ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾವು ವಹಿವಾಟು ಪಾರದರ್ಶಕವಾಗಿರಲಿ’

ಬಿಳಿ ಚೀಟಿ ವ್ಯವಹಾರಕ್ಕೆ ಕಡಿವಾಣ ಹಾಕಿ: ಶಾಸಕ ಕೆ.ಆರ್. ರಮೇಶ್ ಕುಮಾರ್ ತಾಕೀತು
Last Updated 13 ಮೇ 2022, 2:12 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ‘ಎಪಿಎಂಸಿ ಅಧಿಕಾರಿಗಳು ಮಾವಿನ ಕಾಯಿ ವಹಿವಾಟು ಪಾರದರ್ಶಕವಾಗಿ ಇರುವಂತೆ ನೋಡಿಕೊಳ್ಳಬೇಕು. ಮಾರುಕಟ್ಟೆಯಲ್ಲಿ ರೈತ ಸ್ನೇಹಿ ಪರಿಸರಕ್ಕೆ ಪೂರಕವಾದ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಕೆ.ಆರ್. ರಮೇಶ್ ಕುಮಾರ್ ಹೇಳಿದರು.

ಪಟ್ಟಣದ ಎಪಿಎಂಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಮಾವಿನ ಕಾಯಿ ಮಂಡಿ ಮಾಲೀಕರು, ವರ್ತಕರು ಹಾಗೂ ಮಾವು ಬೆಳೆಗಾರರ ಸಭೆಯಲ್ಲಿ ಮಾತನಾಡಿದದರು.

ಎಪಿಎಂಸಿ ಪ್ರಾಂಗಣದಲ್ಲಿ ಮೂಲ ಸೌಕರ್ಯ ಒದಗಿಸಬೇಕು. ಶುದ್ಧ ಕುಡಿಯುವ ನೀರು ಪೂರೈಸಬೇಕು. ಸ್ವಚ್ಛತೆ ಕಾಪಾಡಬೇಕು ಎಂದು ಹೇಳಿದರು.

ಮಾರುಕಟ್ಟೆಯಲ್ಲಿ ಮಾವಿನ ವಹಿವಾಟು ನಡೆಯುವ ಕಾಲದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಹೊರ ಠಾಣೆ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. ರೈತರು ಹಾಗೂ ವ್ಯಾಪಾರಿಗಳು ಸಹಕಾರದಿಂದ ವಹಿವಾಟು ನಡೆಸಬೇಕು. ಯಾವುದೇ ಕಾರಣಕ್ಕೂ ಬಿಳಿಚೀಟಿ ವ್ಯವಹಾರ ಮಾಡಬಾರದು. ಎಪಿಎಂಸಿ ಒದಗಿಸುವ ರಸೀದಿ ಪುಸ್ತಕದಲ್ಲಿ ವಹಿವಾಟಿನ ವಿವರ ದಾಖಲಿಸಬೇಕು ಎಂದು ಹೇಳಿದರು.

ಮಂಡಿ ಮಾಲೀಕರು ಮಾವಿನ ಕಾಯಿ ಬೆಲೆಯನ್ನು ಗುಟ್ಟಾಗಿ ಇಡದೆ, ಪ್ರತಿದಿನ ಸಾರ್ವಜನಿಕವಾಗಿ ಪ್ರಕಟಿಸಬೇಕು. ಈ ವಿಷಯದಲ್ಲಿ ಪಾರದರ್ಶಕ ನಡೆ ಇಲ್ಲವಾದರೆ ರೈತರಲ್ಲಿ ವ್ಯಾಪಾರಸ್ಥರ ಬಗ್ಗೆ ಅನುಮಾನ ಮೂಡುತ್ತದೆ. ಮಾವು ವಹಿವಾಟಿನಲ್ಲಿ ಸೌಹಾರ್ದ ವಾತಾವರಣ ಕೆಡದಂತೆ ಎಚ್ಚರವಹಿಸಬೇಕು. ಸಮಸ್ಯೆಗಳನ್ನು ಸೌಹಾರ್ದದಿಂದ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.

ತಾಲ್ಲೂಕಿನಲ್ಲಿ ಮಳೆಯೊಂದಿಗೆ ಬೀಸಿದ ಬಿರುಗಾಳಿ ಹಾಗೂ ಆಲಿಕಲ್ಲಿನ ಹೊಡೆತಕ್ಕೆ ಸಿಕ್ಕಿ ಅಪಾರ ಪ್ರಮಾಣದ ಬೆಳೆ ಹಾನಿಗೀಡಾಗಿದೆ. ಕಂದಾಯ ಹಾಗೂ ತೋಟಗಾರಿಕಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಷ್ಟದ ಅಂದಾಜು ನಡೆಸಬೇಕು. ಶೀಘ್ರವೇ ಸರ್ಕಾರಕ್ಕೆ ವರದಿ ನೀಡಬೇಕು. ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿ ಜತೆಗೆ ಚರ್ಚಿಸಲಾಗುವುದು ಎಂದು ಹೇಳಿದರು.

ಮಾರುಕಟ್ಟೆ ಪ್ರದೇಶದಿಂದ ಕೊಳೆತ ಮಾವನ್ನು ಹೊರಗೆ ಸಾಗಿಸಬೇಕು. ಅರಣ್ಯ ಪ್ರದೇಶದಲ್ಲಿ ಗುಂಡಿ ತೋಡಿ ಸುರಿಯಬೇಕು. ಯಾವುದೇ ಕಾರಣಕ್ಕೂ ರಸ್ತೆಯ ಪಕ್ಕದಲ್ಲಿ ಸುರಿಯಬಾರದು ಎಂದು ಹೇಳಿದರು.

ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಚಿನ್ನಪ್ಪರೆಡ್ಡಿ ಮಾತನಾಡಿ, ತಾಲ್ಲೂಕಿನಲ್ಲಿ ಮಾವು ಸಂಸ್ಕರಣಾ ಘಟಕ ಸ್ಥಾಪಿಸಬೇಕು. ಉಪ್ಪಿನಕಾಯಿ ತಯಾರಿಕಾ ಘಟಕ ಸ್ಥಾಪಿಸಲು ಕ್ರಮಕೈಗೊಳ್ಳಬೇಕು. ಮಾವು ವಹಿವಾಟಿನಲ್ಲಿ ಬೆಳೆಗಾರರಿಂದ ಶೇ 10ರಷ್ಟು ಕಮಿಷನ್ ಪಡೆಯುವುದನ್ನು ತಡೆಯಬೇಕು ಎಂದು ಮನವಿ ಮಾಡಿದರು.

ತಹಶೀಲ್ದಾರ್ ಶರಿನ್ ತಾಜ್, ಎಪಿಎಂಸಿ ಕಾರ್ಯದರ್ಶಿ ಆರ್. ಉಮಾ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ. ಶ್ರೀನಿವಾಸನ್, ಮುಖಂಡರಾದ ಅಕ್ಬರ್ ಷರೀಫ್, ಬಿ.ಜಿ. ಸೈಯದ್ ಖಾದರ್, ಶ್ರೀನಿವಾಸ್ ಜಾವಿದ್ ಅನ್ಸಾರಿ, ಅಯ್ಯಪ್ಪ, ಹರೀಶ್ ಯಾದವ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT