ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ಖರೀದಿ ದರ ಏರಿಕೆಗೆ ಸಭೆ

ಸಮಾರಂಭದಲ್ಲಿ ಕೋಚಿಮುಲ್‌ ಅಧ್ಯಕ್ಷ ನಂಜೇಗೌಡ ಭರವಸೆ
Last Updated 17 ಜನವರಿ 2021, 14:34 IST
ಅಕ್ಷರ ಗಾತ್ರ

ಕೋಲಾರ: ‘ಒಕ್ಕೂಟದ ಸಭೆ ಕರೆದು ನಾಲ್ಕೈದು ದಿನದಲ್ಲಿ ಹಾಲು ಖರೀದಿ ದರ ಏರಿಕೆಗೆ ಕ್ರಮ ಕೈಗೊಳ್ಳುತ್ತೇವೆ’ ಶಾಸಕ ಹಾಗೂ ಕೋಚಿಮುಲ್‌ ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ಭರವಸೆ ನೀಡಿದರು.

ತಾಲ್ಲೂಕಿನ ಚೆಲುವನಹಳ್ಳಿಯಲ್ಲಿ ಭಾನುವಾರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಮತ್ತು ಬಲ್ಕ್ ಮಿಲ್ಕ್ ಕೂಲರ್ (ಬಿಎಂಸಿ) ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ‘ಬಿಎಂಸಿಗಳ ಸ್ಥಾಪನೆಯಿಂದ ಹಾಲಿನ ಗುಣಮಟ್ಟ ಶೇ 45ರಿಂದ 95ರಷ್ಟು ಹೆಚ್ಚಳವಾಗಿದೆ. ಅವಳಿ ಜಿಲ್ಲೆಯಲ್ಲಿ ಕ್ಯಾನ್‌ಗಳಲ್ಲಿ ಹಾಲು ಸಂಗ್ರಹಿಸುವುದಕ್ಕೆ ಕಡಿವಾಣ ಹಾಕಿ ಬಿಎಂಸಿಗಳ ಮೂಲಕ ಸಂಗ್ರಹಣೆ ಮಾಡಲಾಗುತ್ತಿದೆ’ ಎಂದರು.

‘ಒಕ್ಕೂಟದಲ್ಲಿ ದಿನಕ್ಕೆ 10 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದೆ. ಹಾಲು ಉತ್ಪಾದನೆಯಲ್ಲಿ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ರಾಜ್ಯದಲ್ಲಿ ಬೆಂಗಳೂರು ಮತ್ತು ಹಾಸನದ ನಂತರದ ಸ್ಥಾನ ಪಡೆದುಕೊಂಡಿದೆ. ಚೆಲುವನಹಳ್ಳಿ ಸಂಘದಲ್ಲಿ ದಿನಕ್ಕೆ 850 ಲೀಟರ್‌ ಹಾಲು ಸಂಗ್ರಹಿಸುತ್ತಿದ್ದು, ಅತ್ಯುತ್ತಮ ಡೇರಿಗಳಲ್ಲಿ ಇದು ಸಹ ಒಂದಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಒಕ್ಕೂಟದಿಂದ ಬಿಎಂಸಿಗೆ ₹ 17 ಲಕ್ಷ, ಕಟ್ಟಡಕ್ಕೆ ₹ 3 ಲಕ್ಷ ನೆರವು ನೀಡಲಾಗುತ್ತಿದೆ. ಹಾಲು ಉತ್ಪಾದಕರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಆರ್ಥಿಕ ನೆರವು ಕೊಡುತ್ತಿದ್ದೇವೆ. ಬೆಂಗಳೂರಿನಲ್ಲಿ ಉಚಿತ ಹಾಸ್ಟೆಲ್ ಸೌಲಭ್ಯ ಒದಗಿಸಲಾಗಿದೆ. ರಾಸು ಮೃತಪಟ್ಟರೆ ₹ 70 ಸಾವಿರ ವಿಮೆ ಪರಿಹಾರ ನೀಡಲಾಗುತ್ತಿದೆ’ ಎಂದು ವಿವರಿಸಿದರು.

‘ಒಕ್ಕೂಟಕ್ಕೆ ಅಗತ್ಯವಿರುವ ನೀರಿಗಾಗಿ ತಿಂಗಳಿಗೆ ₹ 15 ಲಕ್ಷ ಖರ್ಚಾಗುತ್ತಿತ್ತು. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ.ರವಿ ಅವರು ಮಂಜೂರು ಮಾಡಿದ್ದ 52 ಎಕರೆ ಜಮೀನು ನಿರ್ದೇಶಕ ಡಿ.ವಿ.ಹರೀಶ್‌ರ ಪ್ರಯತ್ನದಿಂದ ಒಕ್ಕೂಟಕ್ಕೆ ಸಿಕ್ಕಿದೆ. ಆ ಜಮೀನಿನಲ್ಲಿ 10 ಕೊಳವೆ ಬಾವಿ ಕೊರೆಸಿ ಪೈಪ್‌ಲೈನ್‌ ಮೂಲಕ ಒಕ್ಕೂಟಕ್ಕೆ ನೀರು ಪಡೆಯಲು ಕ್ರಮ ವಹಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲೆಗೆ ಜೀವಾಳ: ‘ಕೆ.ಸಿ ವ್ಯಾಲಿ ಯೋಜನೆ ನೀರಿನಿಂದ ಜಿಲ್ಲೆ ಹಸಿರಾಗುತ್ತಿದೆ. ಅಂತರ್ಜಲ ಮಟ್ಟ ವೃದ್ಧಿಯಾಗಿ ಕೊಳವೆ ಬಾವಿಗಳಲ್ಲಿ ನೀರು ಹೇರಳವಾಗಿ ಸಿಗುವಂತಾಗಿದೆ. ಕೆ.ಸಿ ವ್ಯಾಲಿ ಯೋಜನೆಯ ಆರಂಭದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಬಳಿಕ ಎಲ್ಲವೂ ಸರಿ ಹೋಯಿತು. ಕೆ.ಸಿ ವ್ಯಾಲಿ ಯೋಜನೆಯು ಜಿಲ್ಲೆಗೆ ಜೀವಾಳ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು.

‘ತಾಲ್ಲೂಕಿನಲ್ಲಿ ಶೇ 100ರಷ್ಟು ಬಿಎಂಸಿ ಸ್ಥಾಪಿಸುವ ಮೂಲಕ ಕ್ಯಾನ್‌ ಮುಕ್ತ ತಾಲ್ಲೂಕಾಗಿ ಮಾರ್ಪಡಿಸಿದ ತೃಪ್ತಿಯಿದೆ. 240 ಹಾಲು ಉತ್ಪಾದಕರ ಸಹಕಾರ ಸಂಘಗಳು (ಎಂಪಿಸಿಎಸ್‌), 22 ಮಹಿಳಾ ಸಂಘಗಳಿರುವ ಕೋಲಾರ ತಾಲ್ಲೂಕು ದೊಡ್ಡದು. ಪ್ರತಿ ಹಳ್ಳಿಗೂ ಡೇರಿ ನೀಡುವ ಗುರಿಯಿದೆ. 25 ಮಹಿಳಾ ಸಂಘಗಳನ್ನು ಸ್ಥಾಪಿಸುತ್ತೇವೆ. ಹಾಲಿನ ಗುಣಮಟ್ಟಕ್ಕೆ ಲೋಪವಾದಂತೆ ಎಚ್ಚರ ವಹಿಸಬೇಕು’ ಎಂದು ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ಕಿವಿಮಾತು ಹೇಳಿದರು.

ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ, ಚೆಲುವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಗೋವಿಂದಗೌಡ, ಕಾರ್ಯದರ್ಶಿ ತಿಮ್ಮೇಗೌಡ, ಗ್ರಾಮಾಂತರ ಠಾಣೆ ಎಸ್‍ಐ ಕಿರಣ್, ಗ್ರಾ.ಪಂ ಸದಸ್ಯರಾದ ಎ.ಎಸ್.ನಂಜುಂಡಗೌಡ, ರಾಜಣ್ಣ, ಪವಿತ್ರಾ, ಕೋಚಿಮುಲ್‌ ಶಿಬಿರ ಉಪವ್ಯವಸ್ಥಾಪಕ ಡಾ.ಎ.ಸಿ.ಶ್ರೀನಿವಾಸಗೌಡ, ಸಹಾಯಕ ವ್ಯವಸ್ಥಾಪಕ ಮೋಹನ್‌ಬಾಬು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT