ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ನಿದ್ರಾವಸ್ಥೆ: ಕ್ಷೇತ್ರ ಸರ್ವ ನಾಶ

ಶ್ರೀನಿವಾಸಗೌಡ ವಿರುದ್ಧ ಮಾಜಿ ಸಚಿವ ವರ್ತೂರು ಪ್ರಕಾಶ್‌ ವಾಗ್ದಾಳಿ
Last Updated 17 ಏಪ್ರಿಲ್ 2021, 14:46 IST
ಅಕ್ಷರ ಗಾತ್ರ

ಕೋಲಾರ: ‘ಕ್ಷೇತ್ರದ ಶಾಸಕ ಶ್ರೀನಿವಾಸಗೌಡರು 3 ವರ್ಷದಿಂದ ನಿದ್ರಾವಸ್ಥೆಯಲ್ಲಿದ್ದು, ಅಭಿವೃದ್ಧಿ ಕುಂಠಿತಗೊಂಡಿದೆ. ಕೋಲಾರ ಕ್ಷೇತ್ರ ಸರ್ವ ನಾಶವಾಗಿದೆ’ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್‌ ವಾಗ್ದಾಳಿ ನಡೆಸಿದರು.

ತಾಲ್ಲೂಕಿನ ಕಸಬಾ ಹೋಬಳಿಯ ಈಕಂಬಳ್ಳಿ ಗ್ರಾಮದಲ್ಲಿ ಶನಿವಾರ ಹೈಮಾಸ್ಕ್‌ ವಿದ್ಯುತ್‌ ದೀಪ ಉದ್ಘಾಟಿಸಿ ಮಾತನಾಡಿ, ‘ನಾನು ಶಾಸಕನಾಗಿದ್ದ ಅವಧಿಯಲ್ಲಿ ಮಂಜೂರಾಗಿದ್ದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶ್ರೀನಿವಾಸಗೌಡರು ತಮ್ಮ ಲೇಬಲ್ ಹಾಕಿಕೊಳ್ಳುತ್ತಿದ್ದಾರೆ. ಕ್ಷೇತ್ರಕ್ಕೆ ಅವರ ಕೊಡುಗೆ ಶೂನ್ಯ’ ಎಂದು ವ್ಯಂಗ್ಯವಾಡಿದರು.

‘ನಾನು ಶಾಸಕನಾಗಿದ್ದಾಗ ಬಿಡುಗಡೆ ಮಾಡಿಸಿದ್ದ ಅನುದಾನದಲ್ಲೇ ರಸ್ತೆ ಅಭಿವೃದ್ಧಿ, ಯುಜಿಡಿ ಕಾಮಗಾರಿ ನಡೆಯುತ್ತಿವೆ. ಶ್ರೀನಿವಾಸಗೌಡರು ಕನಿಷ್ಠ ₹ 10 ಲಕ್ಷ ಅನುದಾನ ತಂದಿದ್ದರೆ ಸಾಬೀತುಪಡಿಸಲಿ. ಗಂಗಾ ಕಲ್ಯಾಣ ಯೋಜನೆಯಡಿ 3 ವರ್ಷದಿಂದ ಫಲಾನುಭವಿಗಳಿಗೆ ಪಂಪ್‌ ಮೋಟರ್‌ ವಿತರಣೆಯಾಗಿಲ್ಲ. ಆಗ ನನ್ನನ್ನು ಟೀಕಿಸುತ್ತಿದ್ದ ಶ್ರೀನಿವಾಸಗೌಡರು ಪಂಪ್‌ ಮೋಟರ್‌ ವಿತರಣೆ ಮಾಡಲಿ’ ಎಂದು ಸವಾಲು ಹಾಕಿದರು.

‘ಶ್ರೀನಿವಾಸಗೌಡರ ನಡೆಯಿಂದ ಬೇಸತ್ತಿರುವ ಅವರ ಸಾಕಷ್ಟು ಬೆಂಬಲಿಗರು ಜೆಡಿಎಸ್ ತೊರೆದು ನಮ್ಮೊಂದಿಗೆ ಸೇರ್ಪಡೆಯಾಗಲು ನಿರ್ಧರಿಸಿದ್ದಾರೆ. ಕ್ಷೇತ್ರದಲ್ಲಿ ವರ್ತೂರು ಹವಾ ಜೋರಾಗಿದ್ದು, ಪಕ್ಷಾಂತರ ಪರ್ವ ಆರಂಭವಾಗಿದೆ. ಕ್ಷೇತ್ರದ ಎಲ್ಲಾ ಜಾತಿ ಜನಾಂಗಗಳು ನಮ್ಮೊಂದಿಗೆ ಇವೆ. ಜನರು ನನ್ನನ್ನು ಮತ್ತೆ ಶಾಸಕನಾಗಿ ಮಾಡಲು ಕಾಯುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ನನ್ನ ಗೆಲುವು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಹಿಂದುಳಿದ ವರ್ಗದವರು, ಪರಿಶಿಷ್ಟರನ್ನು ತುಳಿಯುತ್ತಾ ಬಂದಿರುವ ಶ್ರೀನಿವಾಸಗೌಡರು ಜನಪರವಾಗಿ ಕೆಲಸ ಮಾಡಲಿ. ಅವರು ಹಣ ಹಾಗೂ ತೋಳ್ಬಲದಿಂದ ಮತದಾರರಿಗೆ ಮಂಕುಬೂದಿ ಎರಚಲು ಹೊರಟಿದ್ದಾರೆ. ಆದರೆ, ಕ್ಷೇತ್ರದಲ್ಲಿ ಇನ್ನು ಮುಂದೆ ಅವರ ಆಟ ನಡೆಯಲ್ಲ. ಗ್ರಾ.ಪಂ ಚುನಾವಣೆಯಲ್ಲಿ ನನ್ನ ಶಕ್ತಿ ತೋರಿಸಿದ್ದೇನೆ. ಮುಂಬರುವ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ರಾಜಕೀಯ ಎದುರಾಳಿಗಳಿಗೆ ತಕ್ಕ ಪಾಠ ಕಲಿಸುತ್ತೇನೆ’ ಎಂದು ಗುಡುಗಿದರು.

ದೊಡ್ಡಹಸಾಳ ಗ್ರಾ.ಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ನಾರಾಯಣಸ್ವಾಮಿ, ತಾ.ಪಂ ಸದಸ್ಯೆ ಸವಿತಾ, ವರ್ತೂರು ಪ್ರಕಾಶ್‌್ ಬೆಂಬಲಿಗ ಬೆಗ್ಲಿ ಪ್ರಕಾಶ್, ಗ್ರಾಮಸ್ಥರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT