ಬುಧವಾರ, ಆಗಸ್ಟ್ 4, 2021
21 °C
ಸಂಸದರನ್ನು ಕುಟುಕಿದ ನಗರಸಭೆ ಸದಸ್ಯ ಮುಬಾರಕ್‌

ಕಾರ್ಪೊರೇಟರ್‌ ರಾಜಕೀಯ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ದೇಶದ 544 ಸಂಸದರಲ್ಲಿ ತಾವು ಒಬ್ಬರಾಗಿದ್ದೀರಿ. ಬಿಬಿಎಂಪಿ ಕಾರ್ಪೊರೇಟರ್ ರೀತಿ ರಾಜಕೀಯ ಮಾಡುವುದನ್ನು ನಿಲ್ಲಿಸಿ. ಎಲ್ಲಾ ಜಾತಿ, ಧರ್ಮದವರನ್ನು ಸಮನಾಗಿ ನೋಡುವ ಪ್ರವೃತ್ತಿ ಬೆಳೆಸಿಕೊಳ್ಳಿ’ ಎಂದು ನಗರಸಭೆ ಸದಸ್ಯ ಬಿ.ಎಂ.ಮುಬಾರಕ್‌ ಸಂಸದ ಮುನಿಸ್ವಾಮಿ ಅವರಿಗೆ ಕುಟುಕಿದರು.

ಇಲ್ಲಿ ಗುರುವಾರ ನಡೆದ ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರ ಪದಗ್ರಹಣ ಸಮಾರಂಭದ ನೇರ ವೀಕ್ಷಣೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಸಂಸದರು ಮಾಲೂರು ಶಾಸಕ ನಂಜೇಗೌಡ, ಕೆಜಿಎಫ್ ಶಾಸಕಿ ರೂಪಕಲಾ ಹಾಗೂ ಜಿಲ್ಲೆಯ ಸಹಕಾರಿ ಸಂಸ್ಥೆಗಳ ವಿರುದ್ಧ ಟೀಕೆ ಮಾಡುವುದಕ್ಕೆ ಸೀಮಿತವಾಗದೆ ಕ್ಷೇತ್ರದ ಅಭಿವೃದ್ಧಿಗೆ ಜವಾಬ್ದಾರಿಯುತವಾಗಿ ಕೆಲಸ ಮಾಡಿ’ ಎಂದು ಸಲಹೆ ನೀಡಿದರು.

‘ಕೆಚ್ಚೆದೆಯ ನಾಯಕ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿರುವುದರಿಂದ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು ಬಂದಿದೆ. ಬೂತ್ ಮಟ್ಟದ ಕಾರ್ಯಕರ್ತರು ಪಕ್ಷದ ಸೇನಾನಿಗಳಂತೆ. ಕಾರ್ಯಕರ್ತರು ಕಾಂಗ್ರೆಸ್‌ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಪಕ್ಷದಲ್ಲಿ ಮೇಧಾವಿಗಳಿದ್ದಾರೆ. ಸಿದ್ದರಾಮಯ್ಯ ಅವರು 5 ವರ್ಷ ಆಡಳಿತ ನಡೆಸಿ ಮೋದಿ ವಿರುದ್ಧ ಧ್ವನಿಯೆತ್ತಿ ನಿಂತವರು. ಒಂದು ಆರೋಪಕ್ಕೂ ಗುರಿಯಾಗದ ಪ್ರಬುದ್ಧ ರಾಜಕಾರಣಿ. ಶಿವಕುಮಾರ್‌ ಅವರನ್ನು ಮಾನಸಿಕವಾಗಿ ಕುಗ್ಗಿಸಲು ಬಿಜೆಪಿ ನಡೆಸಿದ ಎಲ್ಲಾ ಸಂಚಿಗೂ ಸೆಟೆದು ನಿಂತು ಪಕ್ಷದ ಸರ್ಕಾರ ಉಳಿಸಿದರು. ಮಲ್ಲಿಕಾರ್ಜುನ ಖರ್ಗೆಯವರು ಸಂಸತ್ತಿನಲ್ಲಿ ಬಿಜೆಪಿ ಪಾಲಿಗೆ ಸಿಂಹಸ್ವಪ್ನವಾಗಿದ್ದಾರೆ’ ಎಂದರು.

ಕಾಂಗ್ರೆಸ್ ಬಾವುಟ: ‘ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರ ನೇತೃತ್ವದಲ್ಲಿ ಮತ್ತೆ ಕಾಂಗ್ರೆಸ್ ಬಾವುಟ ಹಾರಿಸುತ್ತೇವೆ. ಇದು ಶತಸಿದ್ಧ. ಮುನಿಯಪ್ಪ ಅವರ ನಡೆ, ನುಡಿ, ಸರಳತೆಗೆ ಯಾರೂ ಸಾಟಿಯಿಲ್ಲ ಇದೀಗ ಬಿಜೆಪಿ ಸಂಸದರನ್ನು ಗೆಲ್ಲಿಸಿದ ಜನರಿಗೆ ಅರಿವಾಗಿದೆ’ ಎಂದರು.

‘ನೆಹರೂ ಕುಟುಂಬವು ದೇಶಕ್ಕೆ ಅಪಾರ ಕೊಡುಗೆ ನೀಡಿದೆ. ಅವರ ವಿರುದ್ಧ ತೇಜಸ್ವಿ ಸೂರ್ಯ, ಪ್ರತಾಪ್‌ ಸಿಂಹ ಅವರಂತಹವರು ಹೇಳಿಕೆ ನೀಡುತ್ತಾರೆ. ಭಾರತೀಯ ಸೇನೆಯನ್ನು ಒಂದು ಪಕ್ಷಕ್ಕೆ ಸೀಮಿತ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ದಾಖಲಿಸುತ್ತಾರೆ. ಸೇನೆ ಹಾಗೂ ಚುನಾವಣಾ ಆಯೋಗಗಳು ರಾಜಕೀಯ ಪಕ್ಷದ ಸ್ವತ್ತಲ್ಲ’ ಎಂದು ಕಿಡಿಕಾರಿದರು.

ಕಂಬಳಿ ವಿತರಣೆ: ನಿವೃತ್ತ ಯೋಧರು, ಹುತಾತ್ಮ ಯೋಧರ ಪತ್ನಿಯರನ್ನು ಸನ್ಮಾನಿಸಲಾಯಿತು. ಬಡ ಜನರಿಗೆ ಕಂಬಳಿ ವಿತರಿಸಲಾಯಿತು. ಡಿ.ಕೆ.ಶಿವಕುಮಾರ್‌ ಹಾಗೂ ರಾಜ್ಯಕ್ಕೆ ಒಳಿತು ಬಯಸಿ ಗಣಪತಿ ಹೋಮ, ಸರ್ವ ಧರ್ಮ ಪ್ರಾರ್ಥನೆ ನಡೆಸಲಾಯಿತು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶಪ್ಪ, ಕಾಂಗ್ರೆಸ್‌ ಮುಖಂಡರಾದ ಕಾಡುಗುರು ನಾಗಭೂಷಣ್, ಜೆ.ಕೆ.ಜಯರಾಮ್‌, ರಾಮಲಿಂಗಾರೆಡ್ಡಿ, ನಾರಾಯಣಸ್ವಾಮಿ, ನಗರಸಭೆ ಸದಸ್ಯರಾದ ನಾರಾಯಣಮ್ಮ, ಅಸ್ಲಂ, ಷಫಿ, ರಮೇಶ್, ಮಾಜಿ ಸದಸ್ಯರಾದ ರಮೇಶ್, ಬಾಬಾಜಾನ್, ನವಾಜ್ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು