ಕೋಲಾರ: ‘ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ತೆರಿಗೆ ವಸೂಲಿ ಪ್ರಕ್ರಿಯೆ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ’ ಎಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಬಿ.ಬಿ.ಕಾವೇರಿ ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿ ಮಂಗಳವಾರ ನಡೆದ ನಗರಸಭೆ ಹಾಗೂ ಪುರಸಭೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯ ಸ್ಥಳೀಯ ಸಂಸ್ಥೆಗಳು ತೆರಿಗೆ ವಸೂಲಾತಿಯಲ್ಲಿ ಹಿಂದುಳಿದಿವೆ. ಅಧಿಕಾರಿಗಳು ತೆರಿಗೆ ಸಂಗ್ರಹಣೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ’ ಎಂದು ಕೆಂಡಾಮಂಡಲರಾದರು.
‘ನಗರಸಭೆ ಮತ್ತು ಪುರಸಭೆಗಳಲ್ಲಿ ಸಾಕಷ್ಟು ಕಾರ್ಮಿಕರು ದಿನಗೂಲಿ, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ನಿಗದಿತ ತೆರಿಗೆ ವಸೂಲಿ ಗುರಿ ಸಾಧನೆಯಾದರೆ ಮಾತ್ರ ಈ ಸಿಬ್ಬಂದಿಗೆ ವೇತನ ನೀಡಲು ಸಹಕಾರಿಯಾಗುತ್ತದೆ. ಹೀಗಾಗಿ ಅಧಿಕಾರಿಗಳು ಕಾಲಮಿತಿಯೊಳಗೆ ತೆರಿಗೆ ಗುರಿ ಸಾಧನೆ ಮಾಡಬೇಕು’ ಎಂದು ಸೂಚಿಸಿದರು.
‘ಕೋವಿಡ್- ಕಾರಣಕ್ಕೆ ತೆರಿಗೆ ವಸೂಲಾತಿಗೆ ಹಿನ್ನಡೆಯಾಗಿದೆ. ಸಾರ್ವಜನಿಕರು ತೆರಿಗೆ ಪಾವತಿಗೆ ಮುಂದೆ ಬರುತ್ತಿಲ್ಲ. ಕಾಲಮಿತಿಯೊಳಗೆ ತೆರಿಗೆ ಪಾವತಿಸುವವರಿಗೆ ಶೇ 5ರಷ್ಟು ರಿಯಾಯಿತಿ ನೀಡಲು ಮತ್ತು ತೆರಿಗೆ ಮೇಲಿನ ಬಡ್ಡಿ ಮನ್ನಾ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಸಾರ್ವಜನಿಕರು ಸ್ವಪ್ರೇರಣೆಯಿಂದ ತೆರಿಗೆ ಪಾವತಿಸುವ ನಿರೀಕ್ಷೆಯಿದೆ’ ಎಂದು ಕೋಲಾರ ನಗರಸಭೆ ಆಯುಕ್ತ ಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದರು.
‘ಅಧಿಕಾರಿಗಳು ತೆರಿಗೆ ವಸೂಲಾತಿಗಾಗಿ ಮನೆ ಅಥವಾ ಅಂಗಡಿಗಳ ಬಳಿ ಹೋದರೆ ಸಾರ್ವಜನಿಕರು ಕೋವಿಡ್‌ನ ನೆಪ ಹೇಳಿ ಮುಂದಿನ ವಾರ ಬರುವಂತೆ ತಿಳಿಸುತ್ತಾರೆ. ಮತ್ತೆ ಒಂದು ವಾರ ಬಿಟ್ಟು ಹೋದರೂ ತೆರಿಗೆ ಕಟ್ಟದೆ ಸತಾಯಿಸುತ್ತಾರೆ’ ಎಂದು ತಿಳಿಸಿದರು.
ರಾಜಿ ಪ್ರಶ್ನೆಯಿಲ್ಲ: ‘ಸರ್ಕಾರ ಕೊರೊನಾ ಸೋಂಕಿನ ಪ್ರಮಾಣ ತಗ್ಗಿರುವುದರಿಂದ ಲಾಕ್‌ಡೌನ್ ನಿಯಮಗಳನ್ನು ಸಡಿಲಗೊಳಿಸಿದೆ. ತೆರಿಗೆ ಬಾಕಿ ಉಳಿಸಿಕೊಂಡಿರುವ ಮನೆ, ವಾಣಿಜ್ಯ ಮಳಿಗೆ ಬಳಿಗೆ ತೆರಳಿ ಯಾವುದೇ ಮುಲಾಜಿಲ್ಲದೆ ವಸೂಲಿ ಮಾಡಲೇಬೇಕು. ಈ ವಿಚಾರದಲ್ಲಿ ರಾಜಿ ಪ್ರಶ್ನೆಯಿಲ್ಲ’ ಎಂದು ಕಾವೇರಿ ಗುಡುಗಿದರು.
‘ರಾಜ್ಯ ಹಣಕಾಸು ಯೋಜನೆ ಹಾಗೂ 15ನೇ ಹಣಕಾಸು ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಕಾಮಗಾರಿ ಮುಗಿಯದಿದ್ದರೆ ಅನುದಾನ ಕಡಿತಗೊಳಿಸಿ ಬೇರೆ ಕಾಮಗಾರಿಗೆ ವರ್ಗಾವಣೆ ಮಾಡಲಾಗುತ್ತದೆ. ಕೆಲಸ ತಡವಾದರೆ ಅಧಿಕಾರಿಗಳನ್ನು ಹೊಣೆಯಾಗಿಸಿ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಖಡಕ್ ಎಚ್ಚರಿಕೆ ನೀಡಿದರು.
ಅಪಾಯ ತಪ್ಪಿದಲ್ಲ: ‘ಈ ಹಿಂದೆ ಕೋಲಾರಕ್ಕೆ ಭೇಟಿ ನೀಡಿದ್ದಾಗ ನಿವೇಶನರಹಿತರು ಮತ್ತು ವಸತಿರಹಿತರು ನಿವೇಶನ, ವಸತಿ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದ್ದರು. ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ನಗರಸಭೆಯು ಮಾಜಿ ಮತ್ತು ಹಾಲಿ ಸದಸ್ಯರು ದೂರು ಕೊಟ್ಟಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕದಿದ್ದರೆ ಅಪಾಯ ತಪ್ಪಿದಲ್ಲ’ ಎಂದರು.
‘ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗಿದ್ದು, ಮಳೆ ಅನಾಹುತಗಳ ಬಗ್ಗೆ ಎಚ್ಚರ ವಹಿಸಿ. ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಕಸ ವಿಲೇವಾರಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯಬೇಕು. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಹಾಕುವುದನ್ನು ನಿಯಂತ್ರಿಸಬೇಕು. ಮುಂದಿನ ತಿಂಗಳು ಇಲಾಖೆ ಪ್ರಗತಿ ಪರಿಶೀಲನೆಗಾಗಿ ಜಿಲ್ಲೆಗೆ ಬರುತ್ತೇನೆ. ಈಗ ಸೂಚಿಸಿರುವ ಕೆಲಸಗಳ ಪ್ರಗತಿ ಆಗಿರಬೇಕು’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.