ಕಾಂಗ್ರೆಸ್ ಪಕ್ಷದಿಂದ ಜೀವನ ಮಾಡುತ್ತಿಲ್ಲ

ಭಾನುವಾರ, ಮೇ 26, 2019
31 °C
ಮುಖಂಡರ ವಿರುದ್ಧ ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಗುಡುಗು

ಕಾಂಗ್ರೆಸ್ ಪಕ್ಷದಿಂದ ಜೀವನ ಮಾಡುತ್ತಿಲ್ಲ

Published:
Updated:

ಕೋಲಾರ: ‘ನನ್ನನ್ನು ಕಾಂಗ್ರೆಸ್‌ ಪಕ್ಷದಿಂದ ಅಮಾನತು ಮಾಡುವುದಾದರೆ ಮಾಡಲಿ, ನಾನು ಉಪ ವಿಭಾಗಾಧಿಕಾರಿ ಅಥವಾ ಜಿಲ್ಲಾಧಿಕಾರಿಯಂತೆ ಸರ್ಕಾರಿ ಉದ್ಯೋಗಿಯಲ್ಲ. ಕಾಂಗ್ರೆಸ್‌ ಪಕ್ಷ ಇಲ್ಲದಿದ್ದರೆ ಬಿಜೆಪಿ, ಜೆಡಿಎಸ್‌, ಬಿಎಸ್‌ಪಿ, ಕಮ್ಯೂನಿಸ್ಟ್‌ ಪಕ್ಷವಿದೆ’ ಎಂದು ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ ಗುಡುಗಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾಂಗ್ರೆಸ್‌ ಮುಖಂಡರು ಡಿ.ಸಿ ಅಥವಾ ಉಪ ವಿಭಾಗಾಧಿಕಾರಿಯನ್ನು ಕೆಲಸದಿಂದ ವಜಾಗೊಳಿಸಿದಂತೆ ನನ್ನನ್ನು ಪಕ್ಷದಿಂದ ಹೊರ ಕಳುಹಿಸುವ ಮಾತನಾಡುತ್ತಾರೆ. ನನ್ನನ್ನು ಕಾಂಗ್ರೆಸ್‌ನಿಂದ ವಜಾಗೊಳಿಸಿದರೆ ಏನಾಗುತ್ತದೆ?’ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್‌ ಪಕ್ಷದಿಂದ ನಾನು ಜೀವನ ಮಾಡುತ್ತಿಲ್ಲ. ಪಕ್ಷ ನಂಬಿಕೊಂಡರೆ ಹೊಟ್ಟೆ ತುಂಬುವುದಿಲ್ಲ. ನಾನು ಆಗಾಗ್ಗೆ ದೆಹಲಿಗೆ ಹೋಗುತ್ತಿರುತ್ತೇನೆ. ಟಿಕೆಟ್ ತಪ್ಪಿಸಲು ದೆಹಲಿಗೆ ಹೋಗಿದ್ದವರನ್ನು ಚುನಾವಣೆ ನಂತರ ನೋಡಿಕೊಳ್ಳುತ್ತೇನೆ ಎಂದು ಸಂಸದ ಮುನಿಯಪ್ಪ ದಮಕಿ ಹಾಕಿದ್ದಾರೆ. ನಾನು ಕೊತ್ತೂರು ಮಂಜು, ಫುಟ್‌ಪಾತ್‌ನಿಂದ ಬಂದವನಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಕೊತ್ತೂರು ಮಂಜು ಏನೆಂದು ಜನರಿಗೆ ಗೊತ್ತಿದೆ. ನಾನು ಯಾರಿಗೂ ಕೆಡುಕು ಬಯಸಿಲ್ಲ, ಮೋಸ ಮಾಡಿಲ್ಲ. ನನ್ನನ್ನು ಯಾರಾದರೂ ನೋಡಿಕೊಂಡರೆ ಆಮೇಲೆ ನಾನು ಅವರನ್ನು ಒಂದು ಕೈ ನೋಡಿಕೊಳ್ಳುತ್ತೇನೆ. ಮೇ 23ರ ದಿನವು ಮುನಿಯಪ್ಪಗೆ ತಕ್ಕ ಪಾಠ ಕಲಿಸುತ್ತದೆ. ಈ ಬಾರಿಯ ಚುನಾವಣೆಯಲ್ಲಿ ಅವರ ಸೋಲು ಕಟ್ಟಿಟ್ಟ ಬುತ್ತಿ’ ಎಂದು ವ್ಯಂಗ್ಯವಾಡಿದರು.

ರಾಜಕೀಯ ಬದಲಾವಣೆ: ‘ಲೋಕಸಭಾ ಚುನಾವಣೆ ಫಲಿತಾಂಶ ಸಂಬಂಧ ಸರ್ಕಾರಕ್ಕೆ 2 ಬಾರಿ ವರದಿ ಹೋಗಿದೆ. ಮತದಾನದ ದಿನ ಸಲ್ಲಿಕೆಯಾದ ವರದಿಯಲ್ಲಿ ಬಿಜೆಪಿ ಅಭ್ಯರ್ಥಿ ಸುಮಾರು 80 ಸಾವಿರ ಮತಗಳಿಂದ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಹೇಳಲಾಗಿದೆ. ಮತದಾನ ಮುಗಿದು 3 ದಿನದ ಬಳಿಕ ಸಲ್ಲಿಕೆಯಾದ ಮತ್ತೊಂದು ವರದಿಯಲ್ಲಿ ಗ್ರಾಮೀಣ ಭಾಗದಲ್ಲಿ ಶೇ 80ರಷ್ಟು ಮತಗಳು ಬಿಜೆಪಿ ಪರ ಚಲಾವಣೆಯಾಗಿವೆ ಎಂದು ಹೇಳಲಾಗಿದೆ. ಬಿಜೆಪಿ ಅಭ್ಯರ್ಥಿ ಸುಮಾರು 2 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಮೇ 23ರ ನಂತರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ. ಬಿ.ಎಸ್.ಯಡಿಯೂರಪ್ಪ ಏನು ಹೇಳಿದ್ದಾರೋ ಗೊತ್ತಿಲ್ಲ. ಲೋಕಸಭಾ ಚುನಾವಣಾ ಫಲಿತಾಂಶ ಘೋಷಣೆಯಾದ ನಂತರ ನನ್ನ ಮುಂದಿನ ರಾಜಕೀಯ ನಿಲುವು ತಿಳಿಸುತ್ತೇನೆ. ರಾಜಕೀಯದಲ್ಲಿದ್ದು ಚುನಾವಣೆಗೆ ಸ್ಪರ್ಧಿಸುವುದು ಇದ್ದದ್ದೆ. ಆದರೆ, ಎಲ್ಲಿ, ಏನು ಎಂಬುದನ್ನು ನಂತರ ನಿರ್ಧರಿಸುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ಗೆದ್ದೇ ಗೆಲ್ಲುತ್ತೇವೆ: ‘ನಾವು ಬಿಜೆಪಿ ಅಭ್ಯರ್ಥಿ ಪರ ಹಗಲುರಾತ್ರಿ ಕಷ್ಟಪಟ್ಟು ಕೆಲಸ ಮಾಡಿದ್ದೇವೆ. ಈ ಹಿಂದೆ ಜನರ ಮುಂದೆ ಹೋಗಿ ಪ್ರಚಾರ ಮಾಡುತ್ತಿದ್ದೆವು. ಈ ಬಾರಿ ಸಾರ್ವಜನಿಕರ ಸಭೆ ನಡೆಸಿ, ಪ್ರಮುಖರೊಂದಿಗೆ ರಹಸ್ಯವಾಗಿ ಮಾತನಾಡಿದ್ದೇವೆ. ಸಕಾರಾತ್ಮಕ ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ. ಮುನಿಯಪ್ಪ ಅವರಿಗೆ ತಮ್ಮ ಗೆಲುವಿನ ಬಗ್ಗೆ ಸ್ವಲ್ಪ ಹೆಚ್ಚು ವಿಶ್ವಾಸವಿರಬಹುದು. ನಮಗೆ ಕಡಿಮೆ ವಿಶ್ವಾಸವೇ ಇರಲಿ, 199 ಮತಗಳ ಅಂತರದಿಂದಾದರೂ ಗೆದ್ದೇ ಗೆಲ್ಲುತ್ತೇವೆ’ ಎಂದರು.

‘ನಾನು ಮುನಿಯಪ್ಪ ಅವರಿಗಿಂತ ದೊಡ್ಡ ದೈವ ಭಕ್ತ. ದೇವರಿಗೆ ಬೇಡದಿದ್ದರೂ ಚಿನ್ನದ ಕಿರೀಟ ಮಾಡಿಸಿ ಕೊಟ್ಟಿದ್ದೇನೆ. ದೇವರು ನನ್ನನ್ನು ಕಾಪಾಡದಿದ್ದರೂ ಜನರಿಗೆ ಒಳ್ಳೆಯದು ಮಾಡುತ್ತಾನೆ. ದೈವ ಭಕ್ತಿ ಇದ್ದವರು ಗೆಲ್ಲುತ್ತಾರೆಂದು ನಂಬಿರುವವರಿಗೆ ಒಳ್ಳೆಯದಾಗಲಿ’ ಎಂದು ಪರೋಕ್ಷವಾಗಿ ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿಗೆ ತಿರುಗೇಟು ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !