ಮಂಗಳವಾರ, ನವೆಂಬರ್ 19, 2019
29 °C

ಅಂಕಪಟ್ಟಿ ಸಮಸ್ಯೆ: ವಿದ್ಯಾರ್ಥಿನಿಯರ ಧರಣಿ

Published:
Updated:

ಕೋಲಾರ: ಕಾಲೇಜು ಆಡಳಿತ ವರ್ಗ ಅಂಕಪಟ್ಟಿ ನೀಡದೆ ತೊಂದರೆ ಮಾಡುತ್ತಿದೆ ಎಂದು ಆರೋಪಿಸಿ ನಗರದ ಸರ್ಕಾರಿ ಮಹಿಳಾ ಕಾಲೇಜು ವಿದ್ಯಾರ್ಥಿನಿಯರು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದಲ್ಲಿ ಕಾಲೇಜಿನಲ್ಲಿ ಶನಿವಾರ ಧರಣಿ ನಡೆಸಿದರು.

‘ಪರೀಕ್ಷೆ ಮುಗಿದು ನಾಲ್ಕೈದು ತಿಂಗಳಾದರೂ ಸಾಕಷ್ಟು ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಬಂದಿಲ್ಲ. ಇದರಿಂದ ಶೈಕ್ಷಣಿಕವಾಗಿ ಸಮಸ್ಯೆಯಾಗಿದೆ. ಶೀಘ್ರವೇ ಅಂಕಪಟ್ಟಿ ವಿತರಿಸುವಂತೆ ಆಡಳಿತ ವರ್ಗಕ್ಕೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಆಡಳಿತ ವರ್ಗವು ಪರೀಕ್ಷಾ ಶುಲ್ಕ ಪಾವತಿಯ ಡಿಮಾಂಡ್‌ ಡ್ರಾಫ್ಟ್‌ ಪ್ರತಿಯನ್ನು ಕಳೆದು ಹಾಕಿದೆ. ಹೀಗಾಗಿ ಈಗ ಮತ್ತೊಮ್ಮೆ ಪರೀಕ್ಷಾ ಶುಲ್ಕ ಪಾವತಿಸುವಂತೆ ಹೇಳುತ್ತಿದೆ. ಮತ್ತೊಂದೆಡೆ ಕೆಲ ವಿದ್ಯಾರ್ಥಿಗಳ ಕೋರ್ಸ್‌ ಬದಲಾವಣೆ ಮಾಡಿ ತೊಂದರೆ ನೀಡುತ್ತಿದೆ’ ಎಂದು ಆರೋಪಿಸಿದರು.

‘ಕಾಲೇಜಿನ ವಿದ್ಯಾರ್ಥಿನಿಯರು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಸಮಸ್ಯೆ ಪರಿಹರಿಸದ ಆಡಳಿತ ವರ್ಗವು ವಿದ್ಯಾರ್ಥಿಗಳನ್ನು ನಿಂದಿಸಿ ಉದ್ಧಟತನ ತೋರುತ್ತಿದೆ. ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವ ಆಡಳಿತ ವರ್ಗಕ್ಕೆ ಸ್ವಲ್ಪವೂ ಜವಾಬ್ದಾರಿ ಇಲ್ಲ’ ಎಂದು ರೈತ ಸಂಘ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಳಿನಿ ಕಿಡಿಕಾರಿದರು.

‘ಕಾಲೇಜು ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಸಿಬ್ಬಂದಿಯ ಅಚಾತುರ್ಯದಿಂದ ವಿದ್ಯಾರ್ಥಿನಿಯರು ತೊಂದರೆ ಅನುಭವಿಸುವಂತಾಗಿದೆ. ಮಾನಸಿಕವಾಗಿ ಬೇಸತ್ತಿರುವ ವಿದ್ಯಾರ್ಥಿನಿಯರು ಓದಿನತ್ತ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಶೈಕ್ಷಣಿಕವಾಗಿ ವಿದ್ಯಾರ್ಥಿನಿಯರಿಗೆ ಮುಂದೆ ಯಾವುದೇ ಸಮಸ್ಯೆಯಾದರೆ ಕಾಲೇಜಿನ ಆಡಳಿತ ವರ್ಗವೇ ಹೊಣೆ’ ಎಂದು ಹೇಳಿದರು.

ಸಿಬ್ಬಂದಿಗೆ ತರಾಟೆ: ಧರಣಿನಿರತ ವಿದ್ಯಾರ್ಥಿನಿಯರನ್ನು ಭೇಟಿಯಾಗಿ ಸಮಸ್ಯೆ ಆಲಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜೇಂದ್ರ ಅವರು ಆಡಳಿತ ವಿಭಾಗದ ಸಿಬ್ಬಂದಿ ಸುರೇಶ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

‘ವಿದ್ಯಾರ್ಥಿಗಳ ಜತೆ ಸೌಜನ್ಯಯುತವಾಗಿ ನಡೆದುಕೊಳ್ಳಿ. ವಿದ್ಯಾರ್ಥಿನಿಯರು ನೀಡಿರುವ ಪರೀಕ್ಷಾ ಶುಲ್ಕ ಪಾವತಿ ಡಿ.ಡಿಗಳನ್ನು ಕಳೆದು ಹೋಗಿದ್ದರು ಅದರ ನಷ್ಟ ನೀವೇ ಭರಿಸಬೇಕು. ವಿಶ್ವವಿದ್ಯಾಲಯದ ಅದಾಲತ್‌ಗೆ ಹಾಜರಾಗಿ ಸಮಸ್ಯೆ ಬಗೆಹರಿಸಿಕೊಂಡು ಬರುವುದು ನಿಮ್ಮ ಜವಾಬ್ದಾರಿ’ ಎಂದು ತಾಕೀತು ಮಾಡಿದರು.

‘ಸುಮಾರು ೩೦ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಬಾರದೆ ಸಮಸ್ಯೆಯಾಗಿದೆ. ಈ ಸಂಬಂಧ ಕಾಲೇಜು ಸಿಬ್ಬಂದಿಯು ಈಗಾಗಲೇ 2 ಬಾರಿ ವಿ.ವಿಗೆ ಹೋಗಿ ಬಂದಿದ್ದಾರೆ. ಅಲ್ಲಿನ ಸಿಬ್ಬಂದಿ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ವಿ.ವಿ ಕುಲ ಸಚಿವರನ್ನು ಭೇಟಿಯಾಗಿ ಅಂಕಪಟ್ಟಿ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸುತ್ತೇವೆ’ ಎಂದು ಭರವಸೆ ನೀಡಿದರು.

ಎಬಿವಿಪಿ ಸದಸ್ಯರಾದ ನವೀನ್, ಪ್ರಸಾದ್, ವಿದ್ಯಾರ್ಥಿನಿಯರಾದ ಭವಾನಿ, ಚೈತ್ರಾ, ಭವ್ಯ, ಸಾನಿಯಾ, ಸುಪ್ರಿಯಾ, ಲಾವಣ್ಯ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)