ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಳಬಾಗಿಲು: ಎಪಿಎಂಸಿ ಮಾರುಕಟ್ಟೆಗಿಲ್ಲ ಮೂಲ ಸೌಕರ್ಯ

ಅನೈತಿಕ, ಕುಡುಕರ ತಾಣವಾಗಿ ಮಾರ್ಪಾಡು
ಕೆ.ತ್ಯಾಗರಾಜ್ ಕೊತ್ತೂರು
Published 26 ನವೆಂಬರ್ 2023, 7:58 IST
Last Updated 26 ನವೆಂಬರ್ 2023, 7:58 IST
ಅಕ್ಷರ ಗಾತ್ರ

ಮುಳಬಾಗಿಲು: ನಗರದ ಸೊಣ್ಣವಾಡಿ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯು ಮೂಲ ಸೌಕರ್ಯಗಳಿಲ್ಲದೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ.

ಎಪಿಎಂಸಿ ಮಾರುಕಟ್ಟೆಯು 4.35 ಎಕರೆಯಿದ್ದು, ಆವರಣದಲ್ಲಿ ಹರಾಜು ಕೂಗುವ ಶೆಡ್‌ಗಳು, 18 ಅಂಗಡಿ ಮಳಿಗೆಗಳು, ಹರಾಜು ಕಟ್ಟೆ ಮುಂತಾದ ಕಟ್ಟಡಗಳಿದ್ದು, ಬಹುತೇಕ ಕಟ್ಟಡಗಳು ನಿರ್ವಹಣೆ ಇಲ್ಲದೆ ಬೀಳುವ ಸ್ಥಿತಿಯಲ್ಲಿವೆ. ಮತ್ತೆ ಕೆಲವು ಕಟ್ಟಡಗಳು ಯಾರೂ ಬಳಕೆ ಮಾಡದೆ ಅನಾಥವಾಗಿ ನಿಂತಿವೆ.

ಮಾರುಕಟ್ಟೆಯಲ್ಲಿ ಶೌಚಾಲಯ, ರಸ್ತೆ, ಒಣಗಿದ ರೆಂಬೆ, ಕೊಂಬೆ, ಮರಗಳಂತೆ ಬೆಳೆದಿರುವ ಗಿಡಗಂಟೆಗಳು ಅಂಗಡಿ ಮಳಿಗೆಗಳನ್ನು ಆವರಿಸಿದ್ದು, ಆವರಣ ಅನೈತಿಕ ಚಟುವಟಿಕೆಗಳ ತಾಣವಾಗಿದೆ.

ಅನಾತವಾಗಿರುವ ಕಟ್ಟಡಗಳು: ಮಾರುಕಟ್ಟೆ ಪ್ರಾಂಗಣದಲ್ಲಿ ಮೂರು ಬ್ಲಾಕುಗಳನ್ನು ಒಳಗೊಂಡಂತೆ 18 ವ್ಯಾಪಾರದ ಕಟ್ಟಡಗಳಿದ್ದು ಈಚೆಗೆ ಹರಾಜು ಕರೆಯಲಾಗಿತ್ತು. ಆದರೆ, ಎಪಿಎಂಸಿ ಆವರಣದಲ್ಲಿ ವ್ಯಾಪಾರಕ್ಕಾಗಿ ಗ್ರಾಹಕರು ಯಾರೂ ಬರುವುದಿಲ್ಲ ಎಂಬ ಕಾರಣದಿಂದ ಕೇವಲ 6 ಕಟ್ಟಡಗಳು ಮಾತ್ರ ಪ್ರತಿ ಕಟ್ಟಡಕ್ಕೆ ಹತ್ತು ತಿಂಗಳಿಗೆ ₹2,200ಕ್ಕೆ ಹಾರಜಾದರೆ ಉಳಿದ 12 ಕಟ್ಟಡಗಳು ಹಾಗೆ ಉಳಿದಿವೆ. ಹಾಗಾಗಿ ಕಟ್ಟಡಗಳು ಶಿಥಿಲಗೊಂಡ ಸ್ಥಿತಿಯಲ್ಲಿದ್ದು, ಸುತ್ತಲೂ ನಾನಾ ವಿಧದ ಗಿಡಗಳು ಬೆಳೆದಿದೆ. ಜತೆಗೆ ಎಲ್ಲೆಂದಲ್ಲೇ ಮಧ್ಯಪಾನ ಬಾಟಲಿಗಳು ಹಾಗೂ ಇತರೆ ವಸ್ತುಗಳು ಬಿದ್ದಿವೆ.

ಕಟ್ಟಡಗಳ ಕಿಟಕಿ ಬಾಗಿಲುಗಳು ಗೆದ್ದಲು ಹಿಡಿದು ಹಾಳಾಗುತ್ತಿದ್ದರೆ, ಗೋಡೆಗಳಲ್ಲಿರುವ ಸಿಮೆಂಟ್ ಉದುರುತ್ತಿದೆ. ಇನ್ನು ಕಟ್ಟಡ ಮುಂಭಾಗ ಕಾಲಿಡಲೂ ಆಗದಂತೆ ಗಿಡಗಂಟೆ ಹಾಗೂ ಕಸದಿಂದ ತುಂಬಿಹೋಗಿದ್ದು. ಹಾವು, ಚೇಳು, ವಿಷಜಂತುಗಳ ಅವಾಸ ಸ್ಥಾನವಾಗಿ ಮಾರ್ಪಟ್ಟಿದೆ.

ಬಾಡಿಗೆ ಜಾಸ್ತಿ ಎಂದು ಹರಾಜು ಕರೆಯದ ವ್ಯಾಪಾರಿಗಳು: ಒಟ್ಟು 18 ಕಟ್ಟಡಗಳಿದ್ದು ಎಪಿಎಂಸಿ ಕೇಂದ್ರ ಕಚೇರಿ ಆದೇಶದಂತೆ ಈ ಮೊದಲು ಒಂದಕ್ಕೆ ₹4,000 ಹರಾಜು ಬಿಡಲಾಗಿತ್ತು. ಆದರೆ, ಯಾರೂ ಆ ಬೆಲೆಗೆ ಹರಾಜು ಕರೆಯದ ಕಾರಣ ವಿಶಾಲವಾದ ಕಟ್ಟಡಗಳು ಕೇವಲ ₹2,200ಕ್ಕೆ ಹರಾಜು ಆಗಿದ್ದು, ಸರ್ಕಾರಕ್ಕೆ ನಷ್ಟ ಉಂಟಾಗಿದೆ.

ಬೆಳಿಗ್ಗೆ ಮಾತ್ರ ತೆರೆಯುವ ಶೌಚಾಲಯಗಳು: ಮಾರುಕಟ್ಟೆಗೆ ಪ್ರತಿನಿತ್ಯ ನೂರಾರು ಮಂದಿ ವ್ಯಾಪಾರ ವಹಿವಾಟಿಗಾಗಿ ಬಂದು ಹೋಗುತ್ತಾರೆ. ಆದರೆ, ಒಂದೊಂದೇ ಶೌಚಾಲಯವಿದ್ದು ಬೆಳಿಗ್ಗೆ ಮಾತ್ರ ತೆರೆದು ಉಳಿದ ಸಮಯದಲ್ಲಿ ಬೀಗ ಹಾಕುತ್ತಾರೆ. ಈ ಕಾರಣ ಆವರಣದಲ್ಲಿ ಗೋಡೆಗಳ ಬಳಿ ಮಲ, ಮೂತ್ರ ವಿಸರ್ಜನೆ ಮಾಡಿ ಗಲೀಜು ಮಾಡುತ್ತಿದ್ದಾರೆ. ಹಾಗಾಗಿ ಶೌಚಾಲಯವನ್ನು ಎಲ್ಲಾ ಸಮಯದಲ್ಲೂ ತೆರೆದಿರಬೇಕು. ಜತೆಗೆ ಮತ್ತಷ್ಟು ಶೌಚಾಲಯ ನಿರ್ಮಾಣ ಮಾಡಬೇಕು ಎಂಬುದು ಸಾರ್ವಜನಿಕರ ಬೇಡಿಕೆಯಾಗಿದೆ.

ಶಿಥಿಲಗೊಂಡಿರುವ ಹರಾಜು ಶೆಡ್‌ಗಳು: ಸುಮಾರು ವರ್ಷಗಳ ಹಿಂದೆ ನಿರ್ಮಾಣವಾಗಿರುವ ಹರಾಜು ಶೆಡ್‌ ಹಾಗೂ ಕಟ್ಟೆಗಳ ಚಾವಣಿ ಶಿಥಿಲಗೊಂಡಿವೆ. ಹಾಗಾಗಿ ಮಳೆ ಬಂದಲ್ಲಿ ಸೋರುತ್ತಿದ್ದು ಕಲ್ಲುಗಳ ಮೇಲೆ ಉತ್ಪನ್ನ ಇಡದಂತಾಗಿದೆ.

ಒಂದೇ ಕುಡಿಯುವ ನೀರಿನ ಘಟಕ: ಪ್ರತಿನಿತ್ಯ ನೂರಾರು ಮಂದಿ ಸೇರುವ ಸ್ಥಳದಲ್ಲಿ ಒಂದು ಕುಡಿಯುವ ನೀರಿನ ಘಟಕವಿದೆ. ಹಾಗಾಗಿ ಅಲ್ಲಲ್ಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಟ್ಯಾಂಕರ್‌ಗಳನ್ನು ಇಟ್ಟು ಸ್ವಚ್ಛತೆ ಕಾಪಾಡಬೇಕು.

ಎಲ್ಲೆಂದರಲ್ಲಿ ಕಸದ ರಾಶಿ: ವಿಶಾಲವಾದ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಪ್ಲಾಸ್ಟಿಕ್ ಹಾಗೂ ನಾನಾ ವಿಧದ ಕಸದ ರಾಶಿ ತುಂಬಿದ್ದು, ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ. ಇನ್ನು ಭಾರೀ ಗಾತ್ರದ ಮರಗಳ ಎಲೆಗಳು ಹಾಗೂ ಒಣಗಿದ ಮರಗಳ ರೆಂಬೆ ಕೊಂಬೆಗಳು ಆಗಲೋ ಈಗಲೋ ಬೀಳುವ ಹಂತಕ್ಕೆ ತಲುಪಿದೆ. ಹಾಗಾಗಿ ಎಪಿಎಂಸಿ ಸಮಸ್ಯೆಗಳ ಗೂಡಾಗಿದೆ.

ಬೆಳಿಗ್ಗೆ ಮಾತ್ರ ತೆರೆದು ನಂತರ ಬೀಗ ಹಾಕಿರುವ ಶೌಚಾಲಯಗಳು
ಬೆಳಿಗ್ಗೆ ಮಾತ್ರ ತೆರೆದು ನಂತರ ಬೀಗ ಹಾಕಿರುವ ಶೌಚಾಲಯಗಳು
ಮಾರುಕಟ್ಟೆಯ ಆವರಣದಲ್ಲಿ ಕಸದ ರಾಶಿ
ಮಾರುಕಟ್ಟೆಯ ಆವರಣದಲ್ಲಿ ಕಸದ ರಾಶಿ
ಮಾರುಕಟ್ಟೆಯ ಆವರಣದಲ್ಲಿರುವ ಬಾಟಲಿ ಹಾಗೂ ತ್ಯಾಜ್ಯ 
ಮಾರುಕಟ್ಟೆಯ ಆವರಣದಲ್ಲಿರುವ ಬಾಟಲಿ ಹಾಗೂ ತ್ಯಾಜ್ಯ 

ಎಪಿಎಂಸಿ ಮಾರುಕಟ್ಟೆಯಲ್ಲಿ ಚುನಾಯಿತ ಪ್ರತಿನಿಧಿಗಳು ನಿರ್ದೆಶಕರು ಹಾಗೂ ಅಧ್ಯಕ್ಷರಿಲ್ಲದೆ ನೋಡಲ್‌ ಅಧಿಕಾರಿಗಳು ನೋಡಿಕೊಳ್ಳುತ್ತಿರುವುದರಿಂದ ಎಲ್ಲಾ ಕೆಲಸಗಳನ್ನು ಮಾಡುತ್ತಿಲ್ಲ

-ಗೊಲ್ಲಹಳ್ಳಿ ವೆಂಕಟೇಶ್, ಎಪಿಎಂಸಿ ಮಾಜಿ ಅಧ್ಯಕ್ಷರು

ಮಾರುಕಟ್ಟೆಯ ಆವರಣದಲ್ಲಿ ಭಾರೀ ಗಾತ್ರದ ಮರಗಳಿದ್ದು ಅದರ ಎಲೆ ರೆಂಬೆ ಕೊಂಬೆಗಳು ಬೀಳುತ್ತಿದ್ದು ಕಸದ ಸಮಸ್ಯೆ ಉದ್ಭವಿಸಿದೆ. ಹಾಗಾಗಿ ಶೀಘ್ರದಲ್ಲೇ ಅರಣ್ಯ ಅಧಿಕಾರಿಗಳಿಂದ ಅನುಮತಿ ಪಡೆದು ಒಣಗಿದ ರೆಂಬೆಗಳನ್ನು ಕತ್ತರಿಸಿ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು

-ಎಚ್. ಹರೀಶ್. ಎಪಿಎಂಸಿ ಕಾರ್ಯದರ್ಶಿ

ನವೀಕರಣಕ್ಕಾಗಿ ಟೆಂಡರ್

ಎಪಿಎಂಸಿ ಮಾರುಕಟ್ಟೆಯಲ್ಲಿ ಶಿಥಿಲಗೊಂಡಿರುವ ಹಾಗೂ ಬೀಳುವ ಹಂತದಲ್ಲಿರುವ ಕಟ್ಟಡ ಹಾಗೂ ಶೆಡ್‌ಗಳ ನವೀಕರಣಕ್ಕಾಗಿ ಕೇಂದ್ರ ಕಚೇರಿಯಿಂದ ಟೆಂಡರ್ ಕರೆಯಲಾಗಿದ್ದು ಬಹುಬೇಗ ಕಾಮಗಾರಿ ಪ್ರಾರಂಭಿಸಿದರೆ ರೈತರು ವ್ಯಾಪಾರಿಗಳಿಗೆ ಅನುಕೂಲವಾಗಲಿದೆ ಎಂದು ಎಪಿಎಂಸಿ ಕಾರ್ಯದರ್ಶಿ ಎಚ್. ಹರೀಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT