ಮಾಲೂರು: ಕಸ ವಿಲೇವಾರಿ ಘಟಕಗಳ ಸಮರ್ಪಕ ನಿರ್ವಹಣೆ ಇಲ್ಲದೆ ಹಾಗೂ ಕಡಿಮೆ ಸಂಖ್ಯೆಯ ಪೌರ ಕಾರ್ಮಿಕರ ಕಾರಣದಿಂದ ಸಮರ್ಪಕವಾಗಿ ಸ್ವಚ್ಛತೆ ಕಾರ್ಯ ನಡೆಸಲು ಸಾಧ್ಯವಾಗದೆ ಪಟ್ಟಣದ ಎಲ್ಲೆಂದರಲ್ಲಿ ಕಸದ ರಾಶಿಗಳೇ ಗೋಚರಿಸುತ್ತಿವೆ. ಈ ಕಸವು ಕೊಳೆತು ನಗರ ತುಂಬೆಲ್ಲ ದುರ್ನಾತ ಬೀರುತ್ತಿದೆ.
ಬೆಂಗಳೂರಿಗೆ ಸಮೀಪ ಇರುವ ಮಾಲೂರು ಪಟ್ಟಣ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಅಲ್ಲದೆ, ಬೃಹತ್ ಕೈಗಾರಿಕೆಗಳು ತಲೆ ಎತ್ತಿವೆ. ಇದರಿಂದ ಇತರೆ ರಾಜ್ಯಗಳಿಂದ ಹತ್ತಾರು ಕಾರ್ಮಿಕರು ಇಲ್ಲಿ ನಲೆಕಂಡುಕೊಂಡಿದ್ದಾರೆ. 78 ಸಾವಿರ ಜನಸಂಖ್ಯೆ ಇರುವ ಪಟ್ಟಣದಲ್ಲಿ ಪುರಸಭೆ ಅಧಿಕಾರಿಗಳು ಹಾಗೂ ಜನಪತ್ರಿನಿಧಿಗಳ ನಿರ್ಲಕ್ಷ್ಯದಿಂದ ಕಸ ವಿಲೇವಾರಿ ಸಮರ್ಪಕವಾಗಿ ನಡೆಯದೆ, ನಾಗರಿಕರು ತೊಂದರೆಗೆ ಸಿಲುಕಿದ್ದಾರೆ.
ಪುರಸಭೆ ವತಿಯಿಂದ ತಾಲ್ಲೂಕಿನ ರಾಜೇನಹಳ್ಳಿ ಬಳಿ ₹6 ಕೋಟಿ ವೆಚ್ಚದಲ್ಲಿ ಕಸ ವಿಲೇವಾರಿ ಘಟಕ ನಿರ್ಮಿಸಲಾಗುತ್ತಿದೆ. ಆದರೆ, ಕಳೆದ 5–6 ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದಾಗಿ ನಗರದಲ್ಲಿ ಉತ್ಪತ್ತಿಯಾಗುವ ಕಸವನ್ನು ಪಟ್ಟಣದ ಸುತ್ತಮುತ್ತ ಇರುವ ಹಾಳು ಬಾವಿಗಳು ಮತ್ತು ಕಲ್ಲು ಕ್ವಾರಿಗಳ ಹಳ್ಳಗಳಲ್ಲಿ ತುಂಬಿಸಲಾಗುತ್ತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಪಟ್ಟಣದ 27 ವಾರ್ಡ್‌ಗಳಲ್ಲಿ ಕಸ ಸಂಗ್ರಹಣೆಗೆ ವಾಹನಗಳ ಸೌಲಭ್ಯವಿಲ್ಲ. ಹೀಗಾಗಿ ಪ್ರತಿ ವಾರ್ಡ್‌ಗಳಲ್ಲಿ ಸಂಗ್ರಹವಾಗುವ ಕಸವನ್ನು ಬಡಾವಣೆಗಳಲ್ಲೇ ಶೇಖರಿಸಲಾಗುತ್ತಿದೆ. 2–3 ದಿನಗಳ ನಂತರ ಟ್ರ್ಯಾಕ್ಟರ್ ಮೂಲಕ ಕಸವನ್ನು ಹಾಳುಬಾವಿಗಳು ಮತ್ತು ಕಲ್ಲು ಕ್ವಾರಿಗಳ ಹಳ್ಳಗಳಿಗೆ ಕಳುಹಿಸಲಾಗುತ್ತಿದೆ. ಹೀಗೆ ದಿನಕ್ಕೆ 27 ವಾರ್ಡ್‌ಗಳ ವ್ಯಾಪ್ತಿಯಿಂದ 20–25 ಟನ್‌ನಷ್ಟು ಕಸ ಸಂಗ್ರಹವಾಗುತ್ತಿದ್ದು, ಈ ಪೈಕಿ 14–15 ಟನ್‌ನಷ್ಟು ಹಸಿ ಕಸವಿರುತ್ತದೆ ಎಂದು ತಿಳಿದುಬಂದಿದೆ.
ಪಟ್ಟಣ ಕಸ ಹಾಕಲು ಗ್ರಾಮಸ್ಥರ ವಿರೋಧ: ಹಾರೋಹಳ್ಳಿ ಗ್ರಾಮದ ಬಳಿ ಎರಡು ಎಕರೆ ವಿಸ್ತೀರ್ಣದಲ್ಲಿರುವ ಕಸದ ಯಾರ್ಡ್ ಈಗಾಗಲೇ ತುಂಬಿದೆ. ಹೀಗಾಗಿ, ಪಟ್ಟಣದಲ್ಲಿ ಉತ್ಪತ್ತಿಯಾಗುವ ಕಸವನ್ನು ಯಾರ್ಡ್‌ಗೆ ತರಲು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಸ ಸಂಗ್ರಹಿಸಿ, ವಿಲೇವಾರಿ ಮಾಡಲು ತಾಲ್ಲೂಕಿನ ರಾಜೇನಹಳ್ಳಿ ಬಳಿ 10 ಎಕರೆ ಜಮೀನು ಮಂಜೂರು ಮಾಡಲಾಗಿದೆ.
ಕಸ ಸಂಗ್ರಹ ವಾಹನಗಳ ಕೊರತೆ: ಪಟ್ಟಣದಲ್ಲಿ ಕಸ ಸಂಗ್ರಹಿಸಲು ಕನಿಷ್ಠ 15 ರಿಂದ 18 ಆಟೊಗಳ ಅಗತ್ಯವಿದೆ. ಆದರೆ, ಪ್ರಸ್ತುತ ಪುರಸಭೆಯಲ್ಲಿ ಒಂಬತ್ತು ಒಟೊಗಳು ಮಾತ್ರ ಇವೆ. ಪ್ರತಿ ದಿನ ಪ್ರತಿ ವಾರ್ಡ್‌ನ ಪ್ರತಿ ಮನೆ ಬಳಿ ಕಸ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಸ್ವಚ್ಛತೆ ಕಾರ್ಯಕ್ಕಾಗಿ 87 ನೌಕರರು ಮತ್ತು ಚಾಲಕರು, ಸಹಾಯಕರು ಸೇರಿದಂತೆ 20 ಹೊರಗುತ್ತಿಗೆ ನೌಕರರಿದ್ದಾರೆ. 700 ಜನಸಂಖ್ಯೆಗೆ ಒಬ್ಬ ಪೌರ ಕಾರ್ಮಿಕರನ್ನು ನಿಯೋಜಿಸಬೇಕು. ಹೀಗಾಗಿ, ಪಟ್ಟಣದಲ್ಲಿ ಪೌರಕಾರ್ಮಿಕರ ಕೊರತೆಯೂ ಇದೆ. ಇದರಿಂದಾಗಿ ಕಸ ವಿಲೇವಾರಿ ಮಾಡಲು ತೊಂದರೆಯಾಗಿದೆ ಎನ್ನಲಾಗಿದೆ.
ಮನೆ ಮುಂಭಾಗದಲ್ಲಿ ಕಸ ವಿಲೇವಾರಿ ಮಾಡಲಾಗುತ್ತಿದೆ. ಪುರಸಬೆ ವತಿಯಿಂದ ಕಸ ತೆಗೆಯುತ್ತಿಲ್ಲ. ಕಸದ ರಾಶಿ ಕೊಳೆತು ದುರ್ವಾಸನೆ ಹಬ್ಬುತ್ತಿದೆ. ಮಕ್ಕಳನ್ನು ಆಟವಾಡಲು ಮನೆಯಿಂದ ಹೊರಗೆ ಕಳುಹಿಸಲು ಭಯಪಡುವಂತಾಗಿದೆ.
- ಮಂಜುಳ ಆದರ್ಶನಗರ ನಿವಾಸಿ
ವಾರಗಳು ಕಳೆದರೂ ಕಸ ಸಂಗ್ರಹಿಸಲು ಪುರಸಭೆಯ ಆಟೊ ಅಥವಾ ಸಿಬ್ಬಂದಿ ಬರುವುದಿಲ್ಲ. ಇದರಿಂದಾಗಿ ಕೆಲವರು ಕಸವನ್ನು ಚರಂಡಿಗಳ ಬಳಿ ಅಥವಾ ರಸ್ತೆ ಬದಿಯಲ್ಲಿ ಸುರಿಯುತ್ತಿದ್ದಾರೆ.
-ಸುಜಾತ ನಿವಾಸಿಸ ಗಾಂಧಿ ಸರ್ಕಲ್
ಪಟ್ಟಣದ ತುಂಬೆಲ್ಲಾ ಕಸವೇ
ಪಟ್ಟಣದಲ್ಲಿ ಕಸ ಸಂಗ್ರಹ ಕಾರ್ಯ ವಿಳಂಬವಾಗುತ್ತಿದೆ. ಪಟ್ಟಣದಲ್ಲಿ ಎಲ್ಲಿ ನೋಡಿದರೂ ಕಸ ಕಾಣುತ್ತಿದೆ. ಪಟ್ಟಣದಲ್ಲಿ ಸಂಗ್ರಹವಾಗುವ ಕಸ ವಿಲೇವಾರಿ ಮಾಡಲು ಘಟಕಗಳು ಇಲ್ಲದೆ ಇರುವ ಕಾರಣ ಹಾಳು ಬಾವಿ ಮತ್ತು ಕಲ್ಲು ಕ್ವಾರಿಯ ಹಳ್ಳಗಳಲ್ಲಿ ಸುರಿಯಲಾಗುತ್ತಿದೆ. ಪುರಸಭೆ ಅಧಿಕಾರಿಗಳು ಆದಷ್ಟು ಬೇಗ ಕಸ ವಿಲೇವಾರಿ ಘಟಕ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಈ ಮೂಲಕ ಪಟ್ಟಣದಲ್ಲಿ ಉದ್ಭವಿಸಿರುವ ಕಸ ಸಮಸ್ಯೆ ಬಗೆಹರಿಸಬೇಕು.
-ದಿನೇಶ್ ಗೌಡ ತಾಲ್ಲೂಕು ಅಧ್ಯಕ್ಷ ಜಯ ಕರ್ನಾಟಕ ಸಂಘಟನೆ
ಕಸ ವಿಲೇವಾರಿ ಘಟಕ ಶೀಘ್ರ ಆರಂಭ ರಾಜೇನಹಳ್ಳಿ ಬಳಿ 10 ಎಕರೆಯಲ್ಲಿ ಸುಮಾರು ₹6 ಕೋಟಿ ವೆಚ್ಚದಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣಕ್ಕಾಗಿ ಕಾಮಗಾರಿ ನಡೆಯುತ್ತಿದೆ. ಟೆಂಡರ್ ವಿಚಾರದಲ್ಲಿ ಕಾಮಗಾರಿ ಸ್ವಲ್ಪ ವಿಳಂಬವಾಗಿತ್ತು. ಈಗ ಬಹತೇಖ ಕಾಮಗಾರಿ ಮುಗಿದಿದ್ದು ಕೆಲವೇ ದಿನಗಳಲ್ಲಿ ಕಸ ವಿಲೇವಾರಿ ಘಟಕ ಕಾರ್ಯಾರಂಭವಾಗಲಿದೆ. ನಾಗರಿಕರು ತ್ಯಾಜ್ಯವನ್ನು ಎಲ್ಲಿಂದರಲ್ಲಿ ಬಿಸಾಡಬಾರದು. ನಿರ್ದಿಷ್ಟ ಸ್ಥಳದಲ್ಲಿ ಶೇಖರಣೆ ಮಾಡಬೇಕು. ನಂತರ ಪುರಸಭೆಯ ಗಾಡಿಗೆ ಹಾಕಬೇಕು. ಯಾರೂ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದು. ಪಟ್ಟಣದ ಪ್ರತಿ ವಾರ್ಡ್‌ನಲ್ಲಿ ಕಸ ವಿಲೇವಾರಿ ಬಗ್ಗೆ ಮಹಿಳೆಯರಿಗೆ ಅರಿವು ಮೂಡಿಸಲಾಗುವುದು.
-ಪ್ರದಿಪ್ ಕುಮಾರ್ ಪುರಸಭೆ ಮುಖ್ಯಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.