ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಕೋಮುಲ್‌ ಚುನಾವಣೆ: ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಬಣಗಳ ನಡುವೆಯೇ ಪೈಪೋಟಿ

Published : 23 ಜೂನ್ 2025, 7:09 IST
Last Updated : 23 ಜೂನ್ 2025, 7:09 IST
ಫಾಲೋ ಮಾಡಿ
0
ಕೋಮುಲ್‌ ಚುನಾವಣೆ: ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಬಣಗಳ ನಡುವೆಯೇ ಪೈಪೋಟಿ
ಕೋಮುಲ್ ಆಡಳಿತ ಮಂಡಳಿ ಕಚೇರಿ

ಕೋಲಾರ: ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಮುಲ್‌) ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ಕೇವಲ ಎರಡು ದಿನ ಬಾಕಿ ಇದ್ದು, ‌ಎರಡು ಮಹಿಳಾ ಕ್ಷೇತ್ರ ಹಾಗೂ ಕೆಜಿಎಫ್‌ ಕ್ಷೇತ್ರದಲ್ಲಿನ ಅಭ್ಯರ್ಥಿಗಳ ಪೈಪೋಟಿ ವಿಚಾರ ಕಾಂಗ್ರೆಸ್‌ ಪಕ್ಷದೊಳಗಡೆಯೇ ಕಿಡಿ ಹೊತ್ತಿಸಿದೆ.

ADVERTISEMENT
ADVERTISEMENT

ಕೋಲಾರ ಉತ್ತರ ಮಹಿಳಾ ಮೀಸಲು ಕ್ಷೇತ್ರ, ಕೋಲಾರ ದಕ್ಷಿಣ ಮಹಿಳಾ ಕ್ಷೇತ್ರ ಹಾಗೂ ಕೆಜಿಎಫ್‌ ಕ್ಷೇತ್ರದಲ್ಲಿ ‘ಕೈ’ ಪಕ್ಷದ  ಬಣಗಳ ಬೆಂಬಲಿತರು ಸ್ಪರ್ಧಾ ಕಣದಲ್ಲಿದ್ದಾರೆ. ಅಚ್ಚರಿ ಎಂದರೆ ಕೆಜಿಎಫ್‌ ಹಾಗೂ ದಕ್ಷಿಣ ಮಹಿಳಾ ಕ್ಷೇತ್ರದಲ್ಲಿ ಜೆಡಿಎಸ್‌–ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಗಳೇ ಇಲ್ಲ!

ಉತ್ತರ ಕ್ಷೇತ್ರಕ್ಕೆ ಕೆ.ಎಚ್‌.ಮುನಿಯಪ್ಪ ಬಣದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸಾದ್‌ ಬಾಬು ಅವರ ಪತ್ನಿ ಮಹಾಲಕ್ಷ್ಮಿ ಕಣದಲ್ಲಿದ್ದರೆ, ಅವರಿಗೆ ಕೆ.ಆರ್‌.ರಮೇಶ್‌ ಕುಮಾರ್‌ ಬಣದ (ಘಟಬಂಧನ್‌) ಕೆ.ಆರ್‌.ರೇಣುಕಾ ಸ್ಪರ್ಧೆಯೊಡ್ಡಿದ್ದಾರೆ. ಈ ಕ್ಷೇತ್ರದಲ್ಲಿ ಎನ್‌ಡಿಎ ಬೆಂಬಲಿತ ಲಕ್ಷ್ಮಿ ಪ್ರಿಯಾ ಇದ್ದು, ಇಬ್ಬರ ನಡುವಿನ ಜಗಳದ ಲಾಭ ಪಡೆಯುವ ಉಮೇದಿನಲ್ಲಿದ್ದಾರೆ.

ದಕ್ಷಿಣ ಕ್ಷೇತ್ರಕ್ಕೆ ಘಟಬಂಧನ್‌ನಿಂದ ಮಾಲೂರಿನ ಕಾಂತಮ್ಮ ಸೋಮಣ್ಣ ಅವರನ್ನು ಕಣಕ್ಕಿಳಿಸಿದ್ದರೆ, ಇತ್ತ ಎಂ.ಪ್ರತಿಭಾ ಅವರನ್ನು ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಅಭ್ಯರ್ಥಿಯನ್ನಾಗಿ ಮಾಡಿ ಕೆ.ವೈ.ನಂಜೇಗೌಡರಿಗೆ ಸಡ್ಡೊಡೆದಿದ್ದಾರೆ. ಮತದಾರರ ಅಪಹರಣ, ಪ್ರವಾಸ, ಆಮಿಷ, ಪೊಲೀಸ್‌ಗೆ ದೂರು ಎಂಬೆಲ್ಲಾ ಸುದ್ದಿಗಳು ಹರಿದಾಡುತ್ತಿದ್ದು, ಬಿರುಸಿನ ಪೈಪೋಟಿ ಏರ್ಪಟ್ಟಿದೆ.

ADVERTISEMENT

ಇನ್ನು ಕೆಜಿಎಫ್‌ ಕ್ಷೇತ್ರದಲ್ಲಿ ಘಟಬಂಧನ್‌ನಿಂದ ಮಾಜಿ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಅವರನ್ನು ಸ್ಪರ್ಧೆಗಿಳಿಸಲಾಗಿದೆ. ಇತ್ತ ಎಸ್‌.ಎನ್‌.ನಾರಾಯಣಸ್ವಾಮಿ ಇದೇ ಕ್ಷೇತ್ರದಲ್ಲಿ ಗುಲ್ಲಹಳ್ಳಿ ಲಕ್ಷ್ಮಪ್ಪ ಅವರನ್ನು ಕಣಕ್ಕಿಳಿಸಿ ಸವಾಲೊಡ್ಡಿದ್ದಾರೆ. ಇದು ‘ಕೈ’ ಬೆಂಬಲಿತ ಮತದಾರರಲ್ಲಿ ಗೊಂದಲಕ್ಕೆ ಕಾರಣವಾಗಿದೆ.

ಈ ವಿಚಾರ ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಕಾಂಗ್ರೆಸ್‌ನ ಪ್ರಮುಖ ಮುಖಂಡರ ವಿಚಾರಕ್ಕೆ ಹೋಗಿದ್ದು, ಅವರ ಸಲಹೆ ಸೂಚನೆಗಳನ್ನು ಎರಡೂ ಬಣದವರು ನಯವಾಗಿ ತಿರಸ್ಕರಿಸಿದ್ದಾರೆ.

‘ಎರಡು ಮಹಿಳಾ ಕ್ಷೇತ್ರಗಳಿಗೆ ನಮ್ಮ ಬೆಂಬಲಿತ ಅಭ್ಯರ್ಥಿಗಳನ್ನಾಗಿ ಕ್ರಮವಾಗಿ ಕಾಂತಮ್ಮ ಸೋಮಣ್ಣ (ದಕ್ಷಿಣ) ಹಾಗೂ ರೇಣುಕಾ (ಉತ್ತರ) ಅವರನ್ನು ಕಣಕ್ಕಿಳಿಸಿದ್ದೇವೆ. ಆಯಾ ಕ್ಷೇತ್ರ ವ್ಯಾಪ್ತಿಯ ಶಾಸಕರು, ಮಾಜಿ ಶಾಸಕರು, ಮುಖಂಡರ ಸಹಮತದೊಂದಿಗೆ ನಾಮಪತ್ರ ಹಾಕಿಸಿದ್ದೇವೆ. ಇನ್ನುಳಿದವರ ವಿಚಾರ ನಮಗೆ ಗೊತ್ತಿಲ್ಲ. ಅವರ ನಾಮಪತ್ರಕ್ಕೆ ನಮ್ಮ ಒಪ್ಪಿಗೆಯೂ ಇಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಎಲ್.ಅನಿಲ್‌ ಕುಮಾರ್‌ ಹೇಳಿದ್ದಾರೆ.

ಘಟಬಂಧನ್‌ ವಿರುದ್ಧ ಗರಂ ಆಗಿರುವ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ, ‘ಅಭ್ಯರ್ಥಿ ಆಯ್ಕೆಗೆ ರಮೇಶ್‍ ಕುಮಾರ್ ಬಳಿ ಒಪ್ಪಿಗೆ ಪಡೆಯಬೇಕಿಲ್ಲ. ಅವರು ನಮ್ಮ ಹೈಕಮಾಂಡ್ ಅಲ್ಲ. ಕೆಜಿಎಫ್ ಶಾಸಕರು, ನಾನು, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಜತೆಗೆ ನಮ್ಮ ಮುಖಂಡರ ತೀರ್ಮಾನದಂತೆ ಆಯ್ಕೆ ಮಾಡಿದ್ದೇವೆ. ಕೆಜಿಎಫ್ ಕ್ಷೇತ್ರಕ್ಕೆ ಗುಲ್ಲಹಳ್ಳಿ ಲಕ್ಷ್ಮಪ್ಪ, ದಕ್ಷಿಣ ಮಹಿಳಾ ಕ್ಷೇತ್ರಕ್ಕೆ ಪ್ರತಿಭಾ ಅವರನ್ನು ಕಣಕ್ಕಿಳಿಸಿದ್ದೇವೆ’ ಎಂಬುದಾಗಿ ಹೇಳಿದ್ದಾರೆ.

‘ಕೆಜಿಎಫ್‌ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಜಯಸಿಂಹ ಕೃಷ್ಣಪ್ಪ ಅವರು ನನ್ನನ್ನು ಏನೂ ಕೇಳಿಲ್ಲ, ಶಾಸಕಿ ರೂಪಕಲಾ ಅವರನ್ನೂ ಕೇಳಿಲ್ಲ’ ಎಂದಿದ್ದಾರೆ.

ಅದಕ್ಕೆ ತಿರುಗೇಟು ನೀಡಿರುವ ಶಾಸಕ ಕೆ.ವೈ.ನಂಜೇಗೌಡ, ‘ಜಯಸಿಂಹ ಕೃಷ್ಣಪ್ಪ ಎದುರು ವಿರೋಧ ಪಕ್ಷದವರೇ ನಾಮತ್ರ ಸಲ್ಲಿಸಿಲ್ಲ. ಆದರೆ, ಕಾಂಗ್ರೆಸ್ ಶಾಸಕ ನಾರಾಯಣಸ್ವಾಮಿ ತಮ್ಮ ಬೆಂಬಲಿಗನನ್ನು ಪ್ರತಿಸ್ಪರ್ಧಿಯನ್ನಾಗಿ ನಾಮಪತ್ರ ಸಲ್ಲಿಕೆ ಮಾಡಿಸಿದ್ದಾರೆ. ಕೋಲಾರಕ್ಕೆ ಎಂ.ವಿ.ಕೃಷ್ಣಪ್ಪ ಅವರ ಕೊಡುಗೆ ಅಪಾರವಾಗಿದ್ದು, ಅವರ ಕುಟುಂಬದ ಸದಸ್ಯ ಜಯಸಿಂಹ ಕೃಷ್ಣಪ್ಪ ಸತತ ಎಂಟನೇ ಬಾರಿ ನಿರ್ದೇಶಕರ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅವರನ್ನು ಪಕ್ಷಾತೀತವಾಗಿ ಆಯ್ಕೆ ಮಾಡಬೇಕೆ ಹೊರತೂ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಶೋಭೆ ತರುವುದಿಲ್ಲ’ ಎಂದು ಹರಿಹಾಯ್ದಿದ್ದಾರೆ.

ಇದಷ್ಟೇ ಅಲ್ಲ; ಎಸ್‌.ಎನ್‌.ನಾರಾಯಣಸ್ವಾಮಿ ಅವರು ತಮ್ಮ ಬೆಂಬಲಿಗ ಮಹಿಳಾ ಅಭ್ಯರ್ಥಿ ಪ್ರತಿಭಾ ಅವರನ್ನು ಗೆಲ್ಲಿಸಲು ದೊಡ್ಡ ದಾಳ ಎಸೆದಿದ್ದಾರೆ. ನಂಜೇಗೌಡರ ಕಟ್ಟಾ ಎದುರಾಳಿ ಹಾಗೂ ವಿರೋಧಿ ಹೂಡಿ ವಿಜಯಕುಮಾರ್‌ ಅವರ ಮಾಲೂರು ನಿವಾಸಕ್ಕೆ ತೆರಳಿ ಬೆಂಬಲ ಕೋರಿದ್ದಾರೆ.

ಕಾಂಗ್ರೆಸ್‌ ಬಣಗಳು ಮುಖಂಡರು ತಮ್ಮ ಬೆಂಬಲಿತರನ್ನು ಕಣಕ್ಕಿಳಿಸಿ ಗೆಲ್ಲಿಸುವ ಜಿದ್ದಿಗೆ ಬಿದ್ದಿರುವುದು ಇದರಿಂದ ಸ್ಪಷ್ಟವಾಗುತ್ತಿದೆ.

ಜೆಡಿಎಸ್‌–ಬಿಜೆಪಿಯಲ್ಲೂ ಭಿನ್ನಮತ ಇಲ್ಲವೆಂದೇನಲ್ಲ. ಕೋಲಾರ ಈಶಾನ್ಯದಲ್ಲಿ ವಡಗೂರು ಡಿ.ವಿ.ಹರೀಶ್‌ ವಿರುದ್ಧ ಸ್ಪರ್ಧೆಗಿಳಿದಿರುವ ಬ್ಯಾಲಹಳ್ಳಿ ಶಂಕರೇಗೌಡ ಜೆಡಿಎಸ್‌ನವರೇ. ಕೋಮುಲ್‌ ಚುನಾವಣೆಯಲ್ಲಿ ಈ ಬಾರಿಯೂ ಹುತ್ತೂರು ಹೋಬಳಿಯ ಹರೀಶ್‌ ಅವರಿಗೇ ಟಿಕೆಟ್‌ ನೀಡಿದ್ದು, ಹೋಳೂರು ಹೋಬಳಿಗೆ ಅವಕಾಶ ಮಾಡಿಕೊಡಬೇಕೆಂದು ಪಟ್ಟು ಹಿಡಿದಿದ್ದರು. ಟಿಕೆಟ್‌ ಸಿಗದ ಕಾರಣ ಬಂಡಾಯವಾಗಿ ಸ್ಪರ್ಧಿಸಿದ್ದಾರೆ.

ಇನ್ನು ಜೆಡಿಎಸ್‌ಗೆ ಮುಳಬಾಗಿಲು ಪೂರ್ವ ಕ್ಷೇತ್ರದಲ್ಲೂ ಬಂಡಾಯ ಎದುರಾಗಿದೆ. ಪಕ್ಷೇತರವಾಗಿ ಕಣಕ್ಕಿಳಿದಿರುವ ಎಸ್‌.ಕಲ್ಲುಪಳ್ಳಿ ಪ್ರಸನ್ನ ಸ್ಪರ್ಧೆಯು ನೇರವಾಗಿ ಜೆಡಿಎಸ್‌–ಬಿಜೆಪಿಯ ಅಭ್ಯರ್ಥಿ ಕೆ.ಎನ್.ನಾಗರಾಜ ಅವರ ಪಾಲಿಗೆ ನುಂಗಲಾರದ ತುತ್ತಾಗಿದೆ.

ಕಾಂಗ್ರೆಸ್‌ ಬಣಗಳಲ್ಲೇ ಪೈಪೋಟಿ ಇರುವ ಕ್ಷೇತ್ರಗಳು

  • ಕೆಜಿಎಫ್ ಕ್ಷೇತ್ರ (ಒಟ್ಟು 60 ಮತಗಳು): ಜಯಸಿಂಹ ಕೃಷ್ಣಪ್ಪ (ಘಟಬಂಧನ್‌ ಬೆಂಬಲಿತ ಕಾಂಗ್ರೆಸ್‌) ಲಕ್ಷ್ಮಪ್ಪ (ಎಸ್‌ಎನ್‌ಎನ್‌ ಬೆಂಬಲಿತ ಕಾಂಗ್ರೆಸ್‌)

  • ಕೋಲಾರ ಉತ್ತರ ಮಹಿಳಾ ಕ್ಷೇತ್ರ (ಒಟ್ಟು 64 ಮತಗಳು): ಕೆ.ಆರ್.ರೇಣುಕಾ (ಘಟಬಂಧನ್‌ ಬೆಂಬಲಿತ ಕಾಂಗ್ರೆಸ್‌) ಮಹಾಲಕ್ಷ್ಮಿ (ಕೆಎಚ್‌ಎಂ ಬೆಂಬಲಿತ ಕಾಂಗ್ರೆಸ್‌) ಲಕ್ಷ್ಮಿ ಪ್ರಿಯಾ (ಎನ್‌ಡಿಎ)

  • ಕೋಲಾರ ದಕ್ಷಿಣ ಮಹಿಳಾ ಕ್ಷೇತ್ರ (ಒಟ್ಟು 56 ಮತಗಳು): ಆರ್.ಕಾಂತಮ್ಮ (ಘಟಬಂಧನ್‌ ಬೆಂಬಲಿತ ಕಾಂಗ್ರೆಸ್) ಎಂ.ಪ್ರತಿಭಾ (ಎಸ್‌ಎನ್‌ಎನ್‌ ಬೆಂಬಲಿತ ಕಾಂಗ್ರೆಸ್‌)

ಬೇಡವೆಂದರೂ ಕಣಕ್ಕಿಳಿಸಿದ್ದಾರೆ

ಕೋಲಾರ ಉತ್ತರ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಇದ್ದು ಬೇರೆ ಯಾರನ್ನೂ ಕಣಕ್ಕಿಳಿಸಬೇಡಿ ಎಂದು ಕೇಳಿಕೊಂಡರೂ ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷ ಪ್ರಸಾದ್‌ ಬಾಬು ಪತ್ನಿ ಸ್ಪರ್ಧಿಸಿದ್ದಾರೆ. ಅವರು ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರ ಮೂಲಕ ನಮ್ಮ ಮೇಲೆ ಒತ್ತಡ ತರಲು ಪ್ರಯತ್ನಿಸಿದರು. ಇದು ಕೋಲಾರ ಮುಳಬಾಗಿಲು ಶ್ರೀನಿವಾಸಪುರ ಸೇರಿದಂತೆ ಮೂರು ತಾಲ್ಲೂಕು ಒಳಗೊಂಡಿದ್ದು ನಾನು ಒಬ್ಬನೇ ತೀರ್ಮಾನ ಮಾಡಲು ಸಾಧ್ಯವಿಲ್ಲ. ಇನ್ನುಳಿದವರನ್ನು ಕೇಳಿದಾಗ ನಮ್ಮ ಅಭ್ಯರ್ಥಿ ಕೆ.ಆರ್‌.ರೇಣುಕಾ ಅವರನ್ನೇ ಕಣಕ್ಕಿಳಿಸೋಣ ಎಂಬುದಾಗಿ ಹೇಳಿದರು ಕೊತ್ತೂರು ಮಂಜುನಾಥ್‌ ಶಾಸಕ

ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಗೌರವ ಕೊಡಬೇಕಲ್ಲವೇ?

ನಮ್ಮದು ಕಾಂಗ್ರೆಸ್‌ ಗುಂಪು ಯಾವುದೇ ವ್ಯಕ್ತಿಯ ಪೂಜೆ ಮಾಡಬಾರದು. ಆದರೆ ಇಲ್ಲಿ ನಡೆಯುತ್ತಿರುವುದೇ ಬೇರೆ. ವೈಯಕ್ತಿಕ ಪ್ರತಿಷ್ಠೆಯಾಗಿ ತೆಗೆದುಕೊಂಡು ಯಾರ ಬಳಿಯೂ ಚರ್ಚಿಸದೆ ಕಾಂಗ್ರೆಸ್‌ ಚೌಕಟ್ಟು ಮೀರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ನಾನು ಸಣ್ಣ ಸಮುದಾಯದ ವ್ಯಕ್ತಿ ಆಗಿರಬಹುದು. ಆದರೆ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಗೌರವ ಕೊಡಬೇಕಲ್ಲವೇ? ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸಾದ್‌ ಬಾಬು ಪತ್ನಿ ಮಹಾಲಕ್ಷ್ಮಿ ಬೆಂಬಲಿಸುವಂತೆ ಸೂಚಿಸಿದ ಮುಖ್ಯಮಂತ್ರಿ ಜಿಲ್ಲಾ ಉಸ್ತುವಾರಿ ಸಚಿವರ ಸಿ.ಎಂ ಮಾಧ್ಯಮ ಸಲಹೆಗಾರರ ಮಾತನ್ನೂ ಇವರು ಕೇಳಿಲ್ಲ ಎಂದರೆ ಏನು ಅರ್ಥ? ಸಿ.ಲಕ್ಷ್ಮಿನಾರಾಯಣ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
Comments0