ಮುನಿಯಪ್ಪ ಬೆನ್ನಿಗೆ ಚೂರಿ ಹಾಕುವ ದ್ರೋಹಿ: ಶಾಸಕ ಶ್ರೀನಿವಾಸಗೌಡ ತೀವ್ರ ವಾಗ್ದಾಳಿ

ಶುಕ್ರವಾರ, ಏಪ್ರಿಲ್ 26, 2019
33 °C
ಜೆಡಿಎಸ್‌ ಮುಖಂಡರು– ಬೆಂಬಲಿಗರ ಸಭೆ

ಮುನಿಯಪ್ಪ ಬೆನ್ನಿಗೆ ಚೂರಿ ಹಾಕುವ ದ್ರೋಹಿ: ಶಾಸಕ ಶ್ರೀನಿವಾಸಗೌಡ ತೀವ್ರ ವಾಗ್ದಾಳಿ

Published:
Updated:
Prajavani

ಕೋಲಾರ: ‘ನನ್ನನ್ನು ಕಾಂಗ್ರೆಸ್‌ನಿಂದ ಹೊರ ದಬ್ಬಿಸಿದ ವ್ಯಕ್ತಿಗೆ ಮತ ಹಾಕಲು ಸಾಧ್ಯವೇ? ರಾಜಕೀಯವಾಗಿ ಬೆನ್ನಿಗೆ ಚೂರಿ ಹಾಕುವ ಜನದ್ರೋಹಿಯನ್ನು ಬೆಂಬಲಿಸಬೇಕೇ?’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಸಂಸದ ಕೆ.ಎಚ್‌.ಮುನಿಯಪ್ಪ ವಿರುದ್ಧ ಏಕವಚನದಲ್ಲೇ ತೀವ್ರ ವಾಗ್ದಾಳಿ ನಡೆಸಿದರು.

ಇಲ್ಲಿ ಸೋಮವಾರ ನಡೆದ ಬೆಂಬಲಿಗರು ಹಾಗೂ ಜೆಡಿಎಸ್ ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿ, ‘ರಾಜಕಾರಣವನ್ನು ವ್ಯಾಪಾರ ಮಾಡಿಕೊಂಡು ಕೋಟಿ ಕೋಟಿ ಸಂಪಾದಿಸಿರುವ ದರೋಡೆಕೋರನಿಗೆ ಓಟು ಹಾಕಿ ಗೆಲ್ಲಿಸಬೇಕೇ’ ಎಂದು ಮುನಿಯಪ್ಪ ವಿರುದ್ಧ ಹರಿಹಾಯ್ದರು.

‘ಮುನಿಯಪ್ಪ 2018ರ ವಿಧಾನಸಭಾ ಚುನಾವಣೆ ವೇಳೆ ಸಾಮಾಜಿಕ ನ್ಯಾಯದ ಮಾತನಾಡಿ ಮುಸ್ಲಿಂ ಸಮುದಾಯದ ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಪಾಷಾ ಅವರಿಗೆ ಹಾಕಿಸಿ ವರ್ತೂರು ಪ್ರಕಾಶ್‌ರನ್ನು ಗೆಲ್ಲಿಸುವ ಕುತಂತ್ರ ಮಾಡಿದ್ದರು. ಆದರೆ, ಮತದಾರರು ನನ್ನ ಕೈ ಬಿಡಲಿಲ್ಲ’ ಎಂದರು.

‘ರಾಜ್ಯದ ಸಮ್ಮಿಶ್ರ ಸರ್ಕಾರ ನೋಡಿ ಓಟು ಕೇಳಲು ಮುನಿಯಪ್ಪನಿಂದ ಈ ಸರ್ಕಾರ ನಡೆಯುತ್ತಿಲ್ಲ. ನಾನು ಮತ್ತು ಕಾಂಗ್ರೆಸ್ ಶಾಸಕರು ಒಟ್ಟಾಗಿದ್ದೇವೆ. ಕುಮಾರಸ್ವಾಮಿ 4 ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ. ಅದಕ್ಕೇನು ತೊಂದರೆಯಿಲ್ಲ. ಮುನಿಯಪ್ಪಗೆ ಓಟು ಹಾಕದಿದ್ದರೆ ಸರ್ಕಾರ ಬಿದ್ದು ಹೋಗುವುದಿಲ್ಲ. ನನ್ನ ವಿರೋಧ ಇರೋದು ಮುನಿಯಪ್ಪ ವಿರುದ್ಧ. ಆತ ಹಿಂದೆ ನಡೆದುಕೊಂಡ ರೀತಿ ನೀತಿ ನೆನೆದರೆ ಸಿಟ್ಟು ನೆತ್ತಿಗೇರುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘2004ರ ಲೋಕಸಭಾ ಚುನಾವಣೆಯಲ್ಲಿ ನಾನು ಮತ್ತು ಕೃಷ್ಣ ಬೈರೇಗೌಡರು ಮುನಿಯಪ್ಪ ಪರ ನಿಲ್ಲದಿದ್ದರೆ ಆತ ಆಗಲೇ ಸೋತು ಕ್ಷೇತ್ರ ಬಿಟ್ಟು ಓಡಿ ಹೋಗಿರುತ್ತಿದ್ದ. ಆ ಚುನಾವಣೆಯಲ್ಲಿ ವೇಮಗಲ್ ಮತ್ತು ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮುನಿಯಪ್ಪಗೆ ಹೆಚ್ಚು ಮತ ಬರುವಂತೆ ಮಾಡಿದೆವು. ಆದರೆ, ಆತನಿಗೆ ಕೃತಜ್ಞತೆ ಇಲ್ಲ. ಹಿಂದಿನದನ್ನು ಮರೆತು ನನ್ನನ್ನು ಕಾಂಗ್ರೆಸ್‌ನಿಂದ ಹೊರ ದಬ್ಬಿಸಿ, ಎಲ್ಲಿಯೋ ಇದ್ದ ವರ್ತೂರು ಪ್ರಕಾಶ್‌ ಶಾಸಕನಾಗುವಂತೆ ಮಾಡಿದೆ’ ಎಂದು ಕಿಡಿಕಾರಿದರು.

ಭಿನ್ನಾಭಿಪ್ರಾಯ ನಿಜ: ‘ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಮುಖಂಡರೇ ಮುನಿಯಪ್ಪ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮುನಿಯಪ್ಪ ರಾಜಕೀಯವಾಗಿ ಮಾಡಿರುವ ಅನ್ಯಾಯಕ್ಕೆ ಸ್ವಪಕ್ಷಿಯರೇ ಆತನ ವಿರುದ್ಧ ಬಂಡೆದಿದ್ದಾರೆ. ಮುನಿಯಪ್ಪ ಮತ್ತು ನನ್ನ ನಡುವೆ ಭಿನ್ನಾಭಿಪ್ರಾಯ ಇರೋದು ನಿಜ’ ಎಂದು ಸ್ಪಷ್ಟಪಡಿಸಿದರು.

ಅಪಾಯ ಖಂಡಿತ: ‘ಮುನಿಯಪ್ಪ ಪರ ಪ್ರಚಾರ ಮಾಡುವುದು ಬೇಡ. ಕ್ಷೇತ್ರದಲ್ಲಿ ನಮ್ಮ ರಾಜಕೀಯ ವಿರೋಧಿ ಆಗಿರುವ ಅವರಿಗೆ ಮತ ಹಾಕುವಂತೆ ಜನರಿಗೆ ಹೇಳಬಾರದು. ಅವರನ್ನು ಬೆಂಬಲಿಸಿದ ಮುಂದೆ ಅಪಾಯ ಖಂಡಿತ’ ಎಂದು ಪಕ್ಷದ ಮುಖಂಡರು ಅಭಿಪ್ರಾಯಪಟ್ಟರು.

‘ಮುನಿಯಪ್ಪ ಅವರು ಮೊದಲಿನಿಂದಲೂ ನಮ್ಮ ಮುಖಂಡರಾದ ಕೆ.ಶ್ರೀನಿವಾಸಗೌಡ ಮತ್ತು ಕೃಷ್ಣ ಬೈರೇಗೌಡರನ್ನು ರಾಜಕೀಯವಾಗಿ ತುಳಿಯುತ್ತಾ ಬಂದಿದ್ದಾರೆ. ಕೃಷ್ಣ ಬೈರೇಗೌಡರ ವಿರುದ್ಧವೇ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಚಾಡಿ ಹೇಳಿದ್ದರು. ಅವಕಾಶವಾದಿ ರಾಜಕಾರಣಿ ಮುನಿಯಪ್ಪ ಪರ ಯಾವುದೇ ಕಾರಣಕ್ಕೂ ಪ್ರಚಾರ ಮಾಡಬಾರದು’ ಎಂದರು.

ಸಮಯ ಸಾಧಕ: ‘ಜೆಡಿಎಸ್ ಮತ್ತು ಕಾಂಗ್ರೆಸ್‌ನ ಮೈತ್ರಿ ಅಭ್ಯರ್ಥಿಯಾಗಿ ಮುನಿಯಪ್ಪ ಕಣಕ್ಕಿಳಿದಿದ್ದಾರೆ. ಆದರೆ, ಅವರು ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಕೆ.ಶ್ರೀನಿವಾಸಗೌಡರನ್ನು ಸೋಲಿಸುವ ಪ್ರಯತ್ನ ಮಾಡಿದರು. ಸಮಯ ಸಾಧಕ ಮುನಿಯಪ್ಪರನ್ನು ಸೋಲಿಸಬೇಕು’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ ಹೇಳಿದರು. ಆಗ ಮುಖಂಡರು ಚಪ್ಪಾಳೆ ತಟ್ಟಿ ಶಿಳ್ಳೆ ಹಾಕಿದರು.

‘ಮುನಿಯಪ್ಪ ಸಮಯ ಬಂದಾಗ ಜುಟ್ಟು ಹಿಡಿಯುತ್ತಾರೆ, ಕಾಲೂ ಹಿಡಿಯುತ್ತಾರೆ. ಅವರನ್ನು ನಂಬುವುದು ಬೇಡ. ಈ ಹಿಂದೆ ಅವರನ್ನು ಬೆಂಬಲಿಸಿ ಸಾಕಷ್ಟು ತೊಂದರೆ ಅನುಭವಿಸಿದ್ದೇವೆ. ಆ ಸ್ಥಿತಿ ಪುನರಾವರ್ತನೆ ಆಗುವುದು ಬೇಡ. ಕಾರ್ಯಕರ್ತರೆಲ್ಲರೂ ಒಟ್ಟಾಗಿ ಅವರನ್ನು ಸೋಲಿಸುವ ನಿರ್ಣಯ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ಜೆಡಿಎಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಇ.ಗೋಪಾಲ್‌, ಕಾರ್ಯಾಧ್ಯಕ್ಷ ನಟರಾಜ್, ತಾಲ್ಲೂಕು ಘಟಕದ ಅಧ್ಯಕ್ಷ ಬಾಬು ಮೌನಿ, ಪಕ್ಷದ ಮುಖಂಡರಾದ ಶ್ರೀಕೃಷ್ಣ, ವೆಂಕಟೇಶಪ್ಪ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ದಯಾನಂದ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !