ಸೀಮಿತರಾದವರಲ್ಲ. ಎಲ್ಲಾ ಸಮುದಾಯದವರು ಒಗ್ಗೂಡಿ ಕುವೆಂಪು ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು’ ಎಂದರು.

‘ಕನ್ನಡ ಸಾಹಿತ್ಯವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಪಸರಿಸಿದ ಕೀರ್ತಿ ಕುವೆಂಪು ಅವರಿಗೆ ಸಲ್ಲುತ್ತದೆ. ಕುವೆಂಪು ಕಾವ್ಯ, ನಾಟಕ, ವಿಮರ್ಶೆ, ಕಾದಂಬರಿ, ಮಹಾಕಾವ್ಯ ಹೀಗೆ ಎಲ್ಲಾ ಸಾಹಿತ್ಯ ಪ್ರಕಾರಗಳಿಗೂ ಕೊಡುಗೆ ನೀಡಿದ್ದಾರೆ. ಕುವೆಂಪು ಅವರ ವ್ಯಕ್ತಿತ್ವ ಮೇರು ಪರ್ವತ. ಅವರ ವಿಚಾರಧಾರೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಕೇಂದ್ರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಡಿ.30ರಂದು ಕುವೆಂಪು ಜಯಂತಿಯ ಆಚರಿಸಲಾಗುತ್ತದೆ. ಆ ದಿನ ಬೆಳಿಗ್ಗೆ 10 ಗಂಟೆಗೆ ಕುವೆಂಪು ಉದ್ಯಾನದಿಂದ ಜಾಥಾ ನಡೆಸಲಾಗುತ್ತದೆ. ನಂತರ 11.30ಕ್ಕೆ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯುತ್ತದೆ. ವಿಶೇಷ ಉಪನ್ಯಾಸ ಹಾಗೂ ಕುವೆಂಪು ರಚಿತ ನಾಟಕದ ಪ್ರದರ್ಶನ ಸಹ ಏರ್ಪಡಿಸಲಾಗುವುದು’ ಎಂದು ವಿವರಿಸಿದರು.

‘ಶಾಲಾ ಕಾಲೇಜು ಮಕ್ಕಳಿಗೆ ಕುವೆಂಪು ರಚಿತ ಕಾವ್ಯವಾಚನ, ಪ್ರಬಂಧ ಸ್ಪರ್ಧೆ ಹಾಗೂ ಗಾಯನ ಸ್ಪರ್ಧೆ ನಡೆಸಲಾಗುತ್ತದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುತ್ತದೆ. ಕನ್ನಡಪರ ಸಂಘಟನೆಗಳ ಮುಖಂಡರು ಜಯಂತಿ ಆಚರಣೆಗೆ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ.ಶಂಕರಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌್ ಅಧ್ಯಕ್ಷ ನಾಗಾನಂದ ಕೆಂಪರಾಜ್, ರಾಜ್ಯ ಜಾನಪದ ಅಕಾಡೆಮಿ ಮಾಜಿ ಸದಸ್ಯ ಡಿ.ಆರ್.ರಾಜಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು