ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವು ನೋವಿನಲ್ಲಿ ರಾಜಕಾರಣ ಬೇಡ: ಶಾಸಕ ರಮೇಶ್‌ಕುಮಾರ್‌

ಮಡಿಲು ತುಂಬುವ ಕಾರ್ಯಕ್ರಮದಲ್ಲಿ ಶಾಸಕ ರಮೇಶ್‌ಕುಮಾರ್‌ ಹೇಳಿಕೆ
Last Updated 21 ಜೂನ್ 2021, 14:06 IST
ಅಕ್ಷರ ಗಾತ್ರ

ಕೋಲಾರ: ‘ಸಾವು, ನೋವು, ಸಂಕಟದ ಸಮಯದಲ್ಲಿ ರಾಜಕಾರಣ ಮಾಡಿಕೊಂಡಿದ್ದರೆ ನಾವು ಮೃಗಗಳಿಗಿಂತ ಕಡೆ. ಕೋವಿಡ್‌ ಸಂಕಷ್ಟದಲ್ಲಿ ಜಾತಿ, ಪಕ್ಷ ಮರೆತು ಸಮಾಜ ಉಳಿಸುವ ಕೆಲಸಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್‌ ಮನವಿ ಮಾಡಿದರು.

ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೊರೊನಾ ವಾರಿಯರ್ಸ್‌ಗಳಿಗೆ ದಿನಸಿ, ಸೀರೆ, ಅರಿಶಿಣ, ಕುಂಕುಮದೊಂದಿಗೆ ಮಡಿಲು ತುಂಬಿ ಮಾತನಾಡಿದರು.

‘ಕೋವಿಡ್ 2ನೇ ಅಲೆಯಲ್ಲಿ ಅನುಭವಿಸಿದ ನೋವು ಮರೆಯಲಾಗದು. ಆಪ್ತರನ್ನು ಕಳೆದುಕೊಂಡಿದ್ದೇವೆ. ನಾನೊಬ್ಬ ಶಾಸಕ ಎನಿಸಿಕೊಳ್ಳಲು ಅಸಹ್ಯಪಡುವ ಪರಿಸ್ಥಿತಿ ಎದುರಾಯಿತು. ನನಗೆ ಮತ ನೀಡಿದ ಜನ ಸಾಯುತ್ತಿದ್ದರೆ ಅವರಿಗೆ ಕನಿಷ್ಠ ಬೆಡ್, ಆಮ್ಲಜನಕ ಕೊಡಿಸಲಾಗದಷ್ಟು ಅಸಹಾಯಕನಾದೆ’ ಎಂದು ಭಾವುಕರಾಗಿ ನುಡಿದರು.

‘ಸಂಕಷ್ಟದ ಪರಿಸ್ಥಿತಿಯಲ್ಲಿ ರಾಜಕಾರಣ ಏಕೆ ಬೇಕು. ಜನರನ್ನು ಉಳಿಸಲು ಸಂಕಲ್ಪ ಮಾಡಬೇಕಿದೆ. ಸಾವಿನ ಮನೆಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾದರೆ ದೇವರೂ ಮೆಚ್ಚುವುದಿಲ್ಲ. ತಜ್ಞರು ಕೋವಿಡ್ 3ನೇ ಅಲೆ ಬರುವ ಮುನ್ಸೂಚನೆ ನೀಡಿರುವುದರಿಂದ ಜನರನ್ನು ಕಾಪಾಡಲು ಸಾಕಷ್ಟು ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಆಸ್ಪತ್ರೆ ಸನ್ನದ್ಧ: ‘ಕೋವಿಡ್‌ ಮೊದಲ ಹಾಗೂ 2ನೇ ಅಲೆಯ ಹೊಡೆತಕ್ಕೆ ಜೀವನ, ಪ್ರಾಣ ಎರಡೂ ಲೆಕ್ಕಕ್ಕೆ ಸಿಗದಂತೆ ತತ್ತರಿಸಿ ಹೋಗಿವೆ. ಭವಿಷ್ಯದಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ಪ್ರಕ್ರಿಯೆಗಳನ್ನು ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಮಾಡಲಾಗಿದೆ. ಆಸ್ಪತ್ರೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ’ ಎಂದು ವಿವರಿಸಿದರು.

‘ಕೊರೊನಾ ಸಮಯದಲ್ಲಿ ಪ್ರಾಣದ ಹಂಗು ತೊರೆದು ಸಹಾಯ ಮಾಡಿದವರ ಮಧ್ಯೆ ಇದನ್ನೇ ಬಂಡವಾಳ ಮಾಡಿಕೊಂಡವರು ಇದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗಡೆ ಔಷಧ ತೆಗೆದುಕೊಳ್ಳುವಂತೆ ಚೀಟಿ ಬರೆದು ಕೊಡಬಾರದೆಂದು ಹೆಚ್ಚು ಔಷಧ ಮಾತ್ರೆಗಳನ್ನು ದಾಸ್ತಾನು ಮಾಡಲಾಗಿದೆ. ಔಷಧಿ ಖರೀದಿಗೆ ಚೀಟಿ ಬರೆದು ಕೊಟ್ಟರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಡೋಲಾಯಮಾನ: ‘ಕೋವಿಡ್ ಮಹಾಮಾರಿಯಿಂದ ಆರ್ಥಿಕ ಪರಿಸ್ಥಿತಿ ಡೋಲಾಯಮಾನವಾಗಿದೆ. ಕಂಡು ಕೇಳದ ಘಟನೆ ಜರುಗಿವೆ. ಹಿಂದಿನ ಕಾಲದ ಸಾಂಕ್ರಾಮಿಕ ರೋಗಗಳು ಶಮನವಾಗಿವೆ. ಅದೇ ರೀತಿ ಕೋವಿಡ್‌ ರೋಗವು ನಿಯಂತ್ರಣಕ್ಕೆ ಬರುವುದು ನಿಶ್ಚಿತ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ವಿಶ್ವಾಸ ವ್ಯಕ್ತಪಡಿಸಿದರು.

‘ಜೀವದ ಹಂಗು ತೊರೆದು ಸಮುದಾಯದ ಮಧ್ಯೆ ಇದ್ದು ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರ ಸೇವೆಯನ್ನು ಜನ ಮರೆಯಲಾರರು. ಜೀವ ರಕ್ಷಣೆಯಲ್ಲಿ ದುಡಿದ ಸೇನಾನಿಗಳ ಶ್ರಮ ಅನನ್ಯ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಸ್ಮರಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ವೆಂಕಟಮುನಿಯಪ್ಪ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮಣ್ಣ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಟಿ.ವಿ.ಕೃಷ್ಣಪ್ಪ, ಸುಗಟೂರು ಎಸ್‍ಎಫ್‌ಸಿಎಸ್‌ ಅಧ್ಯಕ್ಷ ಟಿ.ವಿ.ತಿಮ್ಮರಾಯಪ್ಪ, ಸುಗಟೂರು ಗ್ರಾ.ಪಂ ಅಧ್ಯಕ್ಷೆ ವೆಂಕಟಲಕ್ಷಮ್ಮ, ಉಪಾಧ್ಯಕ್ಷೆ ಮುನಿರತಮ್ಮ, ತೊಟ್ಲಿ ಗ್ರಾ.ಪಂ ಅಧ್ಯಕ್ಷೆ ಆರ್.ಆಶಾ, ಉಪಾಧ್ಯಕ್ಷೆ ಸರಸ್ವತಮ್ಮ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT