ಅರಿವಿನ ಕೊರತೆ: ಹಿಂದುಳಿದ ವಿದ್ಯಾರ್ಥಿಗಳು–  ಪ್ರಾಧ್ಯಾಪಕಿ ಶಾರದಮ್ಮ ಕಳವಳ

ಭಾನುವಾರ, ಮೇ 19, 2019
33 °C
ಕಾರ್ಯಾಗಾರ

ಅರಿವಿನ ಕೊರತೆ: ಹಿಂದುಳಿದ ವಿದ್ಯಾರ್ಥಿಗಳು–  ಪ್ರಾಧ್ಯಾಪಕಿ ಶಾರದಮ್ಮ ಕಳವಳ

Published:
Updated:
Prajavani

ಕೋಲಾರ: ‘ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಮುಖ್ಯ’ ಎಂದು ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಪ್ರೊ.ಕೆ.ಶಾರದಮ್ಮ ಅಭಿಪ್ರಾಯಪಟ್ಟರು.

ಉನ್ನತ ಶಿಕ್ಷಣದ ನಂತರದ ಅವಕಾಶ ಕುರಿತು ಇಲ್ಲಿನ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ನಡೆದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ‘ಪದವಿ, ಉನ್ನತ ಶಿಕ್ಷಣ ಪೂರೈಸಿದ ನಂತರ ವಿದ್ಯಾರ್ಥಿಗಳಿಗೆ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಕಷ್ಟು ಅವಕಾಶವಿದ್ದರೂ ಅರಿವಿನ ಕೊರತೆಯಿಂದ ಹಿಂದುಳಿಯುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಜೀವನೋಪಾಯಕ್ಕಾಗಿ ಓದುವುದು ಆಗಬಾರದು. ಈಗಿನ ಕಾಲಘಟ್ಟದಲ್ಲಿ ಓದುವುದಕ್ಕೂ ದುಡಿಯುವುದಕ್ಕೂ ಸಂಬಂಧ ಇಲ್ಲದಂತಾಗಿದೆ. ಜೀವನದಲ್ಲಿ ಸಾಧನೆ ಮಾಡಲು ದೃಢ ಸಂಕಲ್ಪ ಅಗತ್ಯವಾಗಿದೆ. ಎಲ್ಲವನ್ನೂ ಮೀರಿ ಬೆಳೆದಾಗ ಮಾತ್ರ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯ’ ಎಂದು ಕಿವಿಮಾತು ಹೇಳಿದರು.

‘ಶೂನ್ಯ ಸಂಪಾದನೆ ಮೇಲೆ ಅಧ್ಯಯನ ಮಾಡಿ ದೇಶ ಮತ್ತು ವಿದೇಶದ ನಡುವಿನ ವ್ಯತ್ಯಾಸವನ್ನು ಸಂಶೋಧನೆ ಮೂಲಕ ತಿಳಿಯಬೇಕು. ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಸಿಕ್ಕಿದ ನಂತರ ಭಾಷೆ ಅಭಿವೃದ್ಧಿಗೆ ಕೇಂದ್ರದಿಂದ ಸಾಕಷ್ಟು ಅನುದಾನ ಲಭ್ಯವಿದ್ದರೂ ಅದನ್ನು ಸದ್ಬಳಕೆ ಮಾಡಿಕೊಳ್ಳುವ ಯೋಜನೆ ರೂಪಿಸದೆ ವ್ಯರ್ಥ ಮಾಡಿದೆವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಂರಕ್ಷಣೆ ಮಾಡಬೇಕು: ‘ತಾಳೆಗರಿ ಲಿಪಿ ಮತ್ತು ಮೋಡಿ ಲಿಪಿ ಓದುವವರೆ ಇಲ್ಲದಂತಾಗಿದೆ. ಅಪೂರ್ವವಾದ ಈ ಸಂಪತ್ತನ್ನು ಸರ್ಕಾರ ಸಂರಕ್ಷಣೆ ಮಾಡಬೇಕು. ಕನ್ನಡದಲ್ಲಿನ ಕವಿರಾಜಮಾರ್ಗ ಮತ್ತು ರನ್ನನ ಗದಾಯುದ್ಧವನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಲಾಗಿದೆ. ಅದೇ ರೀತಿ ಕನ್ನಡದ ಸಾಹಿತ್ಯ ಸಂಪತ್ತನ್ನು ಇತರ ಭಾಷೆಗಳಿಗೆ ಅನುವಾದ ಮಾಡುವ ಮೂಲಕ ಜ್ಞಾನ ವಿಕಾಸಗೊಳಿಸಿ ಜಗತ್ತಿನೆಲ್ಲೆಡೆ ಪಸರಿಸಬೇಕು’ ಎಂದು ಸಲಹೆ ನೀಡಿದರು.

‘ಕನ್ನಡದಲ್ಲೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯಬಹುದು. ಅನೇಕ ಮಂದಿ ಕನ್ನಡದಲ್ಲಿ ಕೇಂದ್ರ ಲೋಕಸೇವಾ ಆಯೋಗ ಹಾಗೂ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆ ಬರೆದು ಅತ್ಯುನ್ನತ ಸಾಧನೆ ಮಾಡಿದ್ದಾರೆ. ಇದಕ್ಕೆ ಜಿಲ್ಲೆಯ ನಂದಿನಿ ಅವರು ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಉತ್ತಮ ನಿದರ್ಶನ. ಮನಸ್ಸಿದ್ದರೆ ಮಾರ್ಗ ಎಂಬಂತೆ ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯೊಂದಿಗೆ ಯಶಸ್ಸಿನ ಹಾದಿಯಲ್ಲಿ ಸಾಗಬೇಕು’ ಎಂದು ತಿಳಿಸಿದರು.

ಆಸಕ್ತಿ ಮುಖ್ಯ: ‘ಯಾವುದೇ ವಿಷಯ ಕಲಿಯಬೇಕಾದರೆ ಆಸಕ್ತಿ ಮುಖ್ಯ. ಕೆಲಸ ಮಾಡಲು ಯಾವುದೇ ಕೊರತೆಯಿಲ್ಲ. ಅನೇಕ ಅಧ್ಯಾಯನಕ್ಕೆ ಶಿಷ್ಯ ವೇತನ ನೀಡಲಾಗುವುದು. ಜನಪದ, ರಂಗಭೂಮಿ, ಕರಕುಶಲ ಸೇರಿದಂತೆ ಹಲವು ಇಲಾಖೆಗಳಲ್ಲಿ ಯೋಜನೆಗಳಿವೆ. ಇದನ್ನು ಅರಿತರೆ ವಿದ್ಯಾರ್ಥಿಗಳ ಭವಿಷ್ಯದ ಹಾದಿ ಸುಗಮವಾಗಲಿದೆ’ ಎಂದು ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜು ಸಹ ಪ್ರಾಧ್ಯಾಪಕ ಪ್ರೊ.ರುದ್ರೇಶ್ ಅದರಂಗಿ ಹೇಳಿದರು.

ಸಮಾಜಮುಖಿಯಾಗಿ: ‘ಕನ್ನಡ ಭಾಷೆಯು ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಅರ್ಥಿಕವಾಗಿ ಸಂಬಂಧ ಒಳಗೊಂಡಿದೆ. ಭಾಷಾ ಕೌಶಲವನ್ನು ಸಾಮರ್ಥ್ಯಕ್ಕೆ ತಕ್ಕಂತೆ ಬಳಸಿಕೊಂಡು ಸಮಾಜಮುಖಿಯಾಗಿ. ಮಾನವಿಕ ಮತ್ತು ಪರಿಸರದ ಅಂಶಗಳನ್ನು ತಿಳಿಯುವ ಅಗತ್ಯವಿದೆ. ಕನ್ನಡದ ಕಲೆಗಳ ಬಗ್ಗೆ ಸಾಮಾಜಿಕ ಅಸಮತೋಲನ ಕಂಡುಬಂದಿದ್ದು, ಭಾಷೆ ವ್ಯಾಪರೀಕರಣವಾಗುತ್ತಿದೆ’ ಎಂದು ಸರ್ಕಾರಿ ಮಹಿಳಾ ಕಾಲೇಜು ಪ್ರಾಧ್ಯಾಪಕ ಸಿ.ರಮೇಶ್‌ ವಿಷಾದಿಸಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜೇಂದ್ರಕುಮಾರ್, ದ್ರಾವಿಡ ವಿ.ವಿ ಸಹಾಯಕ ಪ್ರಾಧ್ಯಾಪಕಿ ಜಯಲಲಿತಾ, ಸಹಾಯಕ ಪ್ರಾಧ್ಯಾಪಕಿ ಕೌಸಲ್ಯ ಪಾಲ್ಗೊಂಡಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !