ಮಂಗಳವಾರ, ನವೆಂಬರ್ 12, 2019
28 °C

ಪೊಲೀಸರಿಗೆ ಮಾನಸಿಕ ಆರೋಗ್ಯ ಮುಖ್ಯ: ಜಾಹ್ನವಿ ಅಭಿಪ್ರಾಯ

Published:
Updated:
Prajavani

ಕೋಲಾರ: ‘ಸದಾ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಪೊಲೀಸ್‌ ಸಿಬ್ಬಂದಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಬಹಳ ಮುಖ್ಯ’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಾಹ್ನವಿ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಘಟಕದ ಸಹಯೋಗದಲ್ಲಿ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಪೊಲೀಸರ ಕರ್ತವ್ಯಕ್ಕೆ ನಿಗದಿತ ಸಮಯ ಇರುವುದಿಲ್ಲ. ಕೆಲ ಸಂದರ್ಭಗಳಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೂ ಕಾರ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಹೀಗಾಗಿ ಸಿಬ್ಬಂದಿಗೆ ಕಾರ್ಯ ಒತ್ತಡದ ನಡುವೆ ಆರೋಗ್ಯದ ಗಮನ ಹರಿಸುವುದು ಕಷ್ಟ. ಸಿಬ್ಬಂದಿಯು ಧೈರ್ಯದಿಂದ ಮಾನಸಿಕ ಒತ್ತಡ ಎದುರಿಸಬೇಕು. ದೈಹಿಕ ಆರೋಗ್ಯಕ್ಕಾಗಿ ಪ್ರತಿನಿತ್ಯ ವ್ಯಾಯಾಮ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

‘ಸಿಬ್ಬಂದಿ ಯಾವುದೇ ಕೆಲಸವನ್ನು ಇಷ್ಟಪಟ್ಟು ಮಾಡಬೇಕು. ಆಗ ಮಾತ್ರ ಸುಲಭವಾಗಿ ಒತ್ತಡ ನಿವಾರಿಸಬಹುದು. ಎಷ್ಟೇ ಕಾರ್ಯ ಒತ್ತಡವಿದ್ದರೂ ಸೂಕ್ಷ್ಮತೆ, ತಾಳ್ಮೆ ಕಳೆದುಕೊಳ್ಳಬಾರದು. ಠಾಣೆಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು’ ಎಂದು ಸಲಹೆ ನೀಡಿದರು.

‘ಸಿಬ್ಬಂದಿಯು ಆರೋಗ್ಯವೇ ಭಾಗ್ಯ ಎಂಬುದನ್ನು ಅರಿಯಬೇಕು. ಕರ್ತವ್ಯದ ನಡುವೆ ಬಿಡುವಿನ ವೇಳೆಯಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆರೋಗ್ಯ ಹಾಗೂ ಮಾನಸಿಕ ಸಮತೋಲನ ಕಾಪಾಡಿಕೊಳ್ಳಬೇಕು. ಕಾರ್ಯ ಒತ್ತಡದ ನಡುವೆ ಕ್ರೀಡೆಯು ಮನಸ್ಸಿಗೆ ಉಲ್ಲಾಸ ನೀಡುತ್ತದೆ’ ಎಂದರು.

ಹೆಚ್ಚು ಅಪಾಯಕಾರಿ: ‘ದೈಹಿಕ ಕಾಯಿಲೆಗಳಲ್ಲಿ ವಿವಿಧ ಬಗೆ ಇದ್ದಂತೆ ಮಾನಸಿಕ ಕಾಯಿಲೆಗಳಲ್ಲೂ ನಾನಾ ಬಗೆಗಳಿವೆ. ಶಾರೀರಿಕ ಕಾಯಿಲೆಗಿಂತ ಮಾನಸಿಕ ಕಾಯಿಲೆ ಹೆಚ್ಚು ಅಪಾಯಕಾರಿ’ ಎಂದು ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ನಾರಾಯಣಸ್ವಾಮಿ ತಿಳಿಸಿದರು.

‘ಜಾಗತಿಕವಾಗಿ ಪ್ರತಿ ವರ್ಷ 8 ಲಕ್ಷ ಮಂದಿ ಹಾಗೂ ರಾಜ್ಯದಲ್ಲಿ 2 ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ 161 ಆತ್ಮಹತ್ಯೆ ಪ್ರಕರಣ ವರದಿಯಾಗಿವೆ. ಪ್ರತಿ 4 ಸೆಕೆಂಡ್‌ಗೆ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಮಾನಸಿಕ ಒತ್ತಡ ಪ್ರಮುಖ ಕಾರಣ’ ಎಂದು ವಿವರಿಸಿದರು.

‘ಮಾನಸಿಕ ಒತ್ತಡ ಕೇವಲ ಬಡವರಿಗೆ ಅಥವಾ ಶ್ರೀಮಂತರಿಗೆ ಇರುವುದಿಲ್ಲ. ಎಲ್ಲಾ ವರ್ಗದ ಹಾಗೂ ಎಲ್ಲಾ ವಯಸ್ಸಿನವರಿಗೂ ಮಾನಸಿಕ ಒತ್ತಡವಿದೆ. ಕಷ್ಟ ಬಂದಾಗ ಖಿನ್ನತೆಗೆ ಒಳಗಾಗುತ್ತಾರೆ. ಒತ್ತಡಗಳಿಂದ ಮನುಷ್ಯ ದುಶ್ಚಟಕ್ಕೆ ಬಲಿಯಾಗುವುದರ ಜತೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಒತ್ತಡಕ್ಕೆ ಹೆದರದೆ ಧೈರ್ಯದಿಂದ ಮೆಟ್ಟಿನಿಂತು ಕೆಲಸ ಮಾಡಬೇಕು’ ಹೇಳಿದರು.

ಮನೋವೈದ್ಯರಾದ ಡಾ.ಪಾವನಾ, ಶ್ರೀನಾಥ್, ಆರೋಗ್ಯ ಇಲಾಖೆ ಪ್ರಯೋಗಾಲಯ ತಂತ್ರಜ್ಞ ರಮಣಪ್ಪ ಹಾಜರಿದ್ದರು.

ಪ್ರತಿಕ್ರಿಯಿಸಿ (+)