ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ತಿ ಆದರ್ಶಮಯ ಬದುಕು ದಾರಿದೀಪ

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ಗೌರವ ಕಾರ್ಯದರ್ಶಿ ರಾಜಕುಮಾರ್ ಅಭಿಪ್ರಾಯ
Last Updated 24 ಫೆಬ್ರುವರಿ 2021, 13:51 IST
ಅಕ್ಷರ ಗಾತ್ರ

ಕೋಲಾರ: ‘ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಕನ್ನಡದ ಆಸ್ತಿ ಮಾತ್ರವಲ್ಲ. ಕನ್ನಡದ ಕಟ್ಟುವ ದೀಕ್ಷೆ ಹೊಂದಿದ್ದರು. ಅವರ ಆದರ್ಶಮಯ ಬದುಕು ದಾರಿ ದೀಪವಾಗಿದೆ’ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ಗೌರವ ಕಾರ್ಯದರ್ಶಿ ಕೆ.ರಾಜಕುಮಾರ್ ಅಭಿಪ್ರಾಯಪಟ್ಟರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ದತ್ತಿ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮಾಸ್ತಿಯವರಲ್ಲಿ ಎಲ್ಲರನ್ನೂ ಬೆಳೆಸುವ ದೊಡ್ಡತನವಿತ್ತು. ಅವರ ಕಥೆಗಳು ಕನ್ನಡ ಚಿತ್ರನಟ ರಾಜ್‌ಕುಮಾರ್‌ ನಟಿಸುತ್ತಿದ್ದ ಮಾದರಿಯ ಆದರ್ಶ ಚಿತ್ರಗಳಂತೆ ಇತ್ತು. ಮಾಸ್ತಿಯವರ ಕಥೆಗಳಲ್ಲಿ ಸಾಹಿತ್ಯದೊಂದಿಗೆ ಪ್ರಕೃತಿಯ ಅವಿನಾಭಾವ ಬಾಂಧವ್ಯ ಹೊಂದಿರುವುದನ್ನು ಕಾಣಬಹುದು. ಅವರು ಶಾಶ್ವತವಾಗಿ ಬೆಳಗುತ್ತಿರುವ ಕನ್ನಡದ ನಂದಾದೀಪ’ ಎಂದು ಸ್ಮರಿಸಿದರು.

‘ಬಿಎಂಶ್ರೀ 1935ರಲ್ಲಿ ಗಮಕ ಕಲೆ ಬೆಳೆಸಲು ಪರಿಷತ್ತಿನಲ್ಲಿ ₹ 3 ಸಾವಿರ ದತ್ತಿನಿಧಿ ಅರ್ಪಿಸಿದರು. ನಂತರ ಜಿಲ್ಲೆಯ ಎಚ್.ಹನುಮಂತರಾವ್ ಎಂಬುವರು ₹ 100 ದತ್ತಿಗೆ ನೀಡಿದರು. ಜಿಲ್ಲೆಯವರೇ ಆದ ಮಾಸ್ತಿ ಅವರು ದತ್ತಿನಿಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮಾಸ್ತಿಯವರು ಕನ್ನಡದ ಆಸ್ತಿಯೆಂದು ಧಾರವಾಡದ ಎಸ್.ಎಸ್.ಮಾಳವಾಡ ಅವರು ಸಮೀಕರಿಸಿದ್ದು ಶಾಶ್ವತವಾಗಿ ಉಳಿದಿದೆ’ ಎಂದರು.

‘ಕನ್ನಡ ಸಂಸ್ಕೃತಿ ಬೆಳವಣಿಗೆ ಜತೆಗೆ ಜನರ ಬದುಕು ಹಸನಾಗಿಸುವಲ್ಲಿ ದತ್ತಿಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ದತ್ತಿ ಕಾರ್ಯಕ್ರಮಗಳು ಸಮಾಜಕ್ಕೆ ಆದರ್ಶಪ್ರಾಯವಾಗಿವೆ. ಜಾಗತಿಕವಾಗಿ ಕನ್ನಡ ಸಾಹಿತ್ಯ ಪರಿಷತ್‌ ಅತಿ ಹೆಚ್ಚು ದತ್ತಿಗಳನ್ನು ಹೊಂದಿರುವ ಸಂಸ್ಥೆಯಾಗಿದೆ. ಪರಿಷತ್ತಿನ ಮೂಲಕ ನಿರಂತರ ಕಾರ್ಯಕ್ರಮ ರೂಪಿಸುತ್ತಿರುವುದು ಕನ್ನಡದ ಬೆಳವಣಿಗೆಗೆ ಪೂರಕವಾಗಿದೆ’ ಎಂದು ಹೇಳಿದರು.

‘ಎದೆಗೆ ಬಿದ್ದ ಕನ್ನಡದ ಅಕ್ಷರಗಳು ಚಿಗುರಲಿ, ಬೆಳಗಲಿ, ಅಮೃತವಾಹಿನಿಯಾಗಲಿ. ಜಿಲ್ಲೆಯಲ್ಲಿ ದತ್ತಿನಿಧಿಗಳ ಸಂಗ್ರಹಿಸುವ ಸಾರಥ್ಯ ವಹಿಸಿರುವ ನಾಗಾನಂದ ಕೆಂಪರಾಜ್ ತಮ್ಮ ಪೋಷಕರು ಮತ್ತು ಅತ್ತೆ ಮಾವನ ಹೆಸರಿನಲ್ಲಿ ₹ 2 ಲಕ್ಷ ದತ್ತಿನಿಧಿಯಾಗಿ ನೀಡಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜ್ಞಾನ ವಿಕಾಸ: ‘ಸಾಹಿತ್ಯದ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಜ್ಞಾನ ವಿಕಾಸಕ್ಕೆ ಪೂರಕ. ಉಪನ್ಯಾಸ, ಚರ್ಚೆ, ಸಂವಾದಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗಲಿವೆ. ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುತ್ತವೆ’ ಎಂದು ಬೆಂಗಳೂರು ಉತ್ತರ ವಿ.ವಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಡಿ.ಕುಮದಾ ಹೇಳಿದರು.

‘ವಿದ್ಯಾರ್ಥಿಗಳು ಭವಿಷ್ಯದಲ್ಲಿ ಜವಾಬ್ದಾರಿಯ ಕನಸು ಕಾಣಬೇಕು. ನಾಡು, ನುಡಿ, ಸಂಸ್ಕೃತಿಯ ಸಮಗ್ರ ಅರಿವು ಅತ್ಯಗತ್ಯ. ದತ್ತಿ ಕಾರ್ಯಕ್ರಮಗಳು ಕನ್ನಡದ ಬೆಳವಣಿಗೆಗೆ ಪ್ರೇರಣೆಯಾಗಲಿವೆ. ಕನ್ನಡ ವ್ಯಾಕರಣ, ಹಳೆಗನ್ನಡದ ಅಗಾಧ ಜ್ಞಾನ ಸಂಪತ್ತು ಪಡೆಯಲು ವಿದ್ಯಾರ್ಥಿಗಳು ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್‌ ಕಿವಿಮಾತು ಹೇಳಿದರು.

ಸಿರಿಗನ್ನಡ ವೇದಿಕೆ ಜಿಲ್ಲಾ ಅಧ್ಯಕ್ಷ ಕೆ.ಎಂ.ಜೆ.ಮೌನಿ ಅವರಿಗೆ ಕನ್ನಡಾನಂದ ಕಸಾಪ ದತ್ತಿ ಪ್ರಶಸ್ತಿ ಹಾಗೂ ಮೈಸೂರು ಶಾಸ್ತ್ರೀಯ ಕನ್ನಡ ಉನ್ನತ ಅಧ್ಯಯನ ಕೇಂದ್ರದ ವಿದ್ವಾಂಸ ಕುಪ್ಪಳ್ಳಿ ಎಂ.ಬೈರಪ್ಪ ಅವರಿಗೆ ಯುವ ಸಾಹಿತ್ಯ ಕಣ್ಮಣಿ ಕಸಾಪ ದತ್ತಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಬೆಂಗಳೂರು ಉತ್ತರ ವಿ.ವಿ ಸಂಯೋಜನಾಧಿಕಾರಿ ಸಿ.ಎಂ.ನಾಗವೇಣಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕೋಶಾಧ್ಯಕ್ಷ ರತ್ನಪ್ಪ ಮೇಲಾಗಾಣಿ, ಪಧಾಧಿಕಾರಿಗಳಾದ ಅ.ಕೃ.ಸೋಮಶೇಖರ್, ರಾಮಚಂದ್ರಪ್ಪ, ಶೇಖರಪ್ಪ, ಎಸ್.ಸಿ.ವೆಂಕಟಕೃಷ್ಣಪ್ಪ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT