ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಪರಿವರ್ತನೆ: ಸ್ಥಳ ಪರಿಶೀಲಿಸಿ

ಸಭೆಯಲ್ಲಿ ಕುಡಾ ಅಧಿಕಾರಿಗಳಿಗೆ ಶಾಸಕ ಶ್ರೀನಿವಾಸಗೌಡ ಸೂಚನೆ
Last Updated 9 ಜನವರಿ 2020, 14:37 IST
ಅಕ್ಷರ ಗಾತ್ರ

ಕೋಲಾರ: ನಗರದ ಪೇಟೆಚಾಮನಹಳ್ಳಿ ಬಡಾವಣೆಯಲ್ಲಿರುವ ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ (ಕುಡಾ) ಜಾಗದ ಒತ್ತುವರಿ ತೆರವುಗೊಳಿಸಲು ಹಾಗೂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಭೂ ಪರಿವರ್ತನೆಗೆ ಅನುಮೋದನೆ ನೀಡಲು ಇಲ್ಲಿ ಗುರುವಾರ ನಡೆದ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಶಾಸಕ ಕೆ.ಶ್ರೀನಿವಾಸಗೌಡರ ಅಧ್ಯಕ್ಷತೆಯಲ್ಲಿ ನಡೆದ ಕುಡಾ ಸಭೆಯಲ್ಲಿ, ಭೂ ಪರಿವರ್ತನೆಗೆ ಅನುಮೋದನೆ, ದೇವರಾಜು ಅರಸು ಬಡಾವಣೆಯಲ್ಲಿ ವಿದ್ಯುತ್ ಕಾಮಗಾರಿ ತಡವಾಗಿರುವುದಕ್ಕೆ ಗುತ್ತಿಗೆದಾರರಿಗೆ ದಂಡ ವಿಧಿಸಲು ಹಾಗೂ ಪ್ರಾಧಿಕಾರದಿಂದ ಉದ್ಯಾನಗಳನ್ನು ಅಭಿವೃದ್ಧಿಪಡಿಸಲು ನಿರ್ಣಯ ಕೈಗೊಳ್ಳಲಾಯಿತು.

‘ಪ್ರಾಧಿಕಾರದ ಹಿಂದಿನ ಸಭೆಯಲ್ಲಿ ರಸ್ತೆ ಅಭಿವೃದ್ಧಿಗೆ ಮತ್ತು ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೆ ಅನುಮೋದನೆಗೆ ನೀಡಲಾಗಿದೆ. ಆದರೆ, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡರೂ ಏಕೆ ಕೆಲಸ ಆರಂಭಿಸಿಲ್ಲ’ ಎಂದು ಶ್ರೀನಿವಾಸಗೌಡರು ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡರು.

‘ಯಾವುದೇ ಜಮೀನಿಗೆ ಭೂ ಪರಿವರ್ತನೆಗೆ ಅನುಮೋದನೆ ನೀಡುವ ಮೊದಲು ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಬೇಕು. ಭೂ ಪರಿವರ್ತನೆಗೆ ಬರುವವರು ಸುತ್ತಮುತ್ತಲಿನ ಸರ್ಕಾರಿ ಜಮೀನು, ಕಾಲುವೆ, ಕೆರೆ, ಕುಂಟೆ ಜಾಗ ತೋರಿಸಿರುತ್ತಾರೆ. ಸರ್ಕಾರಿ ಜಾಗ ರಕ್ಷಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು. ಇತ್ತೀಚೆಗೆ ಭೂ ಪರಿವರ್ತನೆಗೆ ಸಾರ್ವಜನಿಕರಿಂದ ಹೆಚ್ಚು ಅರ್ಜಿ ಬರುತ್ತಿದ್ದು, ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ’ ಎಂದು ಸೂಚಿಸಿದರು.

ಡಿ.ಸಿ ಸಿಡಿಮಿಡಿ

‘ಸಾರ್ವಜನಿಕರ ಹಿತದೃಷ್ಟಿಯಿಂದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತದೆ. ಪ್ರಾಧಿಕಾರದಿಂದ ಹಣ ಬಿಡುಗಡೆಯಾಗಿದ್ದರೂ ಏಕೆ ಕೆಲಸ ವಿಳಂಬವಾಗಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು.

‘ಕೆಲಸ ಮಾಡಿ ಎಂದರೆ ಮಳೆ ವಾತಾವರಣವಿದೆ ಎಂದು ಸಬೂಬು ಹೇಳುತ್ತೀರಿ. ನಿಮ್ಮ ಹಿರಿಯ ಎಂಜಿನಿಯರ್‌ ನಿವೃತ್ತಿ ಸಮಯ ಹತ್ತಿರವಿದೆ. ಅವರಿಗೆ ಅದಕ್ಕೂ ಮೊದಲೇ ವಿಶ್ರಾಂತಿ ಬೇಕಾ ಕೇಳಿ. ನಿಮ್ಮ ತಪ್ಪಿನಿಂದ ಜನರಿಗೆ ಉತ್ತರ ಕೊಡಲು ಆಗುತ್ತಿಲ್ಲ. ನಗರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅಧಿಕಾರಿಗಳು ಸದಾ ಸಮಸ್ಯೆ ಹೇಳಿಕೊಂಡಿದ್ದರೆ ಕೆಲಸ ಮಾಡುವವರು ಯಾರು?’ ಎಂದು ಪ್ರಶ್ನಿಸಿದರು.

ಕೆಲಸ ಪೂರ್ಣಗೊಂಡಿಲ್ಲ

‘ದೇವರಾಜ ಅರಸು ಬಡಾವಣೆಯಲ್ಲಿನ ವಿದ್ಯುತ್ ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ತಿಳಿಸಿದ್ದರೂ ಈವರೆಗೆ ಕೆಲಸ ಪೂರ್ಣಗೊಂಡಿಲ್ಲ. ಕುಡಿಯುವ ನೀರಿನ ಸೌಕರ್ಯ ಕಲ್ಪಿಸುವಂತೆ ಬಡಾವಣೆ ನಿವಾಸಿಗಳು ಮನವಿ ಮಾಡಿದ್ದಾರೆ’ ಎಂದು ಕುಡಾ ಆಯುಕ್ತ ಮಾಜುದ್ದೀನ್‌ ಖಾನ್‌ ಮಾಹಿತಿ ನೀಡಿದರು.

‘ಅರಸು ಬಡಾವಣೆಯಲ್ಲಿ ಉದ್ಯಾನ ಅಭಿವೃದ್ಧಿಪಡಿಸಲು ಕ್ರಮ ಕೈಗೊಂಡಿದ್ದೇವೆ. ಜಾಲಪ್ಪ ಆಸ್ಪತ್ರೆ ಎದುರು ಇರುವ ಉದ್ಯಾನವನ್ನು ಜಾಲಪ್ಪ ಆಸ್ಪತ್ರೆ ಕಡೆಯಿಂದ ಅಭಿವೃದ್ಧಿಪಡಿಸಲು ತಿಳಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಪೈಪ್‌ಲೈನ್ ಮತ್ತು ಯುಜಿಡಿ ಕಾಮಗಾರಿಗೆ ಅಮೃತ್ ಯೋಜನೆಯಲ್ಲಿ ಅವಕಾಶವಿದ್ದರೆ ಕೆಲಸ ಮಾಡಿ. ನಗರದಲ್ಲಿ ಯುಜಿಡಿ ಸಮಸ್ಯೆ ಗಂಭೀರವಾಗಿದೆ. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರು ಏನು ಕೆಲಸ ಮಾಡುತ್ತಿದ್ದಾರೆ. ಸಂಬಳ ಡ್ರಾ ಮಾಡಿಕೊಂಡು ಇದ್ದರೆ ಯಾರು ಸುಮ್ಮನೆ ಕೂರುವುದಿಲ್ಲ’ ಎಂದು ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡರು.

ನಗರಸಭೆ ಆಯುಕ್ತ ಶ್ರೀಕಾಂತ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT