ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಎಣಿಕೆ: ಸೋಲು ಗೆಲುವಿನ ಲೆಕ್ಕಾಚಾರ, ಹೆಚ್ಚಿದ ಹೃದಯ ಬಡಿತ

Last Updated 22 ಮೇ 2019, 19:48 IST
ಅಕ್ಷರ ಗಾತ್ರ

ಅಂಕಿ ಅಂಶ
* 14 ಮಂದಿ ಅಭ್ಯರ್ಥಿಗಳು
* 16,28,782 ಮತದಾರರು
* ಶೇ 77.15ರಷ್ಟು ಮತದಾನ
* 1,000 ಪೊಲೀಸರ ನಿಯೋಜನೆ

ಕೋಲಾರ: ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಗುರುವಾರ (ಮೇ 23) ನಡೆಯಲಿದ್ದು, ಅಭ್ಯರ್ಥಿಗಳ ಹೃದಯ ಬಡಿತ ಹೆಚ್ಚಿದೆ.

ಕ್ಷೇತ್ರದಲ್ಲಿನ 14 ಅಭ್ಯರ್ಥಿಗಳ ಭವಿಷ್ಯ ವಿದ್ಯುನ್ಮಾನ ಮತ ಯಂತ್ರಗಳಲ್ಲಿ (ಇವಿಎಂ) ಭದ್ರವಾಗಿದ್ದು, ಸೋಲು ಗೆಲುವಿನ ಲೆಕ್ಕಾಚಾರ ಜೋರಾಗಿದೆ. ರಸ್ತೆ ಬದಿಯ ಟೀ ಅಂಗಡಿ, ಹೋಟೆಲ್‌ಗಳಲ್ಲಿ ಈಗ ಚುನಾವಣೆ ಫಲಿತಾಂಶದ್ದೇ ಮಾತು.

ಜಿಲ್ಲಾ ಕೇಂದ್ರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತ ಎಣಿಕೆ ಕೇಂದ್ರ ಸ್ಥಾಪಿಸಿದ್ದು, ಎಲ್ಲರ ಚಿತ್ತ ಮತ ಎಣಿಕೆ ಕೇಂದ್ರದತ್ತ ನೆಟ್ಟಿದೆ. ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಇವಿಎಂಗಳನ್ನು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಇರಿಸಲಾಗಿದ್ದು, ಪ್ರತ್ಯೇಕ ಕೊಠಡಿಗಳಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿದೆ.

ಕ್ಷೇತ್ರದಲ್ಲಿ ಏ.18ರಂದು ನಡೆದಿದ್ದ ಚುನಾವಣೆಯಲ್ಲಿ ಶೇ 77.15ರಷ್ಟು ಮತದಾನವಾಗಿತ್ತು. ಕ್ಷೇತ್ರದಲ್ಲಿ 16,28,782 ಮತದಾರರಿದ್ದು, ಈ ಪೈಕಿ 12,55,976 ಮಂದಿ ಮತ ಚಲಾಯಿಸಿದ್ದರು. ಅಭ್ಯರ್ಥಿಗಳ ಜತೆಗೆ ಅವರ ಬೆಂಬಲಿಗರು ಹಾಗೂ ಪಕ್ಷದ ಮುಖಂಡರಲ್ಲೂ ಫಲಿತಾಂಶದ ಬಗ್ಗೆ ಕುತೂಹಲ ಮೂಡಿದೆ.

ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ಗೆಲುವಿಗಾಗಿ ದೇವರ ಮೊರೆ ಹೋಗಿದ್ದು, ಬೆಂಬಲಿಗರು ಹಾಗೂ ಪಕ್ಷದ ಮುಖಂಡರೊಂದಿಗೆ ಜಿಲ್ಲೆಯ ಮುಳಬಾಗಿಲಿನ ಆಂಜನೇಯಸ್ವಾಮಿ, ಕೋಲಾರದ ಕೋಲಾರಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಇವರ ಎದುರಾಳಿ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪ ಕೋಂಡರಾಜನಹಳ್ಳಿಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಗೆಲುವಿಗೆ ಪ್ರಾರ್ಥಿಸಿದರು.

700 ಸಿಬ್ಬಂದಿ: 12 ಕೊಠಡಿಗಳಲ್ಲಿ ಮತ ಎಣಿಕೆಗೆ 108 ಟೇಬಲ್‌ ವ್ಯವಸ್ಥೆ ಮಾಡಲಾಗಿದೆ. 700 ಸಿಬ್ಬಂದಿಯನ್ನು ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಲಾಗಿದ್ದು, ಈ ಪೈಕಿ 500 ಅಧಿಕಾರಿಗಳು, 200 ಸಹಾಯಕರು ಸೇರಿದ್ದಾರೆ.

ಅಭ್ಯರ್ಥಿಗಳ ಪರ ಎಣಿಕೆ ಕೇಂದ್ರಕ್ಕೆ ಬರುವ ಎಜೆಂಟರಿಗೆ ಕಡ್ಡಾಯವಾಗಿ ಗುರುತಿನ ಚೀಟಿ ತರುವಂತೆ ಸೂಚಿಸಲಾಗಿದೆ. 600 ಮಂದಿ ಎಜೆಂಟರಿಗೆ ಎಣಿಕೆ ಕೇಂದ್ರ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಗುರುತಿನ ಚೀಟಿ ಇಲ್ಲದ ಅನಧಿಕೃತ ವ್ಯಕ್ತಿಗಳಿಗೆ ಕೇಂದ್ರಕ್ಕೆ ಪ್ರವೇಶ ನೀಡದಂತೆ ಜಿಲ್ಲಾಧಿಕಾರಿಯು ಪೊಲೀಸರಿಗೆ ಖಡಕ್‌ ಸೂಚನೆ ಕೊಟ್ಟಿದ್ದಾರೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾಂಪೌಂಡ್‌ಗೆ ಹೊಂದಿಕೊಂಡಂತಿರುವ ಬಂಗಾರಪೇಟೆ ರಸ್ತೆ, ಅಂಚೆ ಕಚೇರಿ ರಸ್ತೆ, ರಾಮಕೃಷ್ಣ ಉಡುಪ ರಸ್ತೆಯಲ್ಲಿ ಬ್ಯಾರಿಕೇಡ್‌ ಹಾಕಲಾಗಿದ್ದು, ಬೆಳಿಗ್ಗೆ 6 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಈ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ನಿಷೇಧಾಜ್ಞೆ ಜಾರಿ: ಜಿಲ್ಲಾಧಿಕಾರಿಯು ಕೇಂದ್ರದ ಸುತ್ತಲೂ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಕೇಂದ್ರದ ಸುತ್ತಮುತ್ತ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ. 1,000 ಪೊಲೀಸ್‌ ಸಿಬ್ಬಂದಿಯನ್ನು ಕೇಂದ್ರದ ಸುತ್ತಲೂ ಭದ್ರತೆಗೆ ನಿಯೋಜಿಸಲಾಗಿದೆ. ಜಿಲ್ಲೆಯಾದ್ಯಂತ ಶುಕ್ರವಾರ (ಮೇ 24) ಬೆಳಿಗ್ಗೆ 6 ಗಂಟೆವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಮದ್ಯದಂಗಡಿಗಳನ್ನು ಬಂದ್‌ ಮಾಡುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಮತ ಎಣಿಕೆ ಕೇಂದ್ರದ ಬಳಿ ಬರುವ ಅಭ್ಯರ್ಥಿಗಳ ಬೆಂಬಲಿಗರು, ಏಜೆಂಟರು ಹಾಗೂ ಪಕ್ಷಗಳ ಕಾರ್ಯಕರ್ತರ ವಾಹನಗಳ ನಿಲುಗಡೆಗೆ ವಿವಿಧೆಡೆ ವ್ಯವಸ್ಥೆ ಮಾಡಲಾಗಿದೆ. ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿ ಆವರಣ, ಸಿ.ಬೈರೇಗೌಡ ನಗರ, ಜಿಲ್ಲಾ ಪಂಚಾಯಿತಿ ಮುಂಭಾಗದ ಲಾರಿ ನಿಲ್ದಾಣ, ಮಣಿಘಟ್ಟ ರಸ್ತೆ, ನಚಿಕೇತನ ವಿದ್ಯಾರ್ಥಿನಿಲಯದ ಆವರಣ, ಕೋಲಾರಮ್ಮ ದೇವಸ್ಥಾನದ ಮುಂಭಾಗ, ಇಟಿಸಿಎಂ ವೃತ್ತ, ಕೆಇಬಿ ಕಚೇರಿ ಮುಂದೆ, ಮೆಥೋಡಿಸ್ಟ್ ಶಾಲೆ ಬಳಿ ವಾಹನಗಳನ್ನು ನಿಲ್ಲಿಸಬೇಕು.

ಸಂಚಾರ ಬದಲಾವಣೆ: ಎಣಿಕೆ ಕೇಂದ್ರದ ಮುಂಭಾಗದ ಬಂಗಾರಪೇಟೆ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿರುವುದರಿಂದ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಮುಳಬಾಗಿಲು, ಶ್ರೀನಿವಾಸಪುರ, ಚಿಕ್ಕಬಳ್ಳಾಪುರ, ಚಿಂತಾಮಣಿ ಮತ್ತು ಬೇತಮಂಗಲ ಕಡೆಯಿಂದ ಬರುವ ವಾಹನಗಳು ಮೆಕ್ಕೆ ವೃತ್ತ, ಅಮ್ಮವಾರಿಪೇಟೆ ವೃತ್ತದ ಮೂಲಕ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕಡೆಗೆ ಹೋಗಬೇಕು. ಬಂಗಾರಪೇಟೆ, ಕೆಜಿಎಫ್ ಕಡೆಯಿಂದ ಬರುವ ವಾಹನಗಳು ಬಂಗಾರಪೇಟೆ ವೃತ್ತ, ಡೂಂಲೈಟ್ ವೃತ್ತ, ಕ್ಲಾಕ್‌ ಟವರ್ ಮೂಲಕ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕಡೆಗೆ ಸಂಚರಿಸಬೇಕು ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT