ಮಂಗಳವಾರ, ಅಕ್ಟೋಬರ್ 15, 2019
26 °C
ಕೇಂದ್ರದ ಕ್ರಮ ಖಂಡಿಸಿ ಸಂಸದರ ನಿವಾಸಕ್ಕೆ ಮುತ್ತಿಗೆ: ಪ್ರತಿಭಟನೆ

ವಿದೇಶಿ ಹೈನು ಉತ್ಪನ್ನ ಆಮದಿಗೆ ವಿರೋಧ

Published:
Updated:
Prajavani

ಕೋಲಾರ: ಹೈನು ಉತ್ಪನ್ನಗಳನ್ನು ಏಷ್ಯಾ– ಪೆಸಿಫಿಕ್‌ ರಾಷ್ಟ್ರಗಳ ಮುಕ್ತ ವ್ಯಾಪಾರ ಒಪ್ಪಂದದ ವ್ಯಾಪ್ತಿಗೆ ತರಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಗುರುವಾರ ಸಂಸದ ಎಸ್‌.ಮುನಿಸ್ವಾಮಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.

ರಾಸುಗಳೊಂದಿಗೆ ಟೇಕಲ್‌ ರಸ್ತೆಯಿಂದ ಮೆರವಣಿಗೆ ಬಂದ ಪ್ರತಿಭಟನಾಕಾರರು, ‘ಕೇಂದ್ರವು ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ವಿದೇಶಿ ಹೈನು ಉತ್ಪನ್ನಗಳಿಗೆ ತೆರಿಗೆರಹಿತ ಮುಕ್ತ ಮಾರುಕಟ್ಟೆ ಕಲ್ಪಿಸಿ ದೇಶದ ಹೈನೋದ್ಯಮಕ್ಕೆ ಮರಣ ಶಾಸನ ಬರೆಯಲು ಹೊರಟಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರೈತರು ಕೃಷಿಯ ಜತೆ ಉಪ ಕಸುಬಾಗಿ ಹೈನೋದ್ಯಮ ನಿರ್ವಹಣೆ ಮಾಡುತ್ತಿದ್ದಾರೆ. ಹೈನೋದ್ಯಮವು ರೈತರ ಜೀವನಾಡಿಯಾಗಿದೆ. ಮೇವು ಹಾಗೂ ನೀರಿನ ಸಮಸ್ಯೆ ನಡುವೆಯೂ ರೈತರು ರಾಸುಗಳನ್ನು ಸಾಕಿ ಬದುಕು ಸಾಗಿಸುತ್ತಿದ್ದಾರೆ. ವಿದೇಶಿ ಹೈನು ಉತ್ಪನ್ನಗಳನ್ನು ದೇಶಕ್ಕೆ ಆಮದು ಮಾಡಿಕೊಂಡರೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಹೇಳಿದರು.

‘ಜಿಲ್ಲೆ ಸೇರಿದಂತೆ ದೇಶದೆಲ್ಲೆಡೆ ಹಾಲಿನ ಉತ್ಪಾದನೆ ಹೆಚ್ಚಿದೆ. ಆದರೆ, ಉತ್ಪಾದನೆಗೆ ತಕ್ಕಂತೆ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಮಾರುಕಟ್ಟೆಯಿಲ್ಲ. ಈ ಕಾರಣಕ್ಕೆ ಸಾಕಷ್ಟು ರಾಜ್ಯಗಳಲ್ಲಿ ವಾರದಲ್ಲಿ ಒಂದು ದಿನ ಹಾಲು ಖರೀದಿ ಮಾಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿದೇಶಿ ಹೈನು ಉತ್ಪನ್ನಗಳಿಗೆ ಮುಕ್ತ ಮಾರುಕಟ್ಟೆ ಕಲ್ಪಿಸಿದರೆ ದೇಶದ ಹೈನು ಉತ್ಪನ್ನಗಳಿಗೆ ಬೇಡಿಕೆ ಕುಸಿದು ರೈತರ ಬೀದಿ ಪಾಲಾಗುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

ಕಾಳಜಿಯಿಲ್ಲ: ‘ಕೇಂದ್ರಕ್ಕೆ ರೈತರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ. ವಿದೇಶ ಹೈನು ಉತ್ಪನ್ನ ಆಮದಿನ ಸಾಧಕ ಬಾಧಕದ ಬಗ್ಗೆ ಚರ್ಚೆ ನಡೆಸದೆ ತರಾತುರಿಯಲ್ಲಿ ನಿರ್ಣಯ ಕೈಗೊಂಡಿದೆ. ಕೇಂದ್ರಕ್ಕೆ ರೈತರ ಹಿತಕ್ಕಿಂತ ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಬಂಡವಾಳಶಾಹಿಗಳ ಹಿತವೇ ಮುಖ್ಯವಾಗಿದೆ’ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

‘ಹೈನು ಉತ್ಪನ್ನಗಳನ್ನು ಮುಕ್ತ ವ್ಯಾಪಾರ ಒಪ್ಪಂದದ ವ್ಯಾಪ್ತಿಗೆ ತರುವ ನಿರ್ಧಾರ ಕೈಬಿಡಬೇಕು. ಸೂಕ್ಷ್ಮ ವಲಯಗಳಾದ ಕೃಷಿ ಮತ್ತು ಹೈನೋದ್ಯಮವನ್ನು ಮುಕ್ತ ವ್ಯಾಪಾರ ಒಪ್ಪಂದಿಂದ ದೂರವಿಡಬೇಕು. ಈ ಸಂಬಂಧ ಸಂಸದರು ಅಧಿವೇಶನದಲ್ಲಿ ಧ್ವನಿ ಎತ್ತಬೇಕು. ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಸಂಸದರ ಸಭೆ ಕರೆ ಕರೆದು ಸಮಗ್ರ ಚರ್ಚೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿ, ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಹರಿಕುಮಾರ್, ಮಾಲೂರು ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶ್, ಸದಸ್ಯರಾದ ನಾಗರಾಜಗೌಡ, ಲಕ್ಷಮ್ಮ, ರತ್ನಮ್ಮ, ತಿಮ್ಮಣ್ಣ, ವೆಂಕಟೇಶಪ್ಪ ಪಾಲ್ಗೊಂಡಿದ್ದರು.

Post Comments (+)