ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಂಡಿನ್ಯ ನದಿ ಸೆಲೆ ಬಳಕೆಗೆ ನಿರ್ಲಕ್ಷ್ಯ

ನೆರೆ ರಾಜ್ಯಗಳಲ್ಲಿ ಸಮೃದ್ಧ, ಮುಳಬಾಗಿಲಿನ ಆನೆಕೆರೆಯಲ್ಲಿ ಕಲ್ಮಶ
Last Updated 21 ಜನವರಿ 2022, 6:24 IST
ಅಕ್ಷರ ಗಾತ್ರ

ಮುಳಬಾಗಿಲು: ಬಯಲುಸೀಮೆ ಕೋಲಾರ ಜಿಲ್ಲೆಯಲ್ಲಿ ನದಿಯೊಂದು ಹರಿಯುತ್ತಿದೆ ಎಂಬ ಮಾತೇ ಸೋಜಿಗ. ಇದು ಕೌಂಡಿನ್ಯ ನದಿ. ಗುಪ್ತಗಾಮಿನಿಯಾಗಿ ಕೂಟಾದ್ರಿ ಬೆಟ್ಟವೆಂದೇ ಹೆಸರಾದ ಗ್ರಾಮಗಳ (ತಗ್ಗುಪ್ರದೇಶ) ಮೂಲಕ ನೆರೆಯ ರಾಜ್ಯಗಳಿಗೆ ಹರಿದು ಹೋಗುವ ನದಿ ಇದು. ಆದರೆ ಇದು ಅಳಿವಿನ ಅಂಚಿನಲ್ಲಿದೆ.

ತಾಲ್ಲೂಕಿನ ದುಗ್ಗಸಂದ್ರ ಹೋಬಳಿ ಕುರುಡುಮಲೆ ಗ್ರಾಮದ ಬೆಟ್ಟದ ತಪ್ಪಲಿನಲ್ಲಿ ಕೌಂಡಿನ್ಯ ನದಿ ಇದೆ. ಇದು ಮಳೆಗಾಲದಲ್ಲಿ ಗ್ರಾಮದ ಪೂರ್ವದ ದಿಕ್ಕಿನ ತಗ್ಗು ಪ್ರದೇಶಗಳ ಗ್ರಾಮಗಳ ಮೂಲಕ ಹರಿದು ಆಂಧ್ರಪ್ರದೇಶದಲ್ಲಿ ಕೆರೆಗಳನ್ನು ತುಂಬಿಸಿ ಮತ್ತೆ ತಮಿಳುನಾಡು ಕಡೆ ತನ್ನ ಹರಿವನ್ನು ಬೆಳಸುತ್ತದೆ. ಬೆಟ್ಟದ ಪಶ್ಚಿಮ ಭಾಗದಿಂದ ಪೂರ್ವಕ್ಕೆ ಮೊದಲು ಆನೆಕೆರೆಗೆ ನೀರು ಹರಿಯುತ್ತದೆ. ಒಂದು ಕಾಲದಲ್ಲಿ ಹಿಂಡು ಹಿಂಡು ಆನೆಗಳು ಆನೆಕೆರೆಗೆ ಬರುತ್ತಿದ್ದ ಕಾರಣ ಇದನ್ನು ಆನೆಕೆರೆ ಎಂದು ಕರೆಯುತ್ತಾರೆ.

ಬಹುಪಾಲು ಇಲ್ಲಿಂದ ಹರಿದು ಹೋಗುವ ನೀರು ಪಕ್ಕದ ಸಿದ್ಧಘಟ್ಟ ಗ್ರಾಮದ ಕೆರೆ ಹಾಗೂ ಮಾಧಘಟ್ಟ ಸುತ್ತಮುತ್ತಲ ಕಾಲುವೆಗಳ ಮೂಲಕ ನೀರು ನೆರೆಯ ಆಂಧ್ರಪ್ರದೇಶದ ಪಲಮನೇರು ತಾಲ್ಲೂಕಿಗೆ ಹರಿದು ಅಲ್ಲಿನ ಜಮೀನುಗಳನ್ನು ಸಮೃದ್ಧಿಗೊಳಿಸಿದೆ. ಅಲ್ಲಿ ನಮ್ಮ ತಾಲ್ಲೂಕಿನಲ್ಲಿ ಹುಟ್ಟುವ ಕೌಂಡಿನ್ಯ ನದಿಗೆ ಅಲ್ಲಿನವರಿಗೆ ಎಷ್ಟು ಅಕ್ಕರೆಯೆಂದರೇ ಈ ನದಿಯ ಹೆಸರಿನ ಮೇಲೆ ಅವರಿಗೆ ಅಪಾರವಾದ ಗೌರವವಿದೆ. ಇದರ ಹೆಸರು ಅಲ್ಲಿನ ಹಲವಾರು ನೀರಾವರಿ
ಯೋಜನೆಗಳಿಗೆ, ಕುಡಿಯುವ ನೀರಿನ ಯೋಜನೆಗೆ ಅಡವಿ ಪ್ರದೇಶದ ಕಾರಿಡಾರ್‌ಗಳಿಗೆ ಇಡಲಾಗಿದೆ.

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು ಅವರು ಚಿತ್ತೂರು ಜಿಲ್ಲೆಗೆ ಬಂದಾಗ ಕೌಂಡಿನ್ಯ ನದಿನೀರಿನ ಮಳೆಗಾಲದಲ್ಲಿ ಸದುಯೋಗಪಡಿಸಿಕೊಳ್ಳುವ ಕುರಿತು ಚರ್ಚಿಸಿ ಅವರ ಅವಧಿಯಲ್ಲಿ ಚೆಕ್‌ಡ್ಯಾಂಗಳನ್ನು ನಿರ್ಮಿಸಿ ಅಭಿವೃದ್ಧಿಪಡಿಸಿದ್ಧರೆ. ಅಲ್ಲಿನ ಅರಣ್ಯ ಇಲಾಖೆ ಕೂಡ ತನ್ನ ಕೌಂಡಿನ್ಯ
ಹೆಸರು ಬಳಸಿಕೊಳ್ಳುವಷ್ಟು ಹೆಸರು ತಾಲ್ಲೂಕಿನ ಕುರುಡುಮಲೆ ಬೆಟ್ಟದ ತಪ್ಪಲಿನಲ್ಲಿ ಹುಟ್ಟುವ ಕೌಂಡಿನ್ಯ ನದಿಯದು.

‘ನಮ್ಮ ರಾಜ್ಯ ಮತ್ತು ತಾಲ್ಲೂಕಿನಲ್ಲಿ ಹುಟ್ಟುವ ನದಿ ನೆರೆ ರಾಜ್ಯದಲ್ಲಿ ಅಷ್ಟೊಂದು ಹೆಸರುವಾಸಿಯಾಗಿದೆ. ಇಂತಹ ನದಿಯ ನೀರನ್ನು ಮಳೆಗಾಲದಲ್ಲಿ ಹಿಡಿದಿಟ್ಟು ಅಂತರ್ಜಲಮಟ್ಟವನ್ನು ಸದುಪಯೋಗ ಪಡಿಸಿಕೊಳ್ಳುವ ಯೋಚನೆ ನಮ್ಮವರಿಗೆ ಬಂದಿಲ್ಲ ಎಂದು ದೂರುತ್ತಾರೆ’ ಹಿರಿಯ ವಕೀಲ ಕುರುಡುಮಲೆ ಮಂಜುನಾಥ್‌.

‘ಅದಕ್ಕೆ ಸಾಕ್ಷಿಯಾಗಿ ಕುರುಡುಮಲೆ ಬೆಟ್ಟದಲ್ಲಿ ಹುಟ್ಟಿ ನಂತರ ಬೆಟ್ಟದ ತಪ್ಪಲಿನಲ್ಲಿ ನೀರು ಸಂಗ್ರಹವಾಗುವ ಆನೆ ಕೆರೆಯನ್ನು ಹಾಳು ಮಾಡಲಾಗಿದೆ. ಸದಾ ಕಾಲ ನೀರಿನ ಹರಿವಿನಿಂದ ತುಂಬಿರುವ ಆನೆಕೆರೆ ಮೂಲಸ್ವರೂಪವನ್ನು ಬದಲಾಯಿಸುವ ಮಟ್ಟಿಗೆ ನಿರ್ಲಕ್ಷವಹಿಸಲಾಗಿದೆ’ ಎನ್ನುತ್ತಾರೆ ಆನೆಕೆರೆಯ ಮೂಲ ಹಾಗೂ ಕೌಂಡಿನ್ಯ ಋಷಿ ಹಾಗೂ ಕೆರೆಯ ಬಗ್ಗೆ ಸಂಶೋಧನೆ ನಡೆಸಿರುವ ಕುರುಡುಮಲೆ ಗ್ರಾಮದ ಪ್ರೊಫೆಸರ್ ಕೆ.ಆರ್.ನರಸಿಂಹ.

ಕೌಂಡಿನ್ಯ ಮೂಲಕ್ಕೆ ಬಂದರೆ ಕುರುಡುಮಲೆ ಬೆಟ್ಟದ ತಪ್ಪಲಿನಲ್ಲಿ ಜೀವಿಸುತ್ತಿದ್ದ ಕೌಂಡಿನ್ಯ ಮಹರ್ಷಿಯ ಹೆಸರು ನದಿಗೆ ಬಂದಿದೆ ಎನ್ನುತ್ತಾರೆ ಅವರು. ಮಳೆಗಾಲ ಬೇಸಿಗೆ ಕಾಲದಲ್ಲೂ ನೀರು ಹರಿಯುತ್ತಿದ್ದು ಈಗ ಬೆಟ್ಟದ ಅಲ್ಲಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಒಂದು ಕಡೆ ಬೆಟ್ಟದ ಮೂಲ ಸ್ವರೂಪ ಬದಲಾಗುತ್ತಿದ್ದರೆ, ಬೆಟ್ಟದ ಸುತ್ತಮುತ್ತಲ ಗೋಮಾಳ, ಸರ್ಕಾರಿ ಜಮೀನು ಮತ್ತು ಅರಣ್ಯ ಇಲಾಖೆಗೆ ಸೇರಿದ ಜಮೀನು. ಕಂದಾಯ ಇಲಾಖೆಗೆ ಸೇರಿದ ಖರಾಬು ಜಮೀನು ಅನಧಿಕೃತ ಸಾಗುವಳಿ ಜಮೀನು ಪಡೆಯುವ ಭರದಲ್ಲಿ ಅತಿಕ್ರಮಣಕ್ಕೆ ತುತ್ತಾಗಿದೆ.

ಚುನಾವಣೆ ಸಂದರ್ಭದಲ್ಲಿ ಅಭಿವೃದ್ಧಿ ಭರವಸೆ

‘ಚುನಾವಣೆ ಕಾಲದಲ್ಲಿ ಮಾತ್ರ ಆನೆ ಕೆರೆಗೆ ಭೇಟಿ ಮಾಡಿ ಕೆರೆ ನೀರು ರಕ್ಷಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ಇಲ್ಲಿನ ನೀರನ್ನು ಇಲ್ಲಿಂದ 5 ಕಿ.ಮೀ.ದೂರದಲ್ಲಿರುವ ಮುಳಬಾಗಿಲು ನಗರಕ್ಕೆ ಕುಡಿಯುವ ನೀರನ್ನು ಒದಗಿಸಲು ಪ್ರಯತ್ನಮಾಡುವುದಾಗಿ ಜನ ಪ್ರತಿನಿಧಿಗಳು ರಾಜಕಾರಣಿಗಳು ಹುಸಿಯಾದ ಭರವಸೆಗಳನ್ನು ನೀಡುವುದು ಸಾಮಾನ್ಯವಾಗಿದೆ’ ಎಂದು ಪರಿಸರಪ್ರೇಮಿಗಳು ಆರೋಪಿಸಿದರು.

‘ನದಿಹರಿಯುವ ಲಿಂಗಾಪುರ, ಸಿದ್ಧಘಟ್ಟದಿಂದ ರಾಜ್ಯದ ಗಡಿ ಹಳೇಕುಪ್ಪ, ನಂಗಲಿ, ಮುಷ್ಟೂರು, ನೆಗವಾರದವರೆವಿಗೂ ಸುಮಾರು 20 ಗ್ರಾಮಗಳ ಕೆರೆ ರಾಜಕಾಲುವೆಗಳಲ್ಲಿ ಮರಳು ವೃಕ್ಷ ಸಂಪತ್ತು ಲೂಟಿಯಾಗಿ ಕೌಂಡಿನ್ಯ ನದಿ ಕಾಲುವೆಗಳ ಮೂಲ ಸ್ವರೂಪ ಬದಲಾಗಿದೆ’ ಎನ್ನುತ್ತಾರೆ ರೈತ ಮುಖಂಡ ಯಲುವಹಳ್ಳಿ ಪ್ರಭಾಕರ್.

ಮಳೆಗಾಲದಲ್ಲಿ ಯಥೇಚ್ಛವಾಗಿ ಸಂಗ್ರಹವಾಗುವ ನೀರು ಇಲ್ಲಿ ಆಶ್ರಯವಿಲ್ಲದೆ ನೆರೆಯ ರಾಜ್ಯದ ಪಾಲಾಗುತ್ತಿದೆ. ತಾಲ್ಲೂಕಿನಲ್ಲಿ ಕೌಂಡಿನ್ಯ ನದಿಹರಿಯುವ ದುಗ್ಗಸಂದ್ರ, ಬೈರಕೂರು ಹೋಬಳಿ ಕೌಂಡಿನ್ಯ ನದಿ ಹರಿಯುವ ಸುಮಾರು ಇಪ್ಪತೈದಕ್ಕೂ ಹೆಚ್ಚು ಗ್ರಾಮಗಳ ಕಾಲುವೆಗಳನ್ನು ಅಭಿವೃದ್ಧಿಪಡಿಸಿ ಅತಿಕ್ರಮಗಳನ್ನು ತಡೆಗಟ್ಟಿದರೂ ಸಾಕು ಸ್ವಲ್ಪ ಮಟ್ಟಿನ ನೀರು ಪ್ರಯೋಜನ ರಾಜ್ಯದ ಸ್ಥಳೀಯರಿಗಾಗುವುದು ಎಂಬುದು ಸ್ಥಳೀಯರ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT